ಮಡಿಕೇರಿ, ಜು. 19: ಕೊಡಗಿನಲ್ಲಿ ಪುನರ್ವಸು ಮಳೆಯು ಕೊನೆಯ ನಾಲ್ಕು ದಿನಗಳಿಂದ ಆಶಾದಾಯಕವಾಗಿ ಹೊಡೆಯುವದ ರೊಂದಿಗೆ, ಇಂದಿನಿಂದ ಪುಷ್ಯಮಳೆ ಶುರುವಾಗಿದ್ದು, ಪ್ರಥಮ ದಿನವೇ ಕ್ಷೀಣಗೊಂಡು ಜಿಲ್ಲೆಯಾದ್ಯಂತ ಬಿಸಿಲಿನ ವಾತಾವರಣ ಗೋಚರಿಸಿದೆ. ಈಗಾಗಲೇ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕೃಷಿ ಚಟುವಟಿಕೆ ಮುಕ್ತಾಯಗೊಂಡಿದೆ. ಇನ್ನೊಂದೆಡೆ ಬಯಲು ಸೀಮೆ ಹಾಗೂ ದಕ್ಷಿಣ ಕೊಡಗಿನ ಬಹಳಷ್ಟು ಕಡೆ ಈಗಷ್ಟೇ ಭತ್ತದ ನಾಟಿಗೆ ಸಿದ್ಧತೆ ಕಂಡು ಬಂದಿದೆ.ಕೊಡಗಿನ ಕಾಫಿ ತೋಟಗಳಲ್ಲಿ ಚಳಿ - ಮಳೆಯೊಂದಿಗೆ ಮೋಡದ ವಾತಾವರಣದ ಪರಿಣಾಮ ಫಸಲು ಉದುರುತ್ತಿರುವ ಆತಂಕ ಮನೆ ಮಾಡಿತ್ತು. ಈಗ ಬದಲಾಗುತ್ತಿರುವ ಹವಾಮಾನದಿಂದ ಒಂದಿಷ್ಟು ಆತಂಕ ದೂರವಾದರೂ, ಮತ್ತೆ ಮಳೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬ ಅನುಮಾನವೂ ಹುಟ್ಟಿಕೊಂಡಿದೆ. ಒಟ್ಟಿನಲ್ಲಿ ಬದಲಾಗುತ್ತಿರುವ ಕಾಲಮಾನದ ಪರಿಸ್ಥಿತಿ ದುಡಿಯುವ ವರ್ಗದೊಂದಿಗೆ ರೈತ ಕುಟುಂಬಗಳನ್ನು ಒಂದೊಂದು ರೀತಿ ಆತಂಕಕ್ಕೆ ತಳ್ಳತೊಡಗಿದೆ.
ಮಳೆ ವಿವರ : ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಸರಾಸರಿ 0.39 ಇಂಚು ಮಳೆಯಾಗಿದೆ. ತಲಕಾವೇರಿ ವ್ಯಾಪ್ತಿಯಲ್ಲಿ 2.64 ಇಂಚು ಹಾಗೂ ಭಾಗಮಂಡಲ ಸುತ್ತಮುತ್ತ 1.86 ಇಂಚು ದಾಖಲಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಗೆ 0.40 ಇಂಚು, ನಾಪೋಕ್ಲು 0.78 ಇಂಚು, ಸಂಪಾಜೆ 0.59 ಇಂಚು
(ಮೊದಲ ಪುಟದಿಂದ) ಮಳೆಯಾಗಿದೆ. ವೀರಾಜಪೇಟೆ 0.20 ಇಂಚು, ಹುದಿಕೇರಿ 0.44 ಇಂಚು, ಶ್ರೀಮಂಗಲ 0.03 ಇಂಚು, ಅಮ್ಮತ್ತಿ 0.11 ಇಂಚು ಮಳೆ ಬಿದ್ದಿದೆ. ಸೋಮವಾರಪೇಟೆ 0.10 ಇಂಚು, ಶನಿವಾರಸಂತೆ 0.22 ಇಂಚು, ಕೊಡ್ಲಿಪೇಟೆ 0.6 ಇಂಚು, ಶಾಂತಳ್ಳಿ 0.22 ಇಂಚು, ಸುಂಟಿಕೊಪ್ಪ 0.12 ಇಂಚು, ಹಾರಂಗಿ 0.06 ಹಾಗೂ ಕುಶಾಲನಗರ 0.6 ಇಂಚು ಮಳೆಯಾಗಿದೆ.
ಹಾರಂಗಿ ಜಲಾಶಯ : ಹಾರಂಗಿ ಜಲಾಶಯದ ನೀರಿನ ಮಟ್ಟ 2854.10 ಅಡಿಯಿದ್ದು, ಜಲಾಶಯಕ್ಕೆ 2929 ಕ್ಯೂಸೆಕ್ ಒಳಹರಿವು ಹಾಗೂ 1366 ಕ್ಯೂಸೆಕ್ ಹೊರಗೆ ನದಿಗೆ ಬಿಡಲಾಗಿದೆ.