ಮಡಿಕೇರಿ, ಜು. 16: ವಾಡಿಕೆಯಂತೆ ತಾ. 17 ರಿಂದ (ಇಂದಿನಿಂದ) ಕೊಡಗಿನ ಕಕ್ಕಡ (ಆಟಿ) ಮಾಸ ಆರಂಭಗೊಂಡಿದ್ದು, ಮುಂಗಾರುವಿನ ವರ್ಷಧಾರೆಯೊಂದಿಗೆ ಚಳಿ ಹಾಗೂ ಗಾಳಿ ಮುಂದುವರಿಯುವ ನಿರೀಕ್ಷೆ ಇದೆ. ಈ ಮಾಸದಲ್ಲಿ ಜಿಲ್ಲೆಯ ಪರಂಪರೆಯಂತೆ ಯಾವದೇ ಶುಭ ಕಾರ್ಯಗಳನ್ನು ಕೈಗೊಳ್ಳುದಿಲ್ಲ; ಬದಲಾಗಿ ಗ್ರಾಮೀಣ ದೇವಾಲಯಗಳಲ್ಲಿ ಈ ಮಾಸದಲ್ಲಿ ನಿತ್ಯಪೂಜೆ ಕೂಡ ಸ್ಥಗಿತಗೊಳಿಸುವುದು ಪದ್ಧತಿ.
ಆಟಿ ಮಾಸದ 18ನೇ ದಿನದಂದು (ಆಗಸ್ಟ್ -3) ಜಿಲ್ಲೆಯಲ್ಲಿ ವಿಶೇಷ ಗಿಡಮೂಲಿಕೆಯ (ಆಟಿಸೊಪ್ಪು) ತಿನಿಸು ತಯಾರಿಸಿ ಸೇವಿಸುವದರೊಂದಿಗೆ, ರೋಗ ನಿರೋಧಕ ಚೈತನ್ಯ ಪಡೆಯುವದು ಸಂಪ್ರದಾಯ. ಒಟ್ಟಿನಲ್ಲಿ ಈ ಆಟಿಮಾಸದ ಗಾಳಿ, ಮಳೆ ಹಾಗೂ ಸನ್ನಿವೇಶದ ಕುರಿತು ಸಾಕಷ್ಟು ಮುಂಜಾಗ್ರತಾ ಕ್ರಮದೊಂದಿಗೆ ಹೆಚ್ಚಾಗಿ ಶಾಖಾಹಾರ ಸೇವಿಸುವದು ವಾಡಿಕೆ.
ಆಟಿಸೊಪ್ಪು ಮಾತ್ರವಲ್ಲದೆ, ಕಣಿಲೆ, ಕೆಸ, ಸುವರ್ಣಗೆಡ್ಡೆ, ಆಟಿಕೋಳಿ, ಏಡಿ ಇತ್ಯಾದಿಯನ್ನು (ಉಷ್ಣಕಾರಕ) ಆಹಾರವಾಗಿ ಬಳಸುವದರೊಂದಿಗೆ, ಶರೀರಕ್ಕೆ ಸಮಸ್ಯೆಯಾಗದಂತೆ, ಬೆಚ್ಚನೆಯ ಉಡುಪು ಧರಿಸುವದು ಜೀವನಕ್ರಮವಾಗಿದೆ. ದನಕರುಗಳ ಸಹಿತ ಸಾಕು ಪ್ರಾಣಿಗಳನ್ನು ಕೂಡ ಮಳೆಗಾಲದ ಈ ಆಟಿ ಮಾಸದಲ್ಲಿ ಜಾಗರೂಕತೆಯಿಂದ ರೈತರು ನೋಡಿಕೊಳ್ಳುತ್ತಾರೆ.
ಅಲ್ಲದೆ, ಕೃಷಿ ಕಾಯಕವನ್ನು ಪೂರೈಸಿ ರೈತ ಕುಟುಂಬಗಳು ಒಂದು ರೀತಿಯ ವಿಶ್ರಾಂತ ಜೀವನ ನಡೆಸುವದು ಕೊಡಗಿನ ಪದ್ಧತಿಯೂ ಆಗಿದೆ. ಬಳಿಕ ಮುಂದಿನ ಕೈಲ್‍ಮುಹೂರ್ತ ಹಬ್ಬಾಚರಣೆ ಹೊತ್ತಿಗೆ ಗ್ರಾಮ ಗ್ರಾಮಗಳಲ್ಲಿ ಮತ್ತೆ ದೇವತಾ ಕೈಂಕರ್ಯದೊಂದಿಗೆ ದೈನಂದಿನ ಬದುಕು ಕಂಡುಕೊಳ್ಳುವದು ಕೊಡಗಿನ ಪರಂಪರೆಯಾಗಿದೆ.