ಕೂಡಿಗೆ, ಜು. 17: ಕೊಡಗಿನ ಗ್ರಾಮಾಂತರ ಪ್ರದೇಶಗಳಲ್ಲಿ ಮಳೆ ಅಧಿಕಗೊಳ್ಳುವುದರೊಂದಿಗೆ, ನದಿ ತೋಡುಗಳು ತುಂಬಿ ಹರಿಯಲಾರಂಭಿಸಿರುವುದರಿಂದ ಹಾರಂಗಿ ಜಲಾಶಯ ಭರ್ತಿಗೊಳ್ಳಲು ಕೇವಲ ನಾಲ್ಕೂವರೆ ಅಡಿ ಬಾಕಿಯಿದ್ದು, ಅಪಾಯವನ್ನು ತಪ್ಪಿಸುವ ದಿಸೆಯಲ್ಲಿ ಇಂದು ಬೆಳಿಗ್ಗೆ ಅಣೆಕಟ್ಟೆಯಿಂದ ನದಿಗೆ ನೀರು ಬಿಡಲಾಗಿದೆ. ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಈ ಬೆಳಿಗ್ಗೆ ಹಾರಂಗಿ ಜಲಾಶಯಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಜಲಾಶಯದಲ್ಲಿ 2853.17 ಅಡಿ ನೀರಿದ್ದು, ಗರಿಷ್ಠ 2859 ಅಡಿಗಳಿಗಿಂತಲೂ ನಾಲ್ಕೈದು ಅಡಿಯಷ್ಟೆ ಕಡಿಮೆ ಇರುವುದು ಗೋಚರಿಸಿತು.ಕೂಡಲೇ ಕಾರ್ಯಪ್ರವೃತರಾದ ಶಾಸಕರು, ಜಲಾಶಯದ ತಾಂತ್ರಿಕ ವಿಭಾಗದ ಅಧಿಕಾರಿಗಳಿಗೆ ಸಲಹೆ ನೀಡುವ ಮೂಲಕ 2018ರಲ್ಲಿ ಹಾರಂಗಿ ಅಣೆಕಟ್ಟೆಯಿಂದ ಸಂಭವಿಸಿದ್ದ ಅನಾಹುತದ ಬಗ್ಗೆ ಚರ್ಚೆ ನಡೆಸಿದರು. ಅಲ್ಲದೆ ಪ್ರಸ್ತುತ ಜಲಾಶಯಕ್ಕೆ 4864 ಕ್ಯೂಸೆಕ್ಸ್ ನೀರಿನ ಒಳ ಹರಿವು ಇದ್ದು, ಯಾವುದೇ ಸಂದರ್ಭ ಜಲಾಶಯ ಭರ್ತಿಗೊಳ್ಳುವ ಸಂಭವ ಇರುವುದರಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಯ ಬಿಡುವಂತೆ ಶಾಸಕರು ಮುನ್ನೆಚ್ಚರಿಗೆ ನೀಡಿದರು. ಆ ಮೇರೆಗೆ ಜಲಾಶಯದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗರಾಜ್ ಹಾಗೂ ಮಹೇಂದ್ರ ಕುಮಾರ್ ಅವರುಗಳ ಉಪಸ್ಥಿತಿಯಲ್ಲಿ ಸಾಂಕೇತಿಕ ಪೂಜೆ ನೆರವೇರಿಸಿದ ಶಾಸಕರು ಬೆಳಿಗ್ಗೆ 9.30ರ ವೇಳೆ ಜಲಾಶಯದ ಮೂರು ದ್ವಾರಗಳಲ್ಲಿ ನದಿಗೆ ನೀರು ಹರಿಯಬಿಟ್ಟರು.
ಅಪಾಯ ತಪ್ಪಿಸಲು ಕ್ರಮ : ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್ ಅವರು, 2018ರಲ್ಲಿ ಈ ಪರಿಸ್ಥಿತಿಯಲ್ಲಿ ಒಮ್ಮೆಲೆ ಜಲಾಶಯದಿಂದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಟ್ಟಿದ್ದರಿಂದ ಕುಶಾಲನಗರ ಪಟ್ಟಣ ಸೇರಿದಂತೆ ಹರದೂರು, ಕೂಡಿಗೆ ವ್ಯಾಪ್ತಿಯ ಜನರು ಪ್ರವಾಹಕ್ಕೆ ಸಿಲುಕಿ ತೊಂದರೆ ಅನುಭವಿಸಿದ್ದನ್ನು ನೆನಪಿಸಿಕೊಂಡರು.
ಈ ಕಾರಣದಿಂದ ಜನತೆಯಲ್ಲಿ ಆತಂಕ ದೂರಗೊಳಿಸುವುದರೊಂದಿಗೆ ಎದುರಾಗಲಿದ್ದ ತೊಂದರೆ ತಪ್ಪಿಸಲು ಮುಂಜಾಗ್ರತಾ ದೃಷ್ಟಿಯಿಂದ ನದಿಗೆ ನೀರು ಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ಇಲಾಖೆ ಅಧಿಕಾರಿಗಳು ಜಲಾಶಯಕ್ಕೆ ನೀರಿನ ಒಳಹರಿವಿನ ಬಗ್ಗೆ ನಿರಂತರ ನಿಗಾ ವಹಿಸುವ ಮೂಲಕ, ಸಮತೋಲನ ಕಾಯ್ದುಕೊಂಡು ಹಂತ ಹಂತವಾಗಿ ನೀರು ಹೊರ ಬಿಡುವಂತೆ ಸೂಚಿಸಿರುವುದಾಗಿ ಮಾರ್ನುಡಿದರು.
ಅಧಿಕಾರಿ ಸ್ಪಷ್ಟನೆ : ಹಾರಂಗಿ ಜಲಾಶಯದ ಅಧಿಕಾರಿ ಮಹೇಂದ್ರಕುಮಾರ್ ಪ್ರತಿಕ್ರಿಯಿಸಿ ಜಲಾಶಯ ನೀರಿನ ಮಟ್ಟ ಏರಿಕೆ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ ಹೊಳೆ 2500 ಕ್ಯೂಸೆಕ್ಸ್ ಹಾಗೂ ವಿದ್ಯುತ್ ಘಟಕಕ್ಕೆ
(ಮೊದಲ ಪುಟದಿಂದ) 3 ಸಾವಿರ ಕ್ಯೂಸೆಕ್ಸ್ ಸೇರಿದಂತೆ 5500 ಕ್ಯೂಸೆಕ್ಸ್ ಹೊರ ಬಿಡಲಾಗುತ್ತಿದೆ ಎಂದು ನುಡಿದರು. ಪ್ರಸ್ತುತ ಮೂರು ದ್ವಾರಗಳ ಮುಖಾಂತರ ನದಿಗೆ ನೀರು ಬಿಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ವೇಳೆ ಜಲಾಶಯದ ಇತರ ಅಧಿಕಾರಿಗಳೊಂದಿಗೆ ಸಿಬ್ಬಂದಿ ವರ್ಗ ಹಾಗೂ ಶಾಸಕರ ಆಪ್ತ ಸಹಾಯಕ ರವಿ ಮತ್ತಿತರರು ಹಾಜರಿದ್ದರು.
ಪೊಲೀಸ್ ಅಧಿಕಾರಿಗಳ ಭೇಟಿ
ಕುಶಾಲನಗರ : ಕಾವೇರಿ ಮತ್ತು ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರ ಪೊಲೀಸ್ ಅಧಿಕಾರಿಗಳು ಹಾರಂಗಿ ಅಣೆಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇತ್ತೀಚೆಗೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿಗಳು ಕಳೆದ ಸಾಲಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡಿದ ಮೇರೆಗೆ ಕುಶಾಲನಗರ ಡಿವೈಎಸ್ಪಿ ಶೈಲೇಂದ್ರಕುಮಾರ್, ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಅವರುಗಳು ಅಣೆಕಟ್ಟೆ ಅಧಿಕಾರಿಗಳಿಂದ ನೀರಿನ ಒಳಹರಿವು ಮತ್ತಿತರ ಮಾಹಿತಿಗಳನ್ನು ಪಡೆದುಕೊಂಡರು.
ನದಿ ನೀರು ಹರಿಸುವ ಮುನ್ನ ನದಿ ಸಮೀಪದ ಜನತೆಯನ್ನು ಎಚ್ಚರಿಸಲು ನಿರಂತರ ಸೈರನ್ ಮೊಳಗಿಸುವುದು ಮತ್ತು ಜನಜಾನುವಾರುಗಳ ಸುರಕ್ಷತೆ ಹಿನ್ನೆಲೆಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳ ಗಮನ ಸೆಳೆದರು.
ಇದೇ ಸಂದರ್ಭ ಅಣೆಕಟ್ಟೆ ಕೆಳಭಾಗದ ಸೇತುವೆ ಮೇಲೆ ವಾಹನ ನಿಲುಗಡೆ ಮಾಡಿ ಗುಂಪು ಸೇರಿದ ಜನರನ್ನು ಚದುರಿಸಲು ಕ್ರಮಕೈಗೊಂಡರು.
ಮುಂದುವರಿದ ಕಾಮಗಾರಿ
ಹಾರಂಗಿ ಅಣೆಕಟ್ಟೆ ಸುರಕ್ಷತೆ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮ ವತಿಯಿಂದ ಜಲಾಶಯದ ಕ್ರೆಸ್ಟ್ಗೇಟ್ಗಳ ಮತ್ತು ತಳಭಾಗದ ಸ್ಲೂಯಿಸ್ ಗೇಟ್ಗಳನ್ನು ದುರಸ್ತಿಗೊಳಿಸುವ ಕಾಮಗಾರಿ ಭರದಿಂದ ನಡೆಯುತ್ತಿದೆ. ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ 4 ತಿಂಗಳಿನಿಂದ ಕಾಮಗಾರಿಗೆ ಅಡ್ಡಿಯುಂಟಾಗಿ ಇದೀಗ ತುಂಗಭದ್ರ ಅಣೆಕಟ್ಟೆ ವಿಭಾಗದ ತಜ್ಞರ ಮೂಲಕ ಕಾಮಗಾರಿ ಬಿರುಸಿನಿಂದ ಸಾಗುತ್ತಿದ್ದು 4 ಕ್ರೆಸ್ಟ್ಗೇಟ್ಗಳ ಕೆಲಸ ಪೂರ್ಣಗೊಂಡಿದೆ. ಇನ್ನೊಂದೆಡೆ ಸುಮಾರು 150 ಅಡಿ ತಳಭಾಗದಲ್ಲಿರುವ ಮೂರು ಸ್ಲೂಯಿಸ್ ಗೇಟ್ಗಳ ದುರಸ್ತಿ ಕಾರ್ಯ ನಡೆಯುತ್ತಿದೆ.
ಕಳೆದ 12 ವರ್ಷಗಳಿಂದ ಈ ಗೇಟ್ಗಳ ನಿರ್ವಹಣೆ ಕಾಮಗಾರಿ ನಡೆಯದೆ ನದಿಗೆ ನೀರು ಹರಿಸುವ ಸಂದರ್ಭ ಗೇಟ್ಗಳಲ್ಲಿ ಆಗಾಗ್ಯೆ ತೊಡಕುಗಳು ಕಂಡುಬರುತ್ತಿದ್ದವು. ನುರಿತ ಕಾರ್ಮಿಕರ ಕೊರತೆಯಿಂದ ಈ ಕೆಲಸ ತಡವಾಗಿ ಪ್ರಾರಂಭವಾಗಿದ್ದು ಈ ಬಾರಿ ಅಂದಾಜು 15 ಲಕ್ಷ ರುಗಳ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹಾರಂಗಿ ಅಣೆಕಟ್ಟೆ ಉಸ್ತುವಾರಿ ಅಧಿಕಾರಿ ನಾಗರಾಜ್ ಶಕ್ತಿಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಮುಖ್ಯ ಕ್ರೆಸ್ಟ್ಗೇಟ್ಗಳ ದುರಸ್ಥಿ ಮತ್ತು ಅಣೆಕಟ್ಟೆಗೆ ಸುಣ್ಣಬಣ್ಣ ಬಳಿಯುವ ಕೆಲಸ ನಡೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅಣೆಕಟ್ಟೆಯ ಸ್ಲೂಯಿಸ್ ಗೇಟ್ ಮೇಲ್ಭಾಗದಿಂದ ಸುಮಾರು 150 ಅಡಿಗಳಷ್ಟು ತಳಭಾಗದಲ್ಲಿದ್ದು ಅಲ್ಲಿನ ಗೇಟ್ಗಳಿಗೆ ಬೃಹತ್ ಗಾತ್ರದ ಕೇಬಲ್ಗಳನ್ನು ಅಳವಡಿಸುವ ಕೆಲಸ ನಡೆದಿದೆ. ಹೊಸಪೇಟೆಯಿಂದ ಬಂದ ಕಾರ್ಮಿಕರು ಕಳೆದ 1 ತಿಂಗಳಿನಿಂದ ಈ ಕಾಮಗಾರಿ ನಡೆಸುತ್ತಿದ್ದಾರೆ ಎಂದು ನಾಗರಾಜ್ ಮಾಹಿತಿ ನೀಡಿದ್ದಾರೆ.
ಈ ನಡುವೆ ಅಣೆಕಟ್ಟೆಯಲ್ಲಿ ನೀರಿನ ಸಮರ್ಪಕ ನಿರ್ವಹಣೆ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು ಅಣೆಕಟ್ಟೆ ಮೇಲ್ಭಾಗದಲ್ಲಿ ದಿನದ 24 ಗಂಟೆ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. 2018 ರಲ್ಲಿ ಏಕಾಏಕಿ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದುಬಂದ ಹಿನ್ನೆಲೆಯಲ್ಲಿ ನದಿ ಪಾತ್ರದ ಸಾವಿರಾರು ಮನೆಗಳು ಜಲಾವೃತಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮ ಅಣೆಕಟ್ಟೆಯ ನೀರಿನ ನಿರ್ವಹಣೆಯ ಬಗ್ಗೆ ವಿಶೇಷ ಕಾರ್ಯಯೋಜನೆ ರೂಪಿಸಿದೆ. 2019 ರಲ್ಲಿ ಜಲಾಶಯ ತುಂಬುವ ಮೊದಲೇ ಎಲ್ಲಾ ಮುನ್ನೆಚ್ಚರಿಕೆಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಆತಂಕ ಎದುರಾಗದೆ ಇರುವುದನ್ನು ಇಲ್ಲಿ ಗಮನಿಸಬಹುದು.
ಪ್ರಸಕ್ತ ಮಳೆಗಾಲ ಅವಧಿಯಲ್ಲಿ ಅಣೆಕಟ್ಟೆ ನಿರ್ವಹಣೆಗಾಗಿ ಓರ್ವ ಸಹಾಯಕ ಅಭಿಯಂತರ, ಗೇಜ್ ಮತ್ತು ಗೇಟ್ ಆಪರೇಟರ್, ನುರಿತ ತಂತ್ರಜ್ಞರ ತಂಡ ಸೇರಿದಂತೆ ಹಾರಂಗಿ ಯೋಜನಾ ವೃತ್ತದ 10 ಉಪವಿಭಾಗಗಳ ಅಧಿಕಾರಿಗಳು ನಿರಂತರವಾಗಿ ಜಲಾಶಯದ ನೀರಿನ ಮಟ್ಟ ಮತ್ತು ಒಳಹರಿವು ಮತ್ತಿತರ ವಿಷಯಗಳ ಸಂಗ್ರಹದೊಂದಿಗೆ ಹೆಚ್ಚುವರಿ ನೀರನ್ನು ನದಿಗೆ ಹರಿಸಲು ಕ್ರಮಕೈಗೊಳ್ಳಲಾಗುತ್ತಿದೆ.
ಹಗಲು ಮತ್ತು ರಾತ್ರಿ ಈ ತಂಡ ಅಣೆಕಟ್ಟೆಯ ಮೇಲ್ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಜಲಾಶಯಕ್ಕೆ ಬರುವ ನೀರಿನ ಸಂಪೂರ್ಣ ಮಾಹಿತಿಯನ್ನು ಇಲಾಖೆ ಸೇರಿದಂತೆ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರದ ಗಮನಕ್ಕೆ ಪ್ರತಿ ಗಂಟೆಗಂಟೆಗೆ ನೀಡುವ ಕೆಲಸದಲ್ಲಿ ತೊಡಗಿದೆ. ಇನ್ನೊಂದೆಡೆ ಕೇಂದ್ರ ಜಲ ಆಯೋಗದ ನೀರಿನ ಮಾಪಕ ಕೇಂದ್ರ ಅಣೆಕಟ್ಟೆಯಿಂದ 15 ಕಿಮಿ ದೂರದ ಮುಕ್ಕೋಡ್ಲು ಬಳಿ ಸ್ಥಾಪನೆಯಾಗಿದ್ದು ಆ ಭಾಗದಿಂದ ಅಣೆಕಟ್ಟೆಗೆ ಬರುವ ನೀರಿನ ಹರಿವು ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಜಿಲ್ಲೆಯ ಮಳೆ ವಿವರ
ಕೊಡಗು ಜಿಲ್ಲೆಯಲ್ಲಿ ಕಳೆದ 48 ಗಂಟೆಗಳಿಂದ ಮಳೆಯು ಅಧಿಕಗೊಳ್ಳುವ ಲಕ್ಷಣದೊಂದಿಗೆ ಚಳಿ - ಗಾಳಿ ಗೋಚರಿಸುತ್ತಾ, ಎಲ್ಲೆಡೆ ಮೋಡ ಮುಸುಕಿದ ವಾತಾವರಣವಿದೆ. ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿ ಸುತ್ತಮುತ್ತ ಕಳೆದ 24 ಗಂಟೆಗಳಲ್ಲಿ 6.72 ಇಂಚು ಸರಾಸರಿ ಮಳೆಯಾಗಿದೆ. ಭಾಗಮಂಡಲ ಪರಿಸರದಲ್ಲಿ 4.73 ಇಂಚು ಮಳೆ ದಾಖಲಾಗಿದೆ. ಇನ್ನು ದಕ್ಷಿಣ ಕೊಡಗಿನ ಬಿರುನಾಣಿ, ಹುದಿಕೇರಿ ಸುತ್ತಮುತ್ತ 3.81 ಇಂಚು ಮಳೆ ಬಿದ್ದಿದೆ. ಅಂತೆಯೇ ಉತ್ತರ ಕೊಡಗಿನ ಪುಷ್ಪಗಿರಿ ತಪ್ಪಲಿನ ಶಾಂತಳ್ಳಿ, ಸೂರ್ಲಬ್ಬಿ, ಮುಟ್ಲು ವ್ಯಾಪ್ತಿಯಲ್ಲಿ 4.02 ಇಂಚು ಮಳೆ ಬಿದ್ದಿದೆ. ಗಾಳಿಬೀಡು ವ್ಯಾಪ್ತಿಯಲ್ಲಿ 3.60 ಇಂದು ಮಳೆಯಾಗಿದೆ.
ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತಮುತ್ತ ಗಾಳಿಯ ತೀವ್ರತೆ ನಡುವೆ ಸರಾಸರಿ 2.32 ಇಂಚು ಮಳೆಯಾಗಿದೆ. ಗ್ರಾಮಾಂತರ ಪ್ರದೇಶದ ಸಂಪಾಜೆ ವ್ಯಾಪ್ತಿಯಲ್ಲಿ 2.96 ಇಂಚು ಮಳೆಯೊಂದಿಗೆ ನಾಪೋಕ್ಲು ಸುತ್ತಮುತ್ತ 2.29 ಇಂಚು ಮಳೆ ಆಗಿದೆ. ಅತ್ತ ವೀರಾಜಪೇಟೆ ತಾಲೂಕು ಕೇಂದ್ರದಲ್ಲಿ 2.22 ಇಂಚು ಮಳೆ ಬಿದ್ದಿದೆ. ಆ ತಾಲೂಕಿನ ಶ್ರೀಮಂಗಲ 2.81 ಇಂಚು, ಪೊನ್ನಂಪೇಟೆ ಪರಿಸರದಲ್ಲಿ 2.28 ಇಂಚು, ಅಮ್ಮತ್ತಿ 1.06 ಇಂಚು, ಬಾಳೆಲೆ 1.36 ಇಂಚು ಮಳೆ ಗೋಚರಿಸಿದೆ. ಮತ್ತೊಂದೆಡೆ ಉತ್ತರ ಕೊಡಗಿನ ಸೋಮವಾರಪೇಟೆ ತಾಲೂಕು ಕೇಂದ್ರದಲ್ಲಿ 1.91 ಇಂಚು, ಶನಿವಾರಸಂತೆ 1.11 ಇಂಚು, ಕೊಡ್ಲಿಪೇಟೆ 1.97 ಇಂಚು, ಸುಂಟಿಕೊಪ್ಪ 1.25 ಇಂಚು ಹಾಗೂ ಬಯಲುಸೀಮೆ ಕುಶಾಲನಗರ ವ್ಯಾಪ್ತಿಯಲ್ಲಿ 0.59 ಇಂಚು ಮಳೆ ದಾಖಲಾಗಿದೆ.
ಒಟ್ಟಿನಲ್ಲಿ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಸರಾಸರಿ 2.37 ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 3.33 ಇಂಚು, ವೀರಾಜಪೇಟೆ ತಾಲೂಕಿನಲ್ಲಿ 2.32 ಇಂಚು, ಸೋಮವಾರಪೇಟೆ ತಾಲೂಕಿನಲ್ಲಿ 1.66 ಇಂಚು ಮಳೆ ದಾಖಲಾಗಿದೆ.
3 ದಿನದಿಂದ ಮುಂಗಾರು ಮಳೆ ಬಿರುಸು
ಶ್ರೀಮಂಗಲ : ಕಳೆದ 24 ಗಂಟೆಯಲ್ಲಿ ಘಟ್ಟ ಪ್ರದೇಶ ವ್ಯಾಪ್ತಿಯ ಬಿರುನಾಣಿ, ಟಿ.ಶೆಟ್ಟಿಗೇರಿ, ಶ್ರೀಮಂಗಲ, ಕುಟ್ಟ, ಬಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದೆ. ಬಿರುನಾಣಿಯ ನ್ೀಟ್ಕುಂದ್ ರಸ್ತೆ ನಡುವೆ ನದಿ ತುಂಬಿ ಹರಿಯುತ್ತಿದ್ದು, ಇಲ್ಲಿನ ಸೇತುವೆ ಮೇಲೆ 3 ಅಡಿ ಎತ್ತರ ನೀರು ಹರಿಯುತ್ತಿದೆ. ಇದರಿಂದ ನ್ೀಟ್ಕುಂದ್ ಸುತ್ತ ಬ್ರಹ್ಮಗಿರಿ ಅರಣ್ಯ ಸುತ್ತುವರಿದಿದ್ದು, ಈಗ ಏಕೈಕ ರಸ್ತೆ ಮಾರ್ಗ ಕಡಿತವಾಗಿದೆ. ಕಳೆದ ವರ್ಷ ಇದೇ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ನಿರ್ಮಿಸಿದ್ದ ಕಬ್ಬಿಣದ ತೂಗು ಸೇತುವೆ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು.
ಈ ಪ್ರದೇಶದಲ್ಲಿ ಸುಮಾರು 12 ಕುಟುಂಬವಿದ್ದು, ಸಂಪರ್ಕ ಕಡಿತದಿಂದ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈಗ ಇರುವ ಸೇತುವೆಯನ್ನು 10 ಅಡಿ ಎತ್ತರವಾಗಿ ನಿರ್ಮಿಸಿದರೆ, ಮಳೆಗೆ ಸೇತುವೆ ಮುಳುಗುವುದನ್ನು ತಡೆಯಬಹುದಾಗಿದೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತವಾಗಿ ಮಳೆಯಾಗುತ್ತಿರುವುದರಿಂದ ಈ ವ್ಯಾಪ್ತಿಯ ಕಕ್ಕಟ್ಟ್ ಪೆÇಳೆ ತುಂಬಿ ಹರಿಯುತ್ತಿದೆ. ಅಲ್ಲದೇ, ಲಕ್ಷ್ಮಣ ತೀರ್ಥ, ರಾಮ ತೀರ್ಥ ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ.
ಧಾರಾಕಾರ ಮಳೆಯಿಂದ ವಿವಿಧೆÀಡೆ ಹಾನಿ
ಸಿದ್ದಾಪುರ : ಧಾರಾಕಾರ ಮಳೆಯಿಂದಾಗಿ ಬೃಹತ್ ಗಾತ್ರದ ಮರವೊಂದು ಮನೆ ಮೇಲೆ ಬಿದ್ದ ಪರಿಣಾಮ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದು ಮನೆಗೆ ಹಾನಿಯಾಗಿರುವ ಘಟನೆ ನೆಲ್ಲಿಹುದಿಕೇರಿ ಕಾಲೇಜು ಬಳಿ ನಡೆದಿದೆ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೃಹತ್ ಗಾತ್ರದ ಮರವೊಂದು ಬುಡಮೇಲಾಗಿ ಬಿದ್ದ ಪರಿಣಾಮ ಮಾದು ಮಾದಪ್ಪ ಎಂಬವರ ಮನೆಯ ಮುಂಭಾಗ ಹಾನಿಯಾಗಿದೆ. ಮನೆಯೊಳಗಿದ್ದ ಮನೆಯ ಮಂದಿಗೆ ಯಾವುದೇ ತೊಂದರೆ ಆಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೃಹತ್ ಗಾತ್ರದ ಮರ ಬಿದ್ದ ಸಂದರ್ಭ ದೊಡ್ಡ ಶಬ್ದ ಕೇಳಿ ಬಂದಿತು. ಅಕ್ಕಪಕ್ಕದ ಸಾರ್ವಜನಿಕರು ಓಡಾಡುವ ದಾರಿಯ ಮಧ್ಯಭಾಗ ಮರ ಬಿದ್ದಿದೆ. ಹಾಡಹಗಲೇ ಮರ ಬಿದ್ದಿದೆ. ಯಾರೂ ಇಲ್ಲದಿರುವುದರಿಂದ ಹಾಗೂ ಶಾಲೆ ಕಾಲೇಜುಗಳಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಭಾರಿ ಅನಾಹುತ ತಪ್ಪಿದಂತಾಗಿದೆ. ಮಾದಪ್ಪ ಅವರ ಮನೆಯ ಮುಂಭಾಗದಲ್ಲಿದ್ದ ಬೃಹತ್ ಗಾತ್ರದ ಮರವನ್ನು ಕಡಿಯುವಂತೆ ಹಿಂದೆ ಗ್ರಾಮ ಪಂಚಾಯಿತಿಗೆ ತಿಳಿಸಿದ್ದರು. ಪಂಚಾಯತಿ ನಿರ್ಲಕ್ಷ ವಹಿಸಿದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಹಾನಿಯಾಗಿರುವ ಮನೆಗೆ ಪರಿಹಾರವನ್ನು ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಗ್ರಾಮಲೆಕ್ಕಿಗ ಸಂತೋಷ್ ಹಾಗೂ ಪಿಡಿಓ ಅನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮನೆ ಜಖಂ, ಮಹಿಳೆಗೆ ಗಾಯ
ಗೋಣಿಕೊಪ್ಪಲು : ಕೊಡಗಿನಲ್ಲಿ ಕಕ್ಕಡ ಮಾಸ ಆರಂಭವಾಗುತ್ತಿದ್ದಂತೆಯೇ ಮುಂಗಾರುವಿನ ವರ್ಷಧಾರೆ ಕಳೆದೆರಡು ದಿನಗಳಿಂದ ಗಾಳಿಯೊಂದಿಗೆ ಜೋರಾಗಿ ಸುರಿಯುತ್ತಿದೆ. ಗುರುವಾರ ರಾತ್ರಿ ಸುರಿದ ಮಳೆ,ಗಾಳಿಗೆ ಪೊನ್ನಪ್ಪಸಂತೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಳೂರು ಗ್ರಾಮದ ದೂಪದಕೊಲ್ಲಿ ಕಾಲೋನಿ ನಿವಾಸಿ ಪರಿಶಿಷ್ಟ ವರ್ಗದ ಮಲ್ಲಿಗೆ ಎಂಬವರ ಮನೆಯು ಜಖಂಗೊಂಡಿದ್ದು, ಎಡ ಕಾಲಿಗೆ ಗಾಯಗಳಾಗಿ ಮಡಿಕೇರಿಯ ಆಸ್ಪತ್ರೆಗೆ ಸೇರಿಸಲಾಗಿದೆ.
ಮನೆಯ ಒಡತಿ ಸುಬ್ಬಿ ಸೇರಿದಂತೆ ಆರು ಮಂದಿ ಈ ಮನೆಯಲ್ಲಿ ವಾಸವಿದ್ದರು. ಸಮೀಪದಲ್ಲಿ ಸುಬ್ಬಿಯ ಹಳೆಯ ಮನೆಯು ಮಳೆ,ಗಾಳಿಯ ರಭಸಕ್ಕೆ ಕುಸಿದು ಬಿದ್ದ ಕಾರಣ ನೂತನವಾಗಿ ಕಟ್ಟಿರುವ ಶೀಟ್ ಮನೆಯ ಮೇಲೆ ಬಿದ್ದಿದೆ. ಸುಬ್ಬಿಯ ಸೊಸೆ ಮಲ್ಲಿಗೆಯ ಎಡಗಾಲಿಗೆ ಗಂಭೀರ ಗಾಯವಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಮತ್ಯಾರಿಗೂ ಯಾವುದೇ ತೊಂದರೆ ಸಂಭವಿಸಿಲ್ಲ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು,ಆಹಾರ ಪದಾರ್ಥಗಳು,ಹೊದಿಕೆ,ಹಾಸಿಗೆ,ಮಳೆಯ ನೀರಿಗೆ ಹಾಳಾಗಿವೆ.
ಸುದ್ದಿ ತಿಳಿದ ಪೊನ್ನಂಪೇಟೆ ಠಾಣಾಧಿಕಾರಿ ಡಿ.ಕುಮಾರ್ ಹಾಗೂ ಸಿಬ್ಬಂದಿ ತಡರಾತ್ರಿಯಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಜಾನೆ ಬಾಳೆಲೆ ಹೋಬಳಿಯ ಕಂದಾಯ ಅಧಿಕಾರಿ ಹರೀಶ್, ಪಂಚಾಯ್ತಿ ಪಿಡಿಓ ಸತೀಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಈ ಭಾಗದಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರವಾಗಿ ಗಾಳಿ ಸಹಿತ ಮಳೆ ಸುರಿಯುತ್ತಿದೆ. ದ.ಕೊಡಗಿನ ಕೀರೆಹೊಳೆ, ಲಕ್ಷ್ಮಣತೀರ್ಥ ನದಿಯ ನೀರಿನ ಮಟ್ಟ ಹೆಚ್ಚುತ್ತಿದೆ. ಈ ಭಾಗದ ಕೃಷಿಕರು ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಕಟ್ಟಡಕ್ಕೆ ಹಾನಿ
ಕಳೆದ ಮೂರು ದಿನಗಳ ಹಿಂದೆ ಬಿದ್ದ ಭಾರೀ ಮಳೆಗೆ ಇಲ್ಲಿನ ಮೂರ್ನಾಡು ರಸ್ತೆಯಲ್ಲಿರುವ ದೂರವಾಣಿ ಸಂಪರ್ಕದ ವಿಭಾಗೀಯ ಕಚೇರಿಯ ಕಟ್ಟಡದ ಮೇಲೆ ಮರ ಬಿದ್ದಿದ್ದು ಕಟ್ಟಡದ ಒಂದು ಭಾಗವನ್ನು ಜಖಂಗೊಳಿಸಿದೆ.
ರಭಸದ ಮಳೆ
ಗೋಣಿಕೊಪ್ಪಲು : ಸೂರ್ಯನ ಬೆಳಕನ್ನೇ ಕಾಣದ ವಾತಾವರಣದಲ್ಲಿ ಮಳೆ ನಿರಂತರವಾಗಿ ಸುರಿಯಿತು. ಇದರಿಂದ ಹಳ್ಳಕೊಳ್ಳದ ತೊರೆ ತೋಡುಗಳಲ್ಲಿ ನೀರು ತುಳುಕಾಡಿದೆ. ತಿತಿಮತಿ ಮರಪಾಲ ಬಳಿಯ ಕೀರೆಹೊಳೆ ತುಂಬಿ ಹರಿದಿದೆ.ಶುಕ್ರವಾರ ಮುಂಜಾನೆಯಿಂದ ಬೆಳಿಗ್ಗೆ 9 ಗಂಟೆ ವರೆಗೆ ಒಂದೇ ಸಮನೆ ಸುರಿಯದಿದೆ. ಬಳಿಕ ಬಿಡುವು ನೀಡುತ್ತಾ ಆಗಾಗ್ಗೆ ರಭಸವಾಗಿ ಸುರಿಯಿತು. ಭತ್ತ ನಾಟಿಮಾಡಲು ಹದಮಾಡಿರುವ ಗದ್ದೆ ಬಯಲು ಕೆರೆಯಂತೆ ಕಂಡು ಬಂದವು. ತಿತಿಮತಿ, ಆನೆಚೌಕೂರು.ಬಾಳೆಲೆ ಮೊದಲಾದ ಭಾಗಗಳಿಗೆ ಉತ್ತಮ ಮಳೆಯಾಗಿದೆ.ಗೋಣಿಕೊಪ್ಪಲು ಬಳಿಯ ತಿತಿಮತಿ ಬಳಿಯ ಕೀರೆ ಹೊಳೆಯಲ್ಲಿ ನೀರಿನ ಮಟ್ಟ ಏರಿರುವುದು.
ವರದಿ : ನಾಗರಾಜ್ಶೆಟ್ಟಿ, ಚಂದ್ರಮೋಹನ್, ಹರೀಶ್ ಮಾದಪ್ಪ, ವಾಸು, ಜಗದೀಶ್, ಡಿ.ಎಂ.ಆರ್., ದಿನೇಶ್ ಎನ್.ಎನ್.