ಸೋಮವಾರಪೇಟೆ,ಜು.18: ಕೊಡವರನ್ನು ಬುಡಕಟ್ಟು ಜನಾಂಗ ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್, ಆಯೋಗದ ಮುಂದಿಟ್ಟಿರುವ ಬೇಡಿಕೆ ಹಾಸ್ಯಾಸ್ಪದ ಎಂದು ಸಿಪಿಐಎಂಎಲ್ ಪಕ್ಷ ಆರೋಪಿಸಿದ್ದು, ಈ ಬಗ್ಗೆ ಪಕ್ಷದ ವತಿಯಿಂದ ನ್ಯಾ. ನಾಗಮೋಹನ್ ದಾಸ್ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಪಿಐಎಂಎಲ್ ಪಕ್ಷದ ರಾಜ್ಯ ಸಮಿತಿ ಸದಸ್ಯ ಡಿ.ಎಸ್. ನಿರ್ವಾಣಪ್ಪ, ಕೊಡಗಿನ ಕೆಲ ಕೊಡವ ಭೂ ಮಾಲೀಕರು ಸಿಎನ್‍ಸಿ ನೇತೃತ್ವದಲ್ಲಿ ಆಯೋಗಕ್ಕೆ ಮನವಿ ಸಲ್ಲಿಸಿದ್ದು, ಅದರಲ್ಲಿ ನಮೂದಿಸಿರುವ ಹಲವಷ್ಟು ಅಂಶಗಳನ್ನು ಪಕ್ಷವು ಖಂಡಿಸುತ್ತದೆ ಎಂದರು.

ಕೊಡವರನ್ನು ಎಸ್.ಟಿ. ಪಟ್ಟಿಗೆ ಸೇರಿಸಿದರೆ ನಿಜವಾದ ಬುಡಕಟ್ಟು ಜನರಿಗೆ ಅನ್ಯಾಯವಾಗಲಿದೆ. ಈ ಹಿನ್ನೆಲೆ ಬುಡಕಟ್ಟು ವ್ಯಾಪ್ತಿಗೆ ಸೇರಿಸಬಾರದು ಎಂದು ಸಿಪಿಐಎಂಎಲ್‍ನಿಂದ ತಾ. 30.6.2020ರಂದು ಆಯೋಗಕ್ಕೆ ಪತ್ರದ ಮೂಲಕ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಿಪಿಐಎಂಎಲ್‍ನ ಜಿಲ್ಲಾ ಕಾರ್ಯದರ್ಶಿ ಎಸ್.ಆರ್. ಮಂಜುನಾಥ್, ಪದಾಧಿಕಾರಿಗಳಾದ ಸಣ್ಣಪ್ಪ, ಬಾಬು, ಕೃಷ್ಣ ಅವರುಗಳು ಉಪಸ್ಥಿತರಿದ್ದರು.