*ಸಿದ್ದಾಪುರ ಜು.18 : ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಹಿಂಭಾಗದಲ್ಲಿ ಬೆಳೆಗಾರರೊಬ್ಬರು ಹಂದಿ ಸಾಕಾಣಿಕೆಯಲ್ಲಿ ತೊಡಗಿದ್ದು, ಇದರಿಂದ ಸುತ್ತಲಿನ ಪರಿಸರಕ್ಕೆ ಹಾನಿಯಾಗಿದೆ ಎಂದು ಆರೋಪಿಸಿ ಸಹಕಾರ ಸಂಘದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ದೂರು ದಾಖಲಿಸಿದ್ದಾರೆ.

ನಿಯಮಕ್ಕೆ ವಿರುದ್ಧವಾಗಿ ಪಟ್ಟಣ ಪ್ರದೇಶದಲ್ಲೇ ಹಂದಿ ಸಾಕಾಣಿಕೆ ಮಾಡುತ್ತಿರುವುದರಿಂದ ಸುತ್ತಲ ಪರಿಸರ ದುರ್ವಾಸನೆಯಿಂದ ಕೂಡಿದ್ದು, ಬ್ಯಾಂಕ್‍ನಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಗ್ರಾಹಕರು ಕೂಡ ಬ್ಯಾಂಕ್‍ಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಪಕ್ಕದಲ್ಲೇ ನ್ಯಾಯಬೆಲೆ ಅಂಗಡಿಯೂ ಇದ್ದು, ಆಹಾರ ಸಾಮಗ್ರಿಗಳ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ದೂರಿನಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಚೆಟ್ಟಳ್ಳಿ ಗ್ರಾ.ಪಂ ಹಾಗೂ ಪೊಲೀಸರಿಗೆ ದೂರು ನೀಡಲಾಗಿದ್ದು, ಪರವಾನಗಿ ರದ್ದುಗೊಳಿಸಬೇಕು ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಸಹಕಾರ ಸಂಘದ ಅಧ್ಯಕ್ಷರೂ ಹಾಗೂ ಸೋಮವಾರಪೇಟೆ ತಾ.ಪಂ ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ ಅವರು ಕೂಡ ಪ.ಪಂ. ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದಾರೆ.

ಹಂದಿ ಸಾಕಾಣಿಕೆ ಮಾಡಲು ಪಟ್ಟಣದ 500 ಮೀಟರ್ ವ್ಯಾಪ್ತಿಯಲ್ಲಿ ಅವಕಾಶವಿಲ್ಲವೆಂದು ಪಶುಪಾಲನಾ ಇಲಾಖೆ ಅಧಿಕಾರಿಗಳು ತಿಳಿಸಿರುವುದರಿಂದ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮಣಿಉತ್ತಪ್ಪ ಮನವಿ ಮಾಡಿದ್ದಾರೆ.