ಕೂಡಿಗೆ, ಜು. 16: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು - ಕಾಳಿದೇವರಹೊಸೂರು ಗ್ರಾಮದ ನೂರಾರು ಗ್ರಾಮಸ್ಥರು ಹುದುಗೂರು ಹಾಲು ಉತ್ಪಾದಕರ ಸಹಕಾರ ಸಂಘದ ಮುಂಭಾಗದ ಸಭಾಂಗಣದಲ್ಲಿ ಸಭೆ ಸೇರಿ ಹುದುಗೂರು ಗ್ರಾಮದಲ್ಲಿ ಸಾಕಾನೆಗಳ ತರಬೇತಿ ಶಿಬಿರವನ್ನು ಪ್ರಾರಂಭಿಸುವಂತೆ ರಾಜ್ಯ ಪ್ರಧಾನ ಅರಣ್ಯಾಧಿಕಾರಿಗಳಿಗೆ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳಿಗೆ ಮತ್ತು ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗೆ ಹಾಗೂ ರಾಜ್ಯ ಸರ್ಕಾರದ ಅರಣ್ಯ ಸಚಿವರಿಗೆ ಮತ್ತು ಕ್ಷೇತ್ರದ ಶಾಸಕರಿಗೆ ಮನವಿ ಪತ್ರ ಸಲ್ಲಿಸಲು ತೀರ್ಮಾನ ಕೈಗೊಂಡಿದ್ದಾರೆ.
ಆನೆ ಶಿಬಿರಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಗಳು ಈ ಭಾಗದಲ್ಲಿ ಇವೆ. 25 ಕುಟುಂಬದವರು ಕಾಡಾನೆಗಳನ್ನು ಪಳಗಿಸುವ ವರ್ಗದ ಕುಟುಂಬದವರು ಈ ಭಾಗದಲ್ಲಿ ವಾಸಿಸುತ್ತಿದ್ದಾರೆ. ಹುದುಗೂರು ಗ್ರಾಮದಲ್ಲಿ ಸಾಕಾನೆ ಶಿಬಿರವನ್ನು ಪ್ರಾರಂಭಿಸಲು ಒತ್ತಾಯ ಮಾಡುವ ಬಗ್ಗೆ ಸಭೆಯಲ್ಲಿ ಹಾಜರಿದ್ದ ಎಲ್ಲಾ ಗ್ರಾಮಸ್ಥರು ಒಂದೇ ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಮದ ಯುವಕ ಸಂಘದವರು, ಗ್ರಾಮ ಜನ ಜಾಗೃತಿ ಸಮಿತಿ, ದೇವಾಲಯ ಸಮಿತಿ ಅಧ್ಯಕ್ಷರು, ಗ್ರಾಮದ ಹಿರಿಯ ನಾಗರಿಕರು ಸೇರಿದಂತೆ ಹಲವಾರು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯ ತೀರ್ಮಾನದಂತೆ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ರಾಜ್ಯ ಪ್ರಧಾನ ಅರಣ್ಯಾಧಿಕಾರಿಗೆ, ರಾಜ್ಯ ಸರ್ಕಾರದ ಅರಣ್ಯ ಸಚಿವರಾದ ಆನಂದ್ ಸಿಂಗ್ ಮತ್ತು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಮನವಿ ಪತ್ರ ನೀಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಈ ಬಗ್ಗೆ ‘ಹುದುಗೂರುವಿನ ಆನೆ ಶಿಬಿರಕ್ಕೆ ಕಾಯಕಲ್ಪ ಅಗತ್ಯ’ ಎಂಬ ಶಿರೋನಾಮೆಯಡಿ ‘ಶಕ್ತಿ’ಯಲ್ಲಿ ತಾ. 8 ರಂದು ವರದಿ ಪ್ರಕಟಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
- ಕೆ.ಕೆ. ನಾಗರಾಜ ಶೆಟ್ಟಿ.