ಗೋಣಿಕೊಪ್ಪ ವರದಿ, ಜುಲೈ 16 : ನಲ್ಲೂರು ಗ್ರಾಮದ ಕೃಷಿ ಪಂಡಿತ, ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರಿಗೆ ಬಾಬು ಜಗಜೀವನ್ ರಾಮ್ ಕೃಷಿ ಸಮ್ಮಾನ್ ರಾಷ್ಟ್ರ ಪ್ರಶಸ್ತಿ ಘೋಷಣೆಯಾಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ ವತಿಯಿಂದ ನೀಡಲಾಗುವ ಪ್ರಶಸ್ತಿಯಾಗಿದ್ದು, ಬುಧವಾರ ನವದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೀಡಲಾಯಿತು. ಈ ಸಂದರ್ಭ ಕೇಂದ್ರ ಕೃಷಿ ಮಂತ್ರಿ ನರೇಂದ್ರ ಸಿಂಗ್ ಥೋಮರ್ ಇದ್ದರು.ಪರಿಚಯ: ಇವರದ್ದು ಕೃಷಿಯಲ್ಲಿ ತೀರದ ದಾಹ. ಸಮಗ್ರ ಕೃಷಿಯೊಂದಿಗೆ ಮಾಜಿ ಸೈನಿಕನಾಗಿ ಜೈಜವಾನ್, ಜೈ ಕಿಸಾನ್ ಎಂಬ ಸಂದೇಶಕ್ಕೆ ಜೀವ ತುಂಬುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. ಮನೆಯ ಸುತ್ತಲೂ ಜೇನೊಣಗಳು, ರಾಸುಗಳು, ಮೀನುಗಳು, ಕೋಳಿ, ಬಾತು, ಕಾಫಿ, ಮೆಣಸು, ಭತ್ತ, ತರಕಾರಿ, ಬಿದಿರು ಹೀಗೆ ನೂರಾರು ಬಗೆಯ ಕೃಷಿ ಚಟುವಟಿಕೆ ಇವರಲ್ಲಿನ ಸಮಗ್ರ ಕೃಷಿಯನ್ನು ತೋರಿಸುತ್ತಿದೆ. ದಿನ ದಿನಕ್ಕೆ ಬರುವ ನೂತನ ಕೃಷಿ ತಂತ್ರಜ್ಞಾನ ಬಳಕೆ, ಬೆಳೆಗಳ ಅಭಿವೃದ್ಧಿ ಎಲ್ಲವೂ ಇವರನ್ನು ಸಮಗ್ರ ಕೃಷಿಕನ್ನಾಗಿ ಮುನ್ನಡೆಸುತ್ತಿದೆ. ಇವರ ಮಾರ್ಗದರ್ಶನಕ್ಕಾಗಿ ರೈತರು ಮನೆಯಂಗಳಕ್ಕೆ ಬರುತ್ತಿದ್ದಾರೆ.
ಕಳೆದೊಂದು ವರ್ಷದಿಂದ ಬಿದಿರು ಮತ್ತು ಔಷಧ ಮೂಲ ಗಿಡವಾದ ಚಿಯಾ ಬೆಳೆಯುತ್ತಿದ್ದಾರೆ. 4 ಎಕರೆಯಲ್ಲಿ ಚಿಯಾ ಬೆಳೆ ಬೆಳೆದಿದ್ದಾರೆ. ಹೆಚ್ಚು ಲಾಭ ಎಂಬ ಕಾರಣಕ್ಕೆ ಬಿಮಾ ಬಿದಿರು ಕೃಷಿಯನ್ನು 1 ಎಕರೆಯಲ್ಲಿ ಮಾಡಿದ್ದಾರೆ. ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಇದನ್ನು ಪ್ರಯೋಗವಾಗಿ ಇವರ ಗದ್ದೆಯಲ್ಲಿ ಕೃಷಿಗೆ ಮುಂದಾಗಿದೆ. ಈಗಾಗಲೇ 11 ತಿಂಗಳಲ್ಲಿ ಬಿದಿರು ಗಿಡ 12 ಅಡಿಗಳಷ್ಟು ಬೆಳೆದು ನಿಂತಿವೆ. ಬಿದಿರು ಬುಡಗಳ ಅಂತರದಲ್ಲಿ ಏಲಕ್ಕಿ ಬೆಳೆ ಮಾಡಿದ್ದಾರೆ.
ಭತ್ತದ ಕೃಷಿಯಲ್ಲಿ ಇಲ್ಲಿವರೆಗೆ 60 ಕ್ಕೂ ಹೆಚ್ಚು ತಳಿಯನ್ನು ಪ್ರಯೋಗ ಮಾಡಿದ್ದಾರೆ. ಹವಾಗುಣಕ್ಕೆ ಕೆಪಿಆರ್1, ಕೆಪಿಆರ್2, ಅತಿರಾ, ಎಚ್.ಕೆಪಿ10 ಸೂಕ್ತ ತಳಿ ಎಂದು ಅವರು ನಿರ್ಧರಿಸಿ 3-4 ವರ್ಷದಿಂದ ಇದೇ ತಳಿಯನ್ನು ಬೆಳೆಯುತ್ತಿದ್ದಾರೆ. ಸಮಗ್ರ ಕೃಷಿಯಾಗಿ ಅಡಕೆ, ಕಾಫಿ, ಕಾಳುಮೆಣಸು, ಬಾಳೆ, ಮೀನು ಸಾಕಣೆ, ಹಾಲು ಉತ್ಪಾದನೆ, ಕೋಳಿ, ಮೊಟ್ಟೆ ಮಾರಾಟ, ತರಕಾರಿ, ಹಣ್ಣುಗಳಾದ ಬಟರ್ಫ್ರೂಟ್, ಸಪೆÇೀಟಾ, ಮಾವು, ಹಲಸು, ಎಗ್ ಫ್ರೂಟ್, ಕರಮಂಜಿ ಪಣ್ಣ್, ರಾಂಬುತನ್, ಕಿತ್ತಳೆ, ಮಡಹಾಗಲ ಬೆಳೆದಿದ್ದಾರೆ.
3 ನೇ ಪ್ರಾಯದಲ್ಲಿ ತಂದೆ ಚಿಣ್ಣಪ್ಪ, 10 ನೇ ಪ್ರಾಯದಲ್ಲಿ ತಾಯಿ ಮುತ್ತಮ್ಮ ಅವರನ್ನು ಕಳೆದುಕೊಂಡ ತಿಮ್ಮಯ್ಯ, ಕೃಷಿಯತ್ತ ಆಸಕ್ತಿ ತೋರಿ ಕಳೆದ 20 ವರ್ಷಗಳಿಂದ ವೈಜ್ಞಾನಿಕ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ನೂತನ ಕೃಷಿ ಆವಿಷ್ಕಾರದ ಪ್ರಯೋಗಕ್ಕೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಭತ್ತ, ಕಾಫಿ, ಕಾಳುಮೆಣಸು, ಬಾಳೆ, ಶುಂಠಿ, ತರಕಾರಿ, ಮೀನು ಸಾಕಾಣಿಕೆ, ಜೇನು ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಇವರ ನಿತ್ಯದ ಕಸುಬು.
ವಾರ್ಷಿಕವಾಗಿ 400 ಕ್ವಿಂಟಾಲ್ ಭತ್ತ, 200 ಚೀಲ ಕಾಫಿ, 4 ಕ್ವಿಂಟಾಲ್ ಕಾಳುಮೆಣಸು, ತರಕಾರಿ, ಮೀನು, ಹೈನುಗಾರಿಕೆ,
(ಮೊದಲ ಪುಟದಿಂದ) ಜೇನು ಮೂಲಕ ಸಂಪಾದನೆಯಲ್ಲಿ ತೊಡಗಿಕೊಂಡಿದ್ದಾರೆ. ಪಾಳು ಬಿಟ್ಟಿರುವ ಗದ್ದೆಯಲ್ಲಿ ಭತ್ತ ಬೆಳೆಯಲು ಕೃಷಿಕರಲ್ಲಿ ಜಾಗೃತಿ ಮೂಡಿಸುತ್ತಾ ಬರುತ್ತಿದ್ದಾರೆ. 5 ವರ್ಷಗಳಿಂದ 600 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಭತ್ತ ಕೃಷಿ ಮಾಡುವಲ್ಲಿ ಸಫಲರಾಗಿದ್ದಾರೆ. ನೇರ ನಾಟಿ ವಿಧಾನ, ಯಾಂತ್ರೀಕೃತ ನಾಟಿ, ಸಸಿ ಮಡಿ ತಯಾರಿಕೆಯಲ್ಲಿ ಮ್ಯಾಟ್ ಪದ್ಧತಿ, ಮಣ್ಣಿನ ಮೂಲಕ ಮ್ಯಾಟ್ ಪದ್ಧತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ.
ಉಳುಮೆ ಇಲ್ಲದೆ ಕ್ವಿಂಟಾಲ್ಗಟ್ಟಲೆ ಭತ್ತ ಬೆಳೆದ ಸಾಧನೆ ಇವರದು. ಕೊಯ್ಲು ನಂತರ ಉದುರಿರುವ ಭತ್ತದಲ್ಲಿ ಬೆಳೆ ತೆಗೆದು 4 ಎಕ್ರೆ ಗದ್ದೆಯಲ್ಲಿ 29 ಕ್ವಿಂಟಾಲ್ ಭತ್ತ ಬೆಳೆದ ಸಾಧನೆ ಮಾಡಿದ್ದಾರೆ. ವಿವಿಧ ಗ್ರಾಮಗಳಲ್ಲಿ ಪಾಳು ಬಿಟ್ಟಿದ್ದ ಗದ್ದೆಗಳಲ್ಲಿ ಭತ್ತದ ನಾಟಿಗೆ ಪೆÇ್ರೀತ್ಸಾಹ ನೀಡುವ ಮೂಲಕ ಸುಮಾರು 600 ಎಕರೆಗೂ ಅಧಿಕ ಭತ್ತದ ಕೃಷಿ ಮಾಡಿದ್ದಾರೆ. ಸುಧಾರಿತ ತಳಿಯಾದ ಕೆಹೆಚ್ಆರ್4, ಸಿರಿ ಮತ್ತು ಕೆಹೆಚ್ಆರ್2 ತಳಿಯನ್ನು ನಾಟಿ ಮಾಡಿ, ಬಿತ್ತನೆ ಬೀಜಕ್ಕೆ ಭತ್ತ ನೀಡುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ, ಹಸಿರು ಗೊಬ್ಬರದೊಂದಿಗೆ ಜಿಂಕ್ ಹಾಗೂ ಫಾರೆಕ್ಸ್ ಬಳಸುತ್ತಿದ್ದಾರೆ.
ತರಕಾರಿ ಬೆಳೆಯಲ್ಲಿ ಬೀನ್ಸ್, ಅಲಸಂಡೆ, ಟೊಮಟೊ, ಹಸಿಮೆಣಸು, ಬೆಂಡೆ ಕಾಯಿ, ಸಂಬಾರಸೊಪ್ಪು, ದೇಶಿ ಕುಂಬಳಕಾಯಿ, ಪಾಲಕ್, ಮೂಲಂಗಿ, ಜೋಳ, ಅವರೆಕಾಳು, ಹಾಗಲಕಾಯಿ, ಸೌತೆಕಾಯಿ, ಪಡವಲಕಾಯಿ, ಬೀಟ್ರೂಟ್, ಪಾವಕ್ಕೆ (ಸಿಹಿಹಾಗಲ) ಹಾಗೂ ಈರುಳ್ಳಿ ಬೆಳೆದು ಪ್ರಯೋಗ ಮುಂದುವರಿಸಿದ್ದಾರೆ.
ಸಂದಿರುವ ಪ್ರಶಸ್ತಿಗಳು: 2015 ರಲ್ಲಿ 1 ಹೆಕ್ಟೇರ್ಗೆ 123 ಕ್ವಿಂಟಾಲ್ ಭತ್ತ ಬೆಳೆದ ಇವರ ಸಾಧನೆಯನ್ನು ಗುರುತಿಸಿದ ರಾಜ್ಯ ಸರ್ಕಾರ ಶ್ರೇಷ್ಠ ಕೃಷಿ ಪ್ರಶಸ್ತಿ ನೀಡಿತ್ತು. ಸಮಗ್ರ ಕೃಷಿಗೆ ರಾಜ್ಯ ಸರ್ಕಾರ ಮತ್ತೆ ಕೃಷಿ ಪಂಡಿತ ಪ್ರಶಸ್ತಿ ನೀಡಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳ ಸೇವಾಶ್ರಮ ವತಿಯಿಂದ ಶ್ರೀ ವೀರೇಂದ್ರ ಹೆಗಡೆ ಅವರು ನೀಡಿರುವ ಶ್ರೇಷ್ಠ ಭತ್ತ ಕೃಷಿಕ ಪ್ರಶಸ್ತಿ, ತರಕಾರಿ ಬೆಳೆಗೆ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರದಿಂದ ನೀಡಿರುವ ಉತ್ತಮ ಕೃಷಿಕ ಪ್ರಶಸ್ತಿ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ವಿವಿ ನೀಡಿರುವ ಶ್ರೇಷ್ಠ ಕೃಷಿ ಪ್ರಶಸ್ತಿ ಹಾಗೂ ವಿಶೇಷ ಪ್ರಶಸ್ತಿ, ಜಿಲ್ಲಾ ಆತ್ಮ ಯೋಜನೆ ಶ್ರೇಷ್ಠ ಕೃಷಿ ಪ್ರಶಸ್ತಿ, ಕೃಷಿ ಇಲಾಖೆ ವತಿಯಿಂದ ಶ್ರೇಷ್ಠ ಭತ್ತದ ಕೃಷಿ ಪ್ರಶಸ್ತಿ ದೊರೆತಿದೆ. ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಲಹೆ ಪಾಲಿಸಿ ಯಶಸ್ವಿಯಾಗಿದ್ದಾರೆ. - ಸುದ್ದಿಪುತ್ರ