ಗೋಣಿಕೊಪ್ಪಲು, ಜು. 16: ವನ್ಯಪ್ರಾಣಿಗಳಾದ ಹುಲಿ, ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಹಾಗೂ ಅರಣ್ಯ ಇಲಾಖೆಯ ಹಿರಿಯ ಮತ್ತು ಕಿರಿಯ (ವನ್ಯಜೀವಿ) ಅಧಿಕಾರಿಗಳ ಸಭೆಯನ್ನು ಅತೀ ಶೀಘ್ರವಾಗಿ ಆಯೋಜಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಯಿತು.

ರೈತರ ಮೇಲೆ ಇಂತಹ ಅಧಿಕಾರಿಗಳು ದರ್ಪ ತೋರುವುದು ನಿಲ್ಲಬೇಕು. ಕೇವಲ ಹುಲಿ ಸೆರೆಗೆ ಸಿಸಿ ಕ್ಯಾಮೆರಾ ಅಳವಡಿಸಿ, ಬೋನನ್ನು ಇರಿಸಿ ರಾತ್ರಿ ಹುಲಿ ಬೋನಿಗೆ ಬರುವ ಸಂದರ್ಭ ಉದ್ದೇಶಪೂರ್ವಕವಾಗಿ ಪಟಾಕಿ ಸಿಡಿಸಿ ಹುಲಿಯನ್ನು ಬೋನಿಗೆ ಬೀಳದಂತೆ ಮಾಡುತ್ತಿದ್ದಾರೆ.

ಇಂತಹ ಅಧಿಕಾರಿಗಳ ನಿರ್ಲಕ್ಷ್ಯತೆ ಹಾಗೂ ಕರ್ತವ್ಯ ಲೋಪವನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ. ಅಧಿಕಾರಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆಯ ಹಿರಿಯ ಮತ್ತು ಕಿರಿಯ (ವನ್ಯಜೀವಿ)ಅಧಿಕಾರಿಗಳ ಸಭೆಯನ್ನು ಅತೀ ಶೀಘ್ರ ನಡೆಸುವ ಮೂಲಕ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಲಾಯಿತು.

ಭೇಟಿಯ ಸಂದರ್ಭ ಜಿಲ್ಲಾ ಸಂಚಾಲಕರಾದ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ರೈತ ಮುಖಂಡರಾದ ಪುಚ್ಚಿಮಾಡ ರಾಯ್ ಮಾದಪ್ಪ, ಅಪ್ಪಚಂಗಡ ಮೋಟಯ್ಯ, ಸೇರಿದಂತೆ ಇನ್ನಿತರರು ಹಾಜರಿದ್ದರು.