ಮಡಿಕೇರಿ, ಜು. 19: ಕೊಡಗಿನ ಮೂಲನಿವಾಸಿಗಳಾದ ಕೊಡವ ಜನಾಂಗ - ಜನಾಂಗದ ನ್ಯಾಯೋಚಿತವಾದ ಹಕ್ಕು ಬಾಧ್ಯತೆಗಳ ಕುರಿತು ಇದಕ್ಕೆ ಸಂಬಂಧ ಪಡದ ಕೆಲವರು ಬಾಲಿಶ ಹೇಳಿಕೆಗಳನ್ನು ನೀಡುವದು, ವಿರೋಧ ವ್ಯಕ್ತಪಡಿಸುವದನ್ನು ಮಡಿಕೇರಿ ಕೊಡವ ಸಮಾಜ ಜನಾಂಗದ ಪರವಾಗಿ ಖಂಡಿಸುವದಾಗಿ ತಿಳಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಹಾಗೂ ಪದಾಧಿಕಾರಿಗಳು ಇಂತಹ ಪ್ರಯತ್ನಗಳು ಸಮಾಜದ ಸ್ವಾಸ್ಥ್ಯ ಕೆಡಿಸುವಂತಾಗಿದೆ. ಜನಾಂಗದ ಹಿನ್ನೆಲೆ, ಅಸ್ತಿತ್ವ ಅರಿಯದೆ ಕೆಲವರು ಪದೇ ಪದೇ ಗೊಂದಲ ಸೃಷ್ಟಿಸುವದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಅನಾದಿಕಾಲದಿಂದ ಕೊಡವ ಜನಾಂಗ ವಾಸಿಸುತ್ತಾ ಬಂದಿದ್ದು, ಇದು ಪ್ರಶ್ನಾತೀತವಾದದ್ದು. ಎಲ್ಲಕ್ಕೂ ಮುಖ್ಯವಾಗಿ ಕೂರ್ಗ್ ಗೆಜೆಟಿಯರ್‍ನಲ್ಲಿ ಕೊಡವ ಜನಾಂಗದ ಅಸ್ತಿತ್ವದ ಮೂಲದ ಕುರಿತು ದಾಖಲಾಗಿದೆ. ಪುರಾಣಗಳನ್ನು, ಇತಿಹಾಸವನ್ನು ನಾವು ನಂಬುತ್ತೇವೆ ಇಂದರಂತೆ ಕೊಡವ ಜನಾಂಗಕ್ಕೆ ಕೊಡವ ಜನಾಂಗ ಕೊಡಗು ಭೂಪ್ರದೇಶದ ಮೂಲನಿವಾಸಿಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ.

ಇತ್ತೀಚಿನ ದಿನಗಳಲ್ಲಿ ನಾಗರಿಕತೆ ಹಾಗೂ ಆಧುನಿಕತೆಯ ಅಭಿವೃದ್ಧಿ ಹಾಗೂ ಬೆಳವಣಿಗೆಯೊಂದಿಗೆ ಕಾಲಕ್ಕೆ ತಕ್ಕಂತೆ ಬದುಕಿನ ರೀತಿ ಬದಲಾಗಿದೆಯೇ ಹೊರತು ಕೊಡವ ಜನಾಂಗದ ಜಾನಪದ, ಸಂಪ್ರದಾಯ ಆಚರಣೆಗಳು ಇಂದಿಗೂ ಮೂಲ ಸ್ವರೂಪದಲ್ಲೇ ಉಳಿಸಿಕೊಂಡು ಬಂದಿದೆ ಎಂಬದನ್ನು ವಿರೋಧಿಸುವವರು ಅರಿಯಬೇಕಿದೆ.

ಇಷ್ಟೆಲ್ಲಾ ಇದ್ದರೂ ಕೂಡ ಕೊಡವ ಜನಾಂಗದವರು ಜಿಲ್ಲೆಯಲ್ಲಿ ವಾಸಿಸುತ್ತಿರುವ ಇತರ ಯಾವುದೇ ಜನಾಂಗದವರನ್ನು ಎಂದಿಗೂ ತುಚ್ಛವಾಗಿ ಕಂಡಿಲ್ಲ. ಎಲ್ಲರೊಂದಿಗೂ ಸ್ನೇಹ ಸೌಹಾರ್ದತೆಯೊಂದಿಗೆ ಪರಸ್ಪರ ಪರಾವಲಂಬನೆಯೊಂದಿಗೆ ಅನ್ಯೋನ್ಯತೆಯಿಂದಲೇ ಬದುಕುತ್ತಿದ್ದೇವೆ. ಹೀಗಿದ್ದರೂ ಕೂಡ ಇತ್ತೀಚಿನ ದಿನಗಳಲ್ಲಿ ಕೊಡವ ಜನಾಂಗದವರ ಕುರಿತು, ಕಾಲೆಳೆಯುವ, ಅವಹೇಳನಕಾರಿ ಹೇಳಿಕೆ ನೀಡುತ್ತಿರುವವರ ಬಗ್ಗೆ ಮಡಿಕೇರಿ ಕೊಡವ ಸಮಾಜ ಅವರ ಅಜ್ಞಾನದ ಕುರಿತು ವಿಷಾದ ವ್ಯಕ್ತಪಡಿಸುತ್ತಿದೆ ಎಂದು ಪ್ರಮುಖರು ಹೇಳಿದ್ದಾರೆ.

ಇತ್ತೀಚೆಗೆ ಒಂದು ಪಕ್ಷದ ಪ್ರಮುಖರೆಂದು ಕರೆಸಿಕೊಳ್ಳುತ್ತಿರುವರೊಬ್ಬರು ಕೊಡವ ಜನಾಂಗ (ಪರಿಶಿಷ್ಟ ಪಂಗಡ) ಬುಡಕಟ್ಟು ಸ್ಥಾನಮಾನ ಕೇಳುತ್ತಿರುವ ಕುರಿತು ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಪ್ರಮುಖರು ಸಂವಿಧಾನ ಬದ್ಧವಾಗಿ ನಮಗೆ ಸಿಗಬೇಕಿರುವ ಹಕ್ಕನ್ನು ಕೇಳುತ್ತಿದೆ. ಬೇರಾವುದೇ ಜನಾಂಗದ ಹಕ್ಕನ್ನು ಕಸಿಯುವ ಪ್ರಯತ್ನ ಮಾಡುತ್ತಿಲ್ಲ. ಹಾಗಾದರೆ ದೇಶದಲ್ಲಿ ಬದುಕುತ್ತಿರುವ ಬೇರೆ ಪರಿಶಿಷ್ಟ ಪಂಗಡದವರು ಆರ್ಥಿಕವಾಗಿ ಸಬಲರಾಗಿಲ್ಲವೇ? ಜಮೀನು - ಆಸ್ತಿಪಾಸ್ತಿ ಹೊಂದಿಲ್ಲವೇ? ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಕೊಡವ ಜನಾಂಗ ತಮ್ಮ ಸಂವಿಧಾನ ಬದ್ಧ ಹಕ್ಕನ್ನು ಸಿಎನ್‍ಸಿ ಸಂಘಟನೆಯ ಮೂಲಕ ಕೊಡವ ಸಮಾಜಗಳ ಮೂಲಕ ಸರ್ಕಾರದ ಮಟ್ಟದಲ್ಲಿ ಪಡೆಯಲು ಪ್ರಯತ್ನಿಸುತ್ತಿದೆಯೇ ಹೊರತು ಯಾರದ್ದೋ ದಯೆಯ ಮೇಲೆ ಅಲ್ಲ ಎಂದು ಹೇಳಿದ್ದಾರೆ.

ಬುಡಕಟ್ಟು ಸ್ಥಾನಮಾನದ ವಿರುದ್ಧ ಹೇಳಿಕೆ ನೀಡಿರುವ ನಿರ್ವಾಣಪ್ಪ ಈ ಬಗ್ಗೆ ಮನಸ್ಥಿತಿಯನ್ನು ತಿದ್ದಿಕೊಂಡು ಬಹಿರಂಗವಾಗಿ ಕ್ಷಮೆ ಯಾಚಿಸಬೇಕೆಂದು ಮಡಿಕೇರ ಕೊಡವ ಸಮಾಜ ಒತ್ತಾಯಿಸುತ್ತದೆ. ಇಲ್ಲವಾದಲ್ಲಿ ಕೊಡವ ಜನಾಂಗದ ಕುರಿತು ಅವಹೇಳನಕಾರಿ ಹೇಳಿಕೆ ಹಾಗೂ ಹಕ್ಕನ್ನು ಹತ್ತಿಕ್ಕಲು ಹೊರಟಿರುವ ಅವರ ನಡವಳಿಕೆಯನ್ನು ಕಾನೂನಾತ್ಮಕವಾಗಿ ಪ್ರಶ್ನಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.