ಗೋಣಿಕೊಪ್ಪ ವರದಿ, ಜು. 18: ಮಾಯಮುಡಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಕೃಷಿಕರಲ್ಲಿ ನೋವುಂಟುಮಾಡಿದೆ. ಹಗಲು ರಾತ್ರಿಯನ್ನದೆ ಗದ್ದೆ, ತೋಟಗಳಿಗೆ ಲಗ್ಗೆ ಇಡುತ್ತಿರುವ ಆನೆಗಳು ಬೆಳೆ ನಾಶ ಮಾಡುತ್ತಿವೆ. ಸುಮಾರು 15 ಆನೆಗಳ ಹಿಂಡು ನಿರಂತರ ದಾಳಿ ಮಾಡುತ್ತಿರುವುದು ಅರಣ್ಯ ಇಲಾಖೆ ಸಿಬ್ಬಂದಿಯ ನಿದ್ದೆಗೆಡಿಸುತ್ತಿವೆ.
ಶುಕ್ರವಾರ ರಾತ್ರಿ ಧನುಗಾಲ, ರುದ್ರಬೀಡು ಗ್ರಾಮಗಳಲ್ಲಿ ದಾಳಿ ಮಾಡಿವೆ. ಅಲ್ಲಿನ ಎಸ್.ಎಸ್. ಸುಬ್ಬಯ್ಯ, ಬಾನಂಡ ಪ್ರತ್ವಿ, ದಾದಾ ಎಂಬವರ ತೋಟದಲ್ಲಿ ಬೆಳೆ ನಾಶ ಮಾಡಿವೆ.
ತೋಟದಲ್ಲಿನ ಕಾಫಿ ಗಿಡಗಳ ರೆಂಬೆಗಳು ಹಿಂಡು ಆನೆಗಳ ಸಂಚಾರದಿಂದ ಮುರಿದು ಬಿದ್ದಿವೆ. ಕಾಫಿ ಬೀಜಗಳು ನಾಶವಾಗಿವೆ. ಬಾಳೆ ಗಿಡಗಳನ್ನು ತಿಂದಿವೆ. ಹಗಲು ಕೂಡ ಆನೆಗಳು ದರ್ಶನ ಮಾಡುವಂತಾಗಿದೆ. ಗ್ರಾಮದಲ್ಲಿ ಭಯ ಉಂಟಾಗಿದೆ.
ಶನಿವಾರ ಧನುಗಾಲ ಗ್ರಾಮದಲ್ಲಿ 11 ಆನೆಗಳು ಅರಣ್ಯ ಇಲಾಖೆ ಕಾರ್ಯಾಚರಣೆ ಸಂದರ್ಭ ಪ್ರತ್ಯಕ್ಷವಾಯಿತು. ಮುಖ್ಯರಸ್ತೆಯ ತೋಟದಲ್ಲಿ ಸೇರಿಕೊಂಡು ರಸ್ತೆ ದಾಟುವ ಪ್ರಯತ್ನದಲ್ಲಿದ್ದವು. ಕಾರ್ಯಾಚರಣೆ ತಂಡ ರಸ್ತೆಗೆ ಇಳಿಯದಂತೆ ತಡೆ ಹಿಡಿದು, ಪ್ರಯಾಣಿಕರಿಗೆ ತೊಂದರೆಯಾಗದಂತೆ ಕಾರ್ಯಾಚರಣೆ ನಡೆಸಿತು. ಲಾಕ್‍ಡೌನ್ ಕಾರಣದಿಂದಾಗಿ ವಾಹನ ಸಂಚಾರ ಕಡಿಮೆ ಇದ್ದ ಕಾರಣ ಕಾರ್ಯಾಚರಣೆಗೂ ತೊಡಕಾಗಲಿಲ್ಲ. ಉಳಿದ 4 ಆನೆಗಳು ಎಲ್ಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲದೆ ಜನರಲ್ಲಿ ಆತಂಕ ಹೆಚ್ಚಾಗಿದೆ. -ಸುದ್ದಿಪುತ್ರ