ವೀರಾಜಪೇಟೆ, ಜು. 15 : ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಮತ್ಸ್ಯಭವನದ ಹಸಿ ಮೀನು ಮಾರಾಟದ ಮಳಿಗೆಗೆ ಮೂರನೇ ಬಾರಿಗೆ ಮೊಹರಾದ ಟೆಂಡರ್ಗಳನ್ನು ಕರೆದಿದ್ದು, ಟೆಂಡರ್ ಫಾರಂಗಳಲ್ಲಿ ಲೋಪದೋಷ ಕಂಡುಬಂದುದರಿಂದ ಟೆಂಡರ್ನ್ನು ಮುಂದೂಡಿ ಮರು ಟೆಂಡರ್ ಕರೆಯಲು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಯಾಗಿರುವ ತಹಶೀಲ್ದಾರ್ ನಂದೀಶ್ ಆದೇಶಿಸಿದ್ದಾರೆ.
ಹಸಿಮೀನು ಮಳಿಗೆಗೆಳನ್ನು ವಾರ್ಷಿಕ ಬಾಡಿಗೆ ಒಪ್ಪಂದದ ಆಧಾರದಲ್ಲಿ ಪಡೆಯಲು ಅಂತಿಮ ಮೊಬಲಗನ್ನು ನಮೂದಿಸಿ ಸುಮಾರು ಆರು ಮಂದಿ ಟೆಂಡರ್ ಹಾಕಿದ್ದರು. ಆದರೆ ಟೆಂಡರ್ ಫಾರಂನಲ್ಲಿ ಲೋಪ ದೋಷವಿದ್ದುದರಿಂದ ಕೆಲವು ಟೆಂಡರುದಾರರು ಹಾಗೂ ಟೆಂಡರ್ ಪೆಟ್ಟಿಗೆಯನ್ನು ತೆರೆಯುವ ಸಂದರ್ಭದಲ್ಲಿ ಸ್ಥಳದಲ್ಲಿಯೇ ಇದ್ದ ಪಟ್ಟಣ ಪಂಚಾಯಿತಿ ಸದಸ್ಯರು ಮುಖ್ಯಾಧಿಕಾರಿ ಶ್ರೀಧರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಟೆಂಡರ್ನಲ್ಲಿ ಗೋಲ್ಮಾಲ್ ನಡೆಯುತ್ತಿದೆ. ಲೋಪದೋಷದ ಟೆಂಡರ್ ಫಾರಂಗಳನ್ನು ಬದಲಿಸಿ ಮರು ಟೆಂಡರ್ ಕರೆಯುವಂತೆ ಆಡಳಿತಾಧಿಕಾರಿಯನ್ನು ಒತ್ತಾಯಿಸಿದರು.
ಟೆಂಡರುದಾರರಾದ ಇಲ್ಲಿನ ಗಾಂಧಿನಗರದ ಪಿ.ಎ.ಮಂಜುನಾಥ್ ಅವರು ಈಗಿನ ಟೆಂಡರ್ನ್ನು ರದ್ದು ಮಾಡದೆ ಮುಂದುವರೆಸಿದರೆ ಮೇಲಧಿಕಾರಿಗಳಿಗೆ ಆಧಾರ ಸಹಿತ ಲಿಖಿತ ದೂರು ನೀಡುವುದಾಗಿ ಹೇಳಿದರು. ಪಟ್ಟಣ ಪಂಚಾಯಿತಿ ಸದಸ್ಯ ಡಿ.ಪಿ.ರಾಜೇಶ್ ಅವರು ಈ ಗೋಲ್ಮಾಲ್ ಟೆಂಡರ್ನಿಂದ ಎಲ್ಲರಿಗೂ ಅನ್ಯಾಯವಾಗಲಿದೆ. ಈ ಟೆಂಡರ್ನ್ನು ರದ್ದುಗೊಳಿಸಬೇಕು ಎಂದರು. ಗಾಂಧಿನಗರ ಕ್ಷೇತ್ರದ ಜೂನಸುನೀತ ಮುಖ್ಯಾಧಿಕಾರಿಯೇ ಟೆಂಡರ್ ಫಾರಂನಲ್ಲಿ ಲೋಪದೋಷ ಉಂಟು ಮಾಡಿದ್ದಾರೆ. ಈ ಟೆಂಡರ್ನ್ನು ತಿರಸ್ಕರಿಸುವಂತೆ ಆಡಳಿತಾಧಿಕಾರಿಗೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸದಸ್ಯರುಗಳಾದ ಕೆ.ಬಿ. ಹರ್ಷ, ಎಸ್.ಎಚ್.ಮತೀನ್, ಮಹದೇವ್, ಸಬಾಸ್ಟಿನ್, ರಜನಿಕಾಂತ್, ಫಸಿಹ ತಬ್ಸಮ್ ಹಾಗೂ ಟೆಂಡರ್ದಾರರಾದ ಯೋಗೀಶ್ ನಾಯ್ಡು ಹಾಜರಿದ್ದರು.