ಲಡಾಖ್ ಗಡಿಯಲ್ಲಿ ರಫೇಲ್ ಯುದ್ಧ ವಿಮಾನ
ನವದೆಹಲಿ, ಜು. 19: ಗಲ್ವಾನ್ ಘರ್ಷಣೆಯ ಬಳಿಕ ಲಡಾಖ್ ಗಡಿಯಲ್ಲಿ ಭಾರತೀಯ ವಾಯು ಸೇನೆಯ ಯುದ್ಧ ವಿಮಾನಗಳು, ಹೆಲಿಕಾಪ್ಟರ್ಗಳು ಈಗಾಗಲೇ ಹಾರಾಟ ನಡೆಸುತ್ತಿವೆ. ಈಗ ಇವುಗಳ ಜೊತೆ ರಫೇಲ್ ಯುದ್ಧ ವಿಮಾನಗಳನ್ನು ನಿಯೋಜಿಸಲು ವಾಯುಸೇನೆ ಚಿಂತನೆ ನಡೆಸಿದೆ. ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಹಿನ್ನೆಲೆ ವಾಯು ಸೇನೆ ಮುಖ್ಯಸ್ಥ ಆರ್.ಕೆ.ಎಸ್. ಭದೌರಿಯಾ ನೇತೃತ್ವದ ಉನ್ನತ ವಾಯುಪಡೆಯ ಕಮಾಂಡರ್ಗಳ ತಂಡ ಎರಡು ದಿನಗಳ ಕಾಲ ಲಡಾಕ್ಗೆ ಭೇಟಿ ನೀಡಲಿದೆ. ಭೂ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಭೇಟಿ ಬಳಿಕ ವಾಯು ಸೇನೆ ತಂಡ ಭೇಟಿ ನೀಡುತ್ತಿದ್ದು, ಲಡಾಕ್ನಲ್ಲಿರುವ ಚೀನಾ ಭಾರತದ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಪ್ರದೇಶ ಹಾಗೂ ಆ ಭಾಗದಲ್ಲಿ ನಡೆಯುತ್ತಿರುವ ಮೂಲ ಸೌಕರ್ಯಗಳ ಅಭಿವೃದ್ಧಿ ಪರಿಸ್ಥಿತಿಯ ಪರಿಶೀಲನೆ ನಡೆಸಲಿದೆ. ಎರಡು ದಿನದ ಭೇಟಿಯಲ್ಲಿ ಈ ಪ್ರದೇಶದಲ್ಲಿ ವಾಯುಪಡೆ ಅವಳಿ-ಎಂಜಿನ್ ಫೈಟರ್ ಜೆಟ್ ಹಾಗೂ ಜುಲೈ ಅಂತ್ಯದ ವೇಳೆಗೆ ಭಾರತಕ್ಕೆ ಬರಲಿರುವ ರಫೇಲ್ ಫೈಟರ್ ಜೆಟ್ಗಳು ನಿಯೋಜಿಸುವ ಬಗ್ಗೆ ಮುಖ್ಯವಾಗಿ ಚರ್ಚೆಯಾಗಲಿದೆ. ಸುಖೋಯ್-30 ಎಂಕೆಐ ಮತ್ತು ಮಿರಾಜ್-2000 ಸೇರಿದಂತೆ ಇತರ ಫೈಟರ್ ಜೆಟ್ಗಳ ಸಮನ್ವಯದೊಂದಿಗೆ ಉತ್ತರದ ಗಡಿಗಳಲ್ಲಿ ರಫೇಲ್ ಫೈಟರ್ ಜೆಟ್ಗಳನ್ನು ಶೀಘ್ರವಾಗಿ ನಿಯೋಜಿಸುವ ಬಗ್ಗೆ ವಾಯುಪಡೆ ಗಮನ ಹರಿಸಿದ್ದು, ಈ ಬಗ್ಗೆ ಯೋಜನೆಗಳನ್ನು ರೂಪಿಸಲಿದೆ.
ಸೇನೆಯನ್ನು ಹಿಂಪಡೆಯದ ಚೀನಾ
ನವದೆಹಲಿ, ಜು. 19: ಈಶಾನ್ಯ ಲಡಾಖ್ನಲ್ಲಿ ಘರ್ಷಣೆಗೆ ಕಾರಣವಾಗಿದ್ದ ಪ್ರದೇಶದಿಂದ ಸೇನಾ ಸಿಬ್ಬಂದಿಗಳನ್ನು ಹಿಂಪಡೆಯುವುದಕ್ಕೆ ಭಾರತ-ಚೀನಾ ಮಾತುಕತೆ ವೇಳೆ ಪರಸ್ಪರ ಒಪ್ಪಿಗೆ ಸೂಚಿಸಿದ್ದವು. ಆದರೆ ಚೀನಾ ಮಾತ್ರ ಮಾತುಕತೆಯ ಒಪ್ಪಂದವನ್ನು ಪಾಲಿಸದೇ ಮೊಂಡಾಟ ಪ್ರಾರಂಭಿಸಿದೆ. ಎಲ್ಎಸಿಯಿಂದ ಚೀನಾ ಸಿಬ್ಬಂದಿಗಳು ವಾಪಸ್ ಆಗಿಲ್ಲ. ಪಿಎಲ್ಎ ಸೇನಾ ಸಿಬ್ಬಂದಿಗಳು ಮಾತುಕತೆಗೆ ಬದ್ಧವಾಗಿರದೇ ಇರುವುದನ್ನು ಗಮನಿಸಿರುವ ಭಾರತ, ಸಿಬ್ಬಂದಿಗಳ ಹಿಂತೆಗೆತ ಪ್ರಕ್ರಿಯೆ ಸಂಕೀರ್ಣವಾದದ್ದಾಗಿದ್ದು, ನಿರಂತರ ಪರಿಶೀಲನೆ ಅಗತ್ಯವಿದೆ ಎಂಬ ನಿರ್ಧಾರಕ್ಕೆ ಭಾರತ ಬಂದಿದೆ. ಚೀನಾ ಸಿಬ್ಬಂದಿಗಳು ಒಂದಷ್ಟು ದೂರ ವಾಪಸ್ ಹೋದಂತೆ ಮಾಡಿ, ಮತ್ತೆ ವಾಪಸ್ಸಾಗುತ್ತಾರೆ. ಆದ್ದರಿಂದ ಈ ಭಾಗದಲ್ಲಿ ಸಭೆ ನಡೆಯುವಾಗ ನಿರಂತರ ಪರಿಶೀಲನೆಯ ಅಗತ್ಯವಿದೆ ಎಂದು ಸೇನೆ ಅಭಿಪ್ರಾಯಪಟ್ಟಿರುವುದನ್ನು ಐಎಎನ್ಎಸ್ ವರದಿ ಮಾಡಿದೆ. ಚೀನಾ ಸಿಬ್ಬಂದಿಗಳು ಪ್ಯಾಂಗಾಂಗ್ ಲೇಕ್ನಲ್ಲಿ 2 ಕಿ.ಮೀ. ಹಿಂದೆ ಸರಿದಿದ್ದರೆ ಫಿಂಗರ್ 4 ನ್ನು ಸಂಪೂರ್ಣವಾಗಿ ತೊರೆದಿದ್ದಾರೆ. ಆದರೆ ಚೀನಾದ ಸೇನಾ ಸಿಬ್ಬಂದಿಗಳ ಪೈಕಿ ರಿಡ್ಜ್ ಲೈನ್ನಲ್ಲಿ ಇನ್ನೂ ಕೆಲವರಿದ್ದಾರೆ. ಈ ಬೆಳವಣಿಗೆ ಭಾರತದ ನಿಯಂತ್ರಣದಲ್ಲೇ ಇರುವ ಫಿಂಗರ್ 4 ನಲ್ಲಿ ಚೀನಾ ಕ್ಯಾಂಪ್ ಮಾಡಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ.
7 ಫಾರ್ಮಾ ಸಂಸ್ಥೆಗಳ ಪೈಪೋಟಿ
ನವದೆಹಲಿ, ಜು. 19: ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸಲು ಜಾಗತಿಕವಾಗಿ ಫಾರ್ಮಾ ಸಂಸ್ಥೆಗಳು ಯತ್ನಿಸುತ್ತಿದ್ದು, ಭಾರತದ 7 ಫಾರ್ಮಾ ಸಂಸ್ಥೆಗಳೂ ಸಹ ಪೈಪೋಟಿಯಲ್ಲಿವೆ. ಜಾಗತಿಕ ಮಟ್ಟದಲ್ಲಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಭಾರತ್ ಬಯೋಟೆಕ್, ಸೆರಮ್ ಇನ್ಸ್ಟಿಟ್ಯೂಟ್, ಝೈಡಸ್ ಕ್ಯಾಡಿಲಾ, ಪ್ಯಾನೇಸಿಯಾ ಬಯೋಟೆಕ್, ಇಂಡಿಯನ್ ಇಮ್ಯುನೊಲಾಜಿಕಲ್ಸ್, ಮೈನ್ವಾಕ್ಸ್ ಹಾಗೂ ಬಯೋಲಾಜಿಕಲ್ ಇ ಮುಂತಾದ ಭಾರತೀಯ ಫಾರ್ಮಾ ಸಂಸ್ಥೆಗಳು ಕೊರೊನಾ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ನಿರತವಾಗಿವೆ. ಸಾಮಾನ್ಯವಾಗಿ ಯಾವುದೇ ಲಸಿಕೆಯ ಪರೀಕ್ಷೆಗೆ ಒಂದು ವರ್ಷ ಸಮಯಾವಕಾಶ ಹಾಗೂ ಹೆಚ್ಚುವರಿ ಸಮಯ ಅದನ್ನ ಬೃಹತ್ ಪ್ರಮಾಣದಲ್ಲಿ ತಯಾರಿಸಲು ಬೇಕಾಗುತ್ತದೆ. ಆದರೆ ಈಗ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಫಾರ್ಮಾ ಸಂಸ್ಥೆಗಳು ವೇಗವಾಗಿ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿವೆ.
3 ಪೊಲೀಸ್ ಠಾಣೆಗಳು ಸೀಲ್ಡೌನ್
ಚಿಕ್ಕಮಗಳೂರು, ಜು. 19: ನಾಲ್ವರು ಪೊಲೀಸರಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ಜಿಲ್ಲೆಯ ಮೂರು ಪೊಲೀಸ್ ಠಾಣೆಗಳನ್ನು ಸೀಲ್ಡೌನ್ ಮಾಡಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ, ಅಜ್ಜಂಪುರ ಹಾಗೂ ಯಗಟಿ ಪೊಲೀಸ್ ಠಾಣೆಗಳನ್ನು ಸೀಲ್ಡೌನ್ ಮಾಡಿ ಸೋಂಕಿತ ಪೊಲೀಸ್ ಪೇದೆಗಳನ್ನು ಚಿಕ್ಕಮಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಲ್ಲಿಯವರೆಗೆ 250 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ರಾಮ ಮಂದಿರಕ್ಕೆ ಆ. 5 ರಂದು ಪೂಜೆ
ನವದೆಹಲಿ, ಜು. 19: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಗೆ ಅನುಮತಿ ಕೋರಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದು, ಹೆಚ್ಚು ಕಡಿಮೆ ಆ. 5 ರಂದು ರಂದು ಪೂಜೆ ನೆರವೇರಲಿದೆ. ಭೂಮಿ ಪೂಜೆಯ ತಾತ್ಕಾಲಿಕ ದಿನಾಂಕವನ್ನು ಟ್ರಸ್ಟ್ ನಮೂದಿಸಿದ್ದು, ಅಂತಿಮ ನಿರ್ಧಾರವನ್ನು ಪ್ರಧಾನ ಮಂತ್ರಿ ಕಾರ್ಯಾಲಯ ಕೈಗೊಳ್ಳಲಿದೆ. ಶನಿವಾರ ಅಯೋಧ್ಯೆಯ ಸಕ್ರ್ಯುಟ್ ಹೌಸ್ನಲ್ಲಿ ಟ್ರಸ್ಟ್ನ ಸಭೆ ನಡೆಸಲಾಗಿತ್ತು.ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದ್ದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಕೊರೊನಾ ಸೋಂಕಿನ ಕಾರಣ ಭೂಮಿ ಪೂಜೆಯ ದಿನಾಂಕವನ್ನು ನಾವು ಪ್ರಧಾನಿ ಕಚೇರಿಗೆ ಕಳುಹಿಸಿದ್ದೇವೆ. ಅಲ್ಲಿ ಪೂಜೆಯ ದಿನಾಂಕ ಅಂತಿಮವಾಗಲಿದೆ ಎಂದರು. ಹೆಚ್ಚು ಕಡಿಮೆ ಆಗಸ್ಟ್ 5 ರಂದು ಭೂಮಿ ಪೂಜೆ ನೆರವೇರುವುದು ಖಚಿತ ಎಂದೂ ಹೇಳಲಾಗಿದೆ.
ಮೈಸೂರಿನಲ್ಲಿ ಸಾವಿನ ಪ್ರಮಾಣ ಹೆಚ್ಚು
ಮೈಸೂರು, ಜು. 19: ಕೊರೊನಾ ವೈರಸ್ ವಿರುದ್ಧ ದಿಟ್ಟ ಕ್ರಮಗಳನ್ನು ಕೈಗೊಂಡು ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಿದ್ದ ಮೈಸೂರಿನಲ್ಲಿ ಇದೀಗ ಮತ್ತೆ ಸೋಂಕಿನ ಸಂಖ್ಯೆ ಉಲ್ಬಣಗೊಳ್ಳುತ್ತಿದೆ. ಮೈಸೂರು ನಗರದಲ್ಲಿ ಇದೀಗ ಕೊರೊನಾ ಸಾವಿನ ಪ್ರಮಾಣ ಕರ್ನಾಟಕಕ್ಕಿಂತಲೂ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 59ಕ್ಕೆ ಏರಿಕೆಯಾಗಿದ್ದು, ಇದರೊಂದಿಗೆ ನಗರದಲ್ಲಿ ಸಾವಿನ ಪ್ರಮಾಣ ಶೇ. 4 ಕ್ಕೆ ಹೆಚ್ಚಾಗಿದೆÉ. ಈ ಶೇಕಡಾವಾರು ರಾಜ್ಯದ ಸಾವಿನ ಸರಾಸರಿಗಿಂತಲೂ ದುಪ್ಪಟ್ಟಾಗಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ. 2.1 ರಷ್ಟಿದ್ದರೆ, ಮೈಸೂರಿನಲ್ಲಿ ಶೇ. 4 ರಷ್ಟಿದೆ. ಮೈಸೂರಿನಲ್ಲಿ ಈವರೆಗೂ 1514 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದ್ದು, 575 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಳೆದ ಕೆಲ ವಾರಗಳಲ್ಲಿ ಮೈಸೂರಿನಲ್ಲಿ 800ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಶೇ.39ಕ್ಕೆ ಇಳಿಕೆಯಾಗಿದೆ.
ನಕಲಿ ವೀಡಿಯೋ ಹರಿಬಿಟ್ಟವನ ಬಂಧನ
ಬೆಂಗಳೂರು, ಜು. 19: ರಾಜಧಾನಿ ಬೆಂಗಳೂರಿನ ವಿಕ್ಟೋರಿಯಾದ ಆಸ್ಪತ್ರೆಯ ವೀಡಿಯೋ ಎಂದು ಹೇಳಿ ನಕಲಿ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ಇದು ನಕಲಿ ವೀಡಿಯೋವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಅತ್ಯುತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ. ಬಂಧಿತನನ್ನು ತಿಲಕ್ ನಗರದ ಸಮೀರ್ವುಲ್ಲಾ ಎಂದು ಗುರುತಿಸಲಾಗಿದೆ. ಹೊರ ರೋಗಿ ವಿಭಾಗದ ಕೊಠಡಿ ಮುಂಭಾಗ ಅಪಾರ ಸಂಖ್ಯೆಯಲ್ಲಿ ರೋಗಿಗಳು ನೆರೆದಿರುವ ವೀಡಿಯೋ ವಿಕ್ಟೋರಿಯಾ ಆಸ್ಪತ್ರೆಯದ್ದು ಎಂದು ಹೇಳಿ ಆರೋಪಿ ತನ್ನ ಫೇಸ್ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದ. ಅದು ಟ್ವಿಟರ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸಿಸಿಬಿ ಪೊಲೀಸರು ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.