ಗುಡ್ಡೆಹೊಸೂರು, ಜು. 17: ಇಲ್ಲಿಗೆ ಸಮೀಪದ ಚಿಕ್ಲಿಹೊಳೆ ಜಲಾಶಯದ ನಾಲಾ ವ್ಯಾಪ್ತಿಯ ಅಚ್ಚುಕಟ್ಟುದಾರರು ಜಲಾಶಯದ ನೀರಿಗಾಗಿ ಕಾಯುತ್ತಿದ್ದಾರೆ. ಕೊಳವೆ ಬಾವಿಯ ನೀರನ್ನು ಬಳಸಿ ಭತ್ತದ ಸಸಿಮಡಿ ತಯಾರಿಸಿಕೊಂಡಿದ್ದು. ಇನ್ನೂ 10 ರಿಂದ 15 ದಿನಗಳಲ್ಲಿ ಭತ್ತದ ನಾಟಿ ಕಾರ್ಯ ಪ್ರಾರಂಭಿಸಬೇಕಾಗಿದೆ. ಆದರೆ ನಾಲೆಯೊಳಗಿನ ಕಾಡು ಕಡಿಯದಿದ್ದರೆ ನೀರು ಹರಿಯುವ ಸ್ಥಿತಿಯಲ್ಲಿಲ್ಲ. ಆದುದರಿಂದ ನಾಲೆಯ ಹೂಳು ಎತ್ತುವ ಕಾಮಗಾರಿಯನ್ನು ಬೇಗನೆ ಮುಗಿಸಿ ರೈತರು ಭತ್ತ ನಾಟಿ ಕಾರ್ಯಕ್ಕೆ ನೀರನ್ನು ಒದಗಿಸುವಂತೆ ಈ ವಿಭಾಗದ ರೈತರು ಒತ್ತಾಯಿಸಿದ್ದಾರೆ.

ಚಿಕ್ಲಿಹೊಳೆ ಜಲಾಶಯವು ಬಹುತೇಕ ಭರ್ತಿಯಾಗಿದ್ದು, ಮಳೆ ಹೆಚ್ಚಾದರೆ ಹೆಚ್ಚುವರಿ ನೀರು ಕಾವೇರಿ ನದಿ ಸೇರುತ್ತದೆ. ಆದುದರಿಂದ ನೀರಾವರಿ ಇಲಾಖಾಧಿಕಾರಿಗಳು ಇತ್ತ ಗಮನ ಹರಿಸಿ ರೈತರಿಗೆ ಭತ್ತದ ನಾಟಿ ಕಾರ್ಯಕ್ಕೆ ನೀರು ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.