ಸಿದ್ದಾಪುರ, ಜು. 16: ನದಿತೀರದ ನಿವಾಸಿಗಳಿಗೆ ಅರೆಕಾಡು ಗ್ರಾಮದಲ್ಲಿ ಗುರುತಿಸಿದ ಪುನರ್ವಸತಿ ಜಾಗದಲ್ಲಿ ರಸ್ತೆ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಮುಂದಾಳತ್ವದಲ್ಲಿ ಇತ್ಯರ್ಥಗೊಳ್ಳುವ ಮೂಲಕ ರಸ್ತೆ ತೊಡಕು ಸುಖಾಂತ್ಯ ಕಂಡಿದೆ. ಕಳೆದ ಬಾರಿಯ ಪ್ರವಾಹಕ್ಕೆ ಸಿಲುಕಿ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿತೀರದ ನೂರಾರು ಮನೆಗಳು ನೆಲಸಮ ಗೊಂಡಿದ್ದವು.
ಈ ಹಿನ್ನೆಲೆಯಲ್ಲಿ ಅರೆಕಾಡು ಗ್ರಾಮದಲ್ಲಿ 8 ಎಕರೆ ಜಾಗವನ್ನು ಜಿಲ್ಲಾಡಳಿತ ಗುರುತಿಸಿತ್ತು. ಆದರೆ ಜಾಗದಲ್ಲಿ ಟಾಟಾ ಕಂಪನಿಗೆ ಸೇರಿದ ಜಾಗದ ಮುಖಾಂತರ ಪುನರ್ವಸತಿಗೆ ತೆರಳುವ ರಸ್ತೆ ವಿಚಾರದಲ್ಲಿ ಗೊಂದಲ ಏರ್ಪಟ್ಟಿತ್ತು. ನಿವೇಶನ ಗುರುತಿಸಿದ ಸ್ಥಳಕ್ಕೆ ತೆರಳಲು ರಸ್ತೆ ತೊಡಕು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಗುರುವಾರದಂದು ಜಿಲ್ಲಾಡಳಿತದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಖುದ್ದಾಗಿ ಟಾಟಾ ಕಂಪನಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ರಸ್ತೆ ವಿಚಾರದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾದರು ಅಲ್ಲದೆ ಬಹುದಿನಗಳಿಂದ ತೊಡಕಾಗಿದ್ದ ರಸ್ತೆ ವಿಚಾರ ಇದೀಗ ಇತ್ಯರ್ಥವಾಗಿ ಸಂತ್ರಸ್ತರ ಪುನರ್ವಸತಿಯ ಕನಸು ನನಸಾಗುವ ಕಾಲ ಕೂಡಿಬಂದಿದೆ.
‘ಶಕ್ತಿ’ಯೊಂದಿಗೆ ಮಾತನಾಡಿ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಗುರುತಿಸಿದ ಜಾಗಕ್ಕೆ ತೆರಳುವ ದಾರಿಯಲ್ಲಿ ಸಣ್ಣ ಸಮಸ್ಯೆಯಾಗಿತ್ತು. ಇದೀಗ ಟಾಟಾ ಕಂಪನಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು ಸಮಸ್ಯೆ ಇತ್ಯರ್ಥವಾಗಿದೆ. ಮುಂದಿನ 15 ದಿನಗಳೊಳಗೆ ಪುನರ್ವಸತಿಯ ಬಡಾವಣೆಯ ಕೆಲಸಗಳು ಮುಕ್ತಾಯವಾಗಲಿದೆ. ಪುನರ್ವಸತಿಗೆ ಗುರುತಿಸಿರುವ ಜಾಗದಲ್ಲಿ ಇರುವ ಮರಗಳನ್ನು ಕಡಿಯಲು ಈಗಾಗಲೇ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅನುಮತಿ ನೀಡಿದ್ದು, ಮುಂದಿನ ದಿನಗಳಲ್ಲಿ ಮರಗಳನ್ನು ಅರಣ್ಯ ಇಲಾಖೆ ವತಿಯಿಂದ ಕಡಿದು ತಾಲೂಕು ಕಾರ್ಯನಿರ್ವಹಣಾಧಿಕಾರಿ ಮುಖಾಂತರ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು. ಮರಗಳನ್ನು ಕಡಿದು ಅದರ ಆದಾಯವನ್ನು ಪಂಚಾಯಿತಿ ಮೂಲಕ ಪುನರ್ವಸತಿಗೆ ಬಳಸಲಾಗುವುದು. ಈಗಾಗಲೇ ಪುನರ್ವಸತಿಗೆ ಗುರುತಿಸಿದ ಜಾಗದಲ್ಲಿ ಮನೆ ನಿರ್ಮಾಣ ಉಸ್ತುವಾರಿಯನ್ನು ಪಂಚಾಯಿತಿ ಸ್ವಾಧೀನಕ್ಕೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪವಿಭಾಗಧಿಕಾರಿ ಜವರೇಗೌಡ, ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಡಿಡಿಎಲ್‍ಆರ್ ಶ್ರೀನಿವಾಸ್, ತಾಲೂಕು ಕಾರ್ಯನಿರ್ವಣಾಧಿಕಾರಿ ಸುನಿಲ್ ಕುಮಾರ್, ಕಂದಾಯ ಪರಿವೀಕ್ಷಕ ಮಧುಸೂದನ್, ಗ್ರಾಮಲೆಕ್ಕಿಗ ಸಂತೋಷ್, ಪಿಡಿಓ ಅನಿಲ್ ಕುಮಾರ್ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ, ಜಿಲ್ಲಾ ಪಂಚಾಯತ್ ಸದಸ್ಯೆ ಸುನಿತಾ ಮಂಜುನಾಥ್, ತಾಲೂಕು ಪಂಚಾಯಿತಿ ಸದಸ್ಯೆ ಸುಹಾದ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸೆಫಿಯ, ಹೋರಾಟ ಸಮಿತಿಯ ಪಿ.ಆರ್. ಭರತ್, ಗ್ರಾಮ ಪಂಚಾಯಿತಿ ಸದಸ್ಯರುಗಳು ಕಂದಾಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು. ಟಾಟಾ ಕಂಪನಿಯ ಸೀನಿಯರ್ ಜನರಲ್ ಮ್ಯಾನೇಜರ್ ಎಂ.ಬಿ. ಗಣಪತಿ, ಲೀಗಲ್ ಮ್ಯಾನೇಜರ್ ವಿಜಯ್ ಕಾರ್ನಾಡ್, ಡೆಪ್ಯೂಟಿ ಜನರಲ್ ಮ್ಯಾನೇಜರ್ ಕೆ.ಪಿ. ಅಪ್ಪಯ್ಯ ಹಾಜರಿದ್ದು ರಸ್ತೆ ನೀಡಲು ಒಪ್ಪಿಗೆ ನೀಡಿದರು.