ಸಿದ್ದಾಪುರ, ಜು. 19: ಕಾಡಾನೆಯೊಂದು ಅಂಗನವಾಡಿ ಕೇಂದ್ರಕ್ಕೆ ದಾಳಿ ನಡೆಸಿ ಕೇಂದ್ರದಲ್ಲಿ ಇದ್ದ ವಸ್ತುಗಳನ್ನು ಹಾನಿಗೊಳಿಸಿರುವ ಘಟನೆ ಮಾಲ್ದಾರೆ ಸಮೀಪದ ತಟ್ಟಳ್ಳಿ ಹಾಡಿಯಲ್ಲಿ ನಡೆದಿದೆ. ಮಾಲ್ದಾರೆ ತಟ್ಟಳ್ಳಿ ಅಂಗನವಾಡಿ ಕೇಂದ್ರಕ್ಕೆ ಒಂಟಿಸಲಗ ದಾಳಿ ನಡೆಸಿ ರಾತ್ರಿ ಸಮಯದಲ್ಲಿ ಆಹಾರಗಳನ್ನು ಹುಡುಕಾಡಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಆಹಾರ ಸಿಗಲಿಲ್ಲ ಎಂದು ರೋಷಗೊಂಡು ಅಂಗನವಾಡಿ ಕೇಂದ್ರದ ಬಾಗಿಲುಗಳನ್ನು ಸೊಂಡಿಲಿನಿಂದ ಕಿತ್ತು ಎಸೆದು ಹಾನಿಗೊಳಿಸಿದೆ. ಅಲ್ಲದೆ ಅಂಗನವಾಡಿ ಶಿಕ್ಷಕಿ ಕುಳಿತುಕೊಳ್ಳುವ ಪ್ಲಾಸ್ಟಿಕ್ ಚೇರ್ ಅನ್ನು ಕೂಡ ತುಳಿದು ನಾಶಗೊಳಿಸಿದೆ. ಈ ವಿಚಾರ ತಿಳಿದು ಅಂಗನವಾಡಿ ಕೇಂದ್ರದ ಶಿಕ್ಷಕಿ ಶಾಂತಿ ಹಾಗೂ ಸಹಾಯಕಿ ಲತಾ ಅಂಗನವಾಡಿ ಕೇಂದ್ರಕ್ಕೆ ತೆರಳಿ ಪರಿಶೀಲನೆ ಮಾಡಿದರು. ನಂತರ ಮುರಿದುಹೋಗಿದ್ದ ಬಾಗಿಲನ್ನು ಜೋಡಿಸಿ ಬೆಂಚುಗಳನ್ನು ಅಂಗನವಾಡಿ ಕೇಂದ್ರದ ಮುಂಭಾಗಕ್ಕೆ ಇಟ್ಟು ಭದ್ರಪಡಿಸಿದ್ದರು.
ಶನಿವಾರ ರಾತ್ರಿ ಅದೇ ಕಾಡಾನೆ ಮತ್ತೆ ಅಂಗನವಾಡಿ ಕೇಂದ್ರಕ್ಕೆ ತೆರಳಿ ಜೋಡಿಸಿಟ್ಟಿದ್ದ ಬೆಂಚುಗಳನ್ನು ಎಳೆದು ಹಾಕಿ ಹಾನಿಗೊಳಿಸಿದೆ ಎಂದು ಸ್ಥಳೀಯರು ಹಾಗೂ ಸಹಾಯಕಿ ಲತಾ ತಿಳಿಸಿದ್ದಾರೆ. ಇದಲ್ಲದೆ ಕೇಂದ್ರದಲ್ಲಿದ್ದ ಮಕ್ಕಳಿಗೆ ತೋರಿಸಿಕೊಡುತ್ತಿದ್ದ ಚಿತ್ರಪಟಗಳನ್ನು ಹಾನಿಗೊಳಿಸಿದ ಕಾಡಾನೆ ಪುಂಡಾಟಿಕೆ ಮಾಡಿ ಆಹಾರ ಪದಾರ್ಥಗಳನ್ನು ತಿನ್ನಲು ಪ್ರಯತ್ನಿಸಿದೆ; ಆದರೆ ಆಹಾರ ಸಿಗಲಿಲ್ಲ ಎಂದು ಮನಬಂದಂತೆ ತನ್ನ ರೋಷವನ್ನು ತೀರಿಸಿಕೊಂಡಿದೆ. ಇದರಿಂದಾಗಿ ಸ್ಥಳೀಯರು ಭಯಭೀತರಾಗಿದ್ದಾರೆ. ಎರಡೂ ದಿನ ಈ ಕಾಡಾನೆ ಅಂಗನವಾಡಿ ಕೇಂದ್ರದ ಸುತ್ತಲೂ ದಾಂಧಲೆ ನಡೆಸಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
-ವರದಿ: ವಾಸು