ಮಾತ್ಸ್ಯದೇಶ ಇತಿ ಪ್ರೋಕ್ತಂ ಯದ್ವಿತೀಯಾಭಿಧಾನಕಂ

ತತ್ಪ್ರಕಾರದ್ವಯಂ ಪ್ರಾಪ್ತಂ ತಸ್ಯ ದೇಶಸ್ಯ ಪಾವನಂ

ಎರಡನೆಯದಾದ ಮಾತ್ಸ್ಯದೇಶವೆಂಬ ಪವಿತ್ರವಾದ ಹೆಸರು ಈ ದೇಶಕ್ಕೆ ಬರಲು ಎರಡು ಕಾರಣಗಳಿವೆ. ಎಲೈ ಋಷಿಗಳೇ, ಸರ್ವೋತ್ತಮವೂ, ಶುಭಪ್ರದವೂ ಆದ ಈ ದೇಶದ ಪೂರ್ವಭಾಗ ದಲ್ಲಿ ಪುಣ್ಯದ ಗಣಿಯೂ, ಪ್ರಾಚೀನವೂ, ಮುನಿಗಳಿಂದ ಸೇವಿತವೂ, ಉನ್ನತವೂ ಆದ ಅರ್ಧ ಚಂದ್ರವೆಂಬ ಬೃಹತ್ ಪರ್ವತವಿದೆ. ಅದರ ಸನಿಹದಲ್ಲಿ ಭುವನತ್ರಯವನ್ನು ಪಾವನ ಮಾಡುವ, ಸಪ್ತರ್ಷಿ ಗಳ ಗುಂಪಿನಿಂದ ವ್ಯಾಪ್ತವಾದ, ಸಿದ್ಧ ಸಮೂಹದಿಂದ ಕೂಡಿದ ಹಗಲಿರುಳು ಯಾವತ್ತೂ ದೇವಾಸುರರ ಗುಂಪಿನಿಂದ ಹೊಗಳಲ್ಪಟ್ಟ ಒಂದು ತೀರ್ಥವಿದೆ. ಆ ಶ್ರೇಷ್ಠ ವಾದ ತೀರ್ಥದಲ್ಲಿ ಪೂಜ್ಯನೂ, ಲಕ್ಷ್ಮೀಪತಿಯೂ, ಮನೋಹರನೂ ಆದ ಶ್ರೀಮನ್ನಾರಾಯಣನು ಕಾರ್ಯೋದ್ದೇಶವೊಂದರ ನಿಮಿತ್ತ ಮತ್ಸ್ಯರೂಪವನ್ನು ತಾಳಿ ಅನೇಕ ಸಂವತ್ಸರಗಳವರೆಗೆ ನಾಶ ರಹಿತನೂ, ಪರಮೇಶ್ವರನೂ ಆದ ರುದ್ರನನ್ನು ಪೂಜಿಸಿದನು. ಆ ತೀರ್ಥದಲ್ಲಿದ್ದ ವಿಷ್ಣುರೂಪಿಯಾದ ಮೀನಿನಿಂದ ಪೂಜಿತನಾದ ಪರಮೇಶ್ವರನು ಹರ್ಷಚಿತ್ತ ನಾದನು. ಮತ್ಸ್ಯರೂಪೀ ವಿಷ್ಣುವಿಗೆ ಸಮಸ್ತ ಇಷ್ಟಾರ್ಥಗಳನ್ನೂ ನೀಡಿ ದನು. ಆ ದಿನದಿಂದ ಮೊದಲ್ಗೊಂಡು ಆ ತೀರ್ಥದಲ್ಲಿರುವ ಮೀನುಗಳಿಗೆ ಚಿರಂಜೀವತ್ವವನ್ನು ನೀಡಿದನು. ಅತಿ ಪಾವನವಾದ ಆ ದೇಶದಲ್ಲಿ ಮತ್ಸ್ಯ ರೂಪಿಯಾದ ವಿಷ್ಣುವು ತನ್ನನ್ನು ಪೂಜಿಸಿದ್ದರಿಂದಲೂ, ಮೀನುಗಳು ತನ್ನ ಅನುಗ್ರಹದಿಂದ ಚಿರಂಜೀವಿ ಗಳಾದುದರಿಂದಲೂ, ತನ್ನ ಈ ದೇಶವನ್ನು ಸಂತೋಷ ದಿಂದ ಆಶ್ರಯಿಸಿರುವದರಿಂದಲೂ ಆ ದೇಶವು ಮಾತ್ಸ್ಯ ದೇಶವೆಂದು ಪ್ರಸಿದ್ಧಿ ಪಡೆಯಲಿ ಎಂದು ಶಿವನು ಹರಸಿದನು. ಅಂದಿನಿಂದ ಜನರು ಈ ಪ್ರದೇಶವನ್ನು ಮಾತ್ಸ್ಯದೇಶವೆಂದು ಕರೆಯುವರು.

ಎಲೈ ಮುನೀಂದ್ರರೇ, ಈ ದೇಶಕ್ಕೆ ಈ ಹೆಸರು ಬರಲು ಇನ್ನೊಂದು ಕಾರಣವೂ ಇದೆ. ಸಾವಧಾನದಿಂದ ಕೇಳಿ: ಅದನ್ನು ಹೇಳುವೆನು ಎಂದು ಸೂತ ಪುರಾಣಿಕನು ಹೇಳಲು ಪಕ್ರಮಿಸುತ್ತಾನೆ:-ಪ್ರಖ್ಯಾತವಾದ ಮಾತ್ಸ್ಯದೇಶದಲ್ಲಿ ಧಾರ್ಮಿಕನೂ, ಸತ್ಯವಂತನೂ, ಮಾಧವ ಹಾಗೂ ಈಶ್ವರ ಭಕ್ತನೂ ಆದ ಸಿದ್ಧಾರ್ಥನೆಂಬ ರಾಜನಿದ್ದನು. ಆತನು ತನ್ನ ರಾಜ್ಯದಲ್ಲಿ ಚತುರಂಗ ಬಲದಿಂದ ಕೂಡಿದವನೂ, ಪ್ರಚಂಡ ಪರಾಕ್ರಮಿಯೂ ಆಗಿದ್ದನು. ಆತನಿಗೆ ಅತಿ ಚತುರ ಸ್ವಭಾವದ ನಾಲ್ಕು ಮಂದಿ ಮಕ್ಕಳಿದ್ದರು. ಅವರೆಲ್ಲರೂ ಅರವತ್ತನಾಲ್ಕು ವಿದ್ಯೆಗಳನ್ನು ಬಲ್ಲವರಾಗಿದ್ದರು. ಮಾತಾಪಿತೃಗಳನ್ನು ಪೂಜಿಸುವವರಾಗಿದ್ದರು. ಅವರಲ್ಲಿ ಮೊದಲನೆಯವನು ರಾಜ್ಯಾಡಳಿತ ನಡೆಸುವ ವಿಚಾರದಲ್ಲಿ ಆಸಕ್ತಿ ಹೊಂದಿದ್ದನು. ಎರಡನೆಯವನು ಭೋಗಾಭಿಲಾಷಿಯಾಗಿದ್ದನು. ಮೂರನೆಯವನು ಜ್ಞಾನಾಪೇಕ್ಷಿಯಾಗಿ ಯಾಗಿದ್ದನು. ನಾಲ್ಕನೆಯವನು ಬಲು ಬುದ್ಧಿವಂತನಾಗಿ, ತಪಸ್ಸು, ಯಾತ್ರೆ, ರಾಜ್ಯಭೋಗ-ಇವುಗಳಲ್ಲಿ ಆಸಕ್ತಿಯುಳ್ಳವನಾಗಿದ್ದನು. ಈತನೇ ಚಂದ್ರವರ್ಮನೆಂಬ ಕಿರಿಯ ರಾಜಕುಮಾರನು. ಈತನು ರಾಜ ಲಕ್ಷಣಗಳಿಂದೊಪ್ಪುವ ಅಂಗ ಸೌಷ್ಠವ ಹೊಂದಿದ್ದನು. ಪ್ರಕಾಶಮಾನ ವಾದ ತೇಜಸ್ಸಿನಿಂದೊಪ್ಪ್ಪುತ್ತಾ ಪ್ರತಾಪಶಾಲಿಯಾಗಿದ್ದನು. ಒಂದು ದಿನ ಆ ಯುವರಾಜನು ಯಾತ್ರೆ ಮಾಡಲೆಳಸಿ, ತನ್ನ ತಂದೆಯ ಅಪ್ಪಣೆಯನ್ನು ಹೊಂದಿ ಸೈನಿಕರೊಡನೆ ದೇಶದಿಂದ ಹೊರಟನು. ಜಗನ್ನಾಥಕ್ಕೆ ಬಂದು ಲಕ್ಷ್ಮೀಪತಿಗೆ ನಮಿಸಿದನು.ಅವನನ್ನು ಸ್ತುತಿಸಿ ಅಲ್ಲಿಂದ ಹೊರಟ ದೈವಭಕ್ತನಾದ ಆ ರಾಜನು ಕಾಂಚಿಗೆ ತೆರಳಿದನು. ಜೀವನ್ಮುಕ್ತಿಪುರವೆಂಬ ಚಿದಂಬರಕ್ಕೆ ಹೋಗಿ ಶ್ರೀರಂಗಕ್ಕೆ ಬಂದನು. ಅಲ್ಲಿ ಶ್ರೀರಂಗನಾಥನಿಗೆ ಪ್ರಣಾಮ ಮಾಡಿ ಧನುಷ್ಕೋಟಿಗೆ ತೆರಳಿದನು.ಅಲ್ಲಿ ವಿಧಿಪ್ರಕಾರವಾಗಿ ಸ್ನಾನ ಮಾಡಿದನು. ಬಳಿಕ ಸರ್ವಾಭೀಷ್ಟದಾಯಕನೂ, ಮಂಗಳಕರನೂ ಆದ ಪರಮೇಶ್ವರನನ್ನು ದರ್ಶಿಸಿ ಆರಾಧಿಸಿದನು. ಅಲ್ಲಿಂದ ಮುಂದೆ ಶ್ರೀಮನ್ನಾರಾಯಣನು ಮಹಾಶೇಷನ ಹೆಡೆಯ ಮಧ್ಯದಲ್ಲಿ ಪವಡಿಸಿರುವ ಅನಂತಶಯನಕ್ಕೆ ತೆರಳಿದನು. ಅಲ್ಲಿ ಅನಂತ ಪದ್ಮನಾಭನನ್ನು ವಿಧಿವತ್ತಾಗಿ ಪೂಜಿಸಿದನು. ಬಳಿಕ ಸಹ್ಯಾದ್ರಿಗೆ ಬಂದನು. ಅಲ್ಲಿಗೆ ತಲುಪಿದ ಬಳಿಕ ಅದುವರೆಗೂ ತನ್ನೊಂದಿಗೆ ಬಂದಿದ್ದ ತನ್ನ ಸಮಸ್ತ ಸೈನ್ಯವನ್ನೂ ಸ್ವದೇಶಕ್ಕೆ ಹಿಂತಿರುಗುವಂತೆ ಆದೇಶಿಸಿ ಕಳುಹಿಸಿದನು.

ಬಹುಬ್ರಹ್ಮರ್ಷಿಭೂಯಿಷ್ಠೇ ಬಹುತೀರ್ಥಸಮನ್ವಿತೇ

ಬಹುಪಾದಪಸಂಕೀರ್ಣೇ ಬಹುಧಾತುಸುಮಂಡಿತೇ

ತತ್ರಸ್ಥಿತ್ವಾಬಹೂನ್ವರ್ಷಾನ್ ದುರ್ಗಾಮಾರಾಧ್ಯೇ ಭಕ್ತಿಮಾನ್

ಪ್ರತ್ಯಕ್ಷೀಕೃತ್ಯ ದುರ್ಗಾಂ ತು ಭಕ್ತ್ಯಾ ಪರಮಯಾ ಮುದಾ

ಅನೇಕ ಬ್ರಹ್ಮರ್ಷಿಗಳಿಂದ ತುಂಬಿದ, ಬಹುತೀರ್ಥಗಳುಳ್ಳ, ವೈವಿಧ್ಯಮಯ ಮರಗಳಿಂದ ದಟ್ಟವಾದ ವಿವಿಧ ಧಾತುಗಳಿಂದ ಅಲಂಕೃತವಾದ ಆ ಬ್ರಹ್ಮಗಿರಿ ಪರ್ವತದಲ್ಲಿ ಬಹು ವರ್ಷಗಳ ಕಾಲ ರಾಜನು ವಾಸವಿದ್ದನು. ಅತ್ಯಂತ ಆಕರ್ಷಕ ಕಾನನದ ನಡುವೆ ಕುಳಿತು ಮಾತೆ ಪಾರ್ವತಿಯನ್ನು ನಿರಂತರ ವಾಗಿ ಭಕ್ತಿಯಿಂದ ಆರಾಧಿಸಿದನು. ಆತನ ಸೇವೆಯಿಂದ ಸುಪ್ರಸನ್ನಳಾದ ದುರ್ಗಾ ಸ್ವರೂಪಿಣಿಯಾದ ಭಗವತಿ ಪಾರ್ವತಿಯು ತನ್ನ ಭಕ್ತನ ಮುಂದೆ ಪ್ರತ್ಯಕ್ಷಳಾದಳು. ಗಂಧದಿಂದಲೂ, ಧೂಪದೀಪಾದಿಗಳಿಂದಲೂ, ಸ್ತೋತ್ರಗಳಿಂದಲೂ ದುರ್ಗಾ ಸ್ವರೂಪಿಣಿ ಯಾದ ಮಾತೆ ಪಾರ್ವತಿಯನ್ನು ರಾಜಕುವರ ಚಂದ್ರವರ್ಮನು ಸಂತಸಪಡಿಸಿದನು.

ತೇನ ತೃಪ್ತಾ ಮಹಾದುರ್ಗಾ ಮಹಾಮಾಯಾ ಮಹೇಶ್ವರೀ

ಕಾರುಣ್ಯಸಾಂದ್ರಯಾ ದೃಷ್ವಾ ಮಂದಹಾಸವಿಶಿಷ್ಟಯಾ

ವತ್ಸ ವತ್ಸ ಮಹಾಭಾಗ ಪಾರ್ಥಿವೇಂದ್ರ ಕುಲೋದ್ಭವ

ಅದ್ಯತ್ವತ್ತಪಸಾ ತೃಪ್ತಾ ವರದಾಹಂ ಸಮಾಗತಾ

ಯದ್ಯದದ್ಯ ತವಾಭೀಷ್ಟಂ ಮತ್ತಸ್ತತ್ಪ್ರಾಥ್ರ್ಯತಾಂ ದ್ರುತಂ

ಮಹಾಮಾಯೆಯೂ, ಈಶ್ವರನ ಪತ್ನಿಯೂ ಆದ ಪಾರ್ವತಿಯು ತೃಪ್ತಳಾಗಿ ಮುಗುಳುನಗೆ ಬೀರಿದಳು. ದಯಾದೃಷ್ಟಿ ಹರಿಸಿ ನುಡಿದಳು. “ಮಹಾಭಾಗ್ಯಶಾಲಿಯೂ ರಾಜೇಂದ್ರ ಕುಲ ಸಂಭೂತನೂ ಆದ ಮಗನೇ, ನಿನ್ನ ತಪಸ್ಸಿಗೆ ನಾನು ಸಂತೋಷಪಟ್ಟು ಈಗ ವರಗಳನ್ನೀಯಲು ಬಂದಿರುವೆನು. ನಿನಗೆ ಬೇಕಾದುದೆಲ್ಲವನ್ನೂ ಶೀಘ್ರವಾಗಿ ಬೇಡಿಕೋ” ಎಂದು ಹೇಳಿದಳು. ಚಂದ್ರವರ್ಮನು ಮಾತೆಯಲ್ಲಿ ಹೀಗೆ ವರ ಕೇಳಿದನು:-ಎಲೈ ಪರ್ವತ ನಂದಿನಿಯೇ, ನನ್ನ ಈಗಿನ ರಾಜ್ಯಕ್ಕಿಂತ ಉತ್ತಮವಾದ ಇನ್ನೊಂದು ರಾಜ್ಯವನ್ನು ದಯಪಾಲಿಸು. ಸ್ವಜಾತೀಯಳೂ, ಉತ್ತಮಳೂ ಆದ ಸ್ತ್ರೀಯೊಂದಿಗಿನ ಸಂಪರ್ಕದಿಂದ ಮಕ್ಕಳನ್ನು ಒದಗಿಸು. ಯುದ್ಧದಲ್ಲಿ ಶತ್ರುಗಳನ್ನು ಪರಾಜಯಗೊಳಿಸುವ ಶಕ್ತಿಯನ್ನು ಕಲ್ಪಿಸು, ಶ್ರೇಷ್ಠವಾದ ನಿನ್ನ ಮೇಲಿನ ದೈವೀಭಕ್ತಿಯನ್ನು ಹೆಚ್ಚಿಸು ಹಾಗೂ ಅಂತ್ಯದಲ್ಲಿ ದೇಹಾವಸಾನದ ಬಳಿಕ ಶಿವ ಸಾಯುಜ್ಯವನ್ನು ನನಗೆ ದಯಪಾಲಿಸು” ಎಂದು ಬೇಡಿಕೊಳ್ಳುತ್ತಾನೆ. ಹೀಗೆ ವರಗಳನ್ನು ಬೇಡಿದ ರಾಜಕುವರನಿಗೆ ಸರ್ವಜ್ಞಳೂ, ಸುಸ್ಮಿತೆಯೂ,