ವೀರಾಜಪೇಟೆ, ಜು. 15: ಮಡಿಕೇರಿ ಕೋಟೆ ಅರಮನೆಯ ಸ್ಮಾರಕದ ರಕ್ಷಣೆಗೆ ಸಂಬಂಧಿಸಿದಂತೆ ಸರಕಾರ ಕಾಮಗಾರಿಗೆ ಬಿಡುಗಡೆ ಮಾಡಿರುವ ಅನುದಾನದಲ್ಲಿ ಸೇವಾ ಶುಲ್ಕ ವಸೂಲಿ ಮಾಡದಂತೆ ಹಾಗೂ ಕೋಟೆ, ಅರಮನೆಯ ರಕ್ಷಣೆಯ ಕಾಮಗಾರಿಗೆ ಸಂಬಂಧಿಸಿದಂತೆ ಈಗಿನ ತನಕ ಆಗಿರುವ ಕಾಮಗಾರಿಯ ಕುರಿತು ಪ್ರಾಚ್ಯ ವಸ್ತು ಇಲಾಖೆ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠಕ್ಕೆ ವಿವರವಾದ ಪ್ರಮಾಣ ಪತ್ರ ಸಲ್ಲಿಸುವಂತೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಅಭಯ ಶ್ರೀನಿವಾಸ್ ಓಕ ಅವರು ಆದೇಶಿಸಿ ರಿಟ್ ಅರ್ಜಿಯ ವಿಚಾರಣೆಯನ್ನು ತಾ.27ಕ್ಕೆ ಮುಂದೂಡಿದ್ದಾರೆ.

ನಿವೃತ್ತ ಐ.ಎ.ಎಸ್. ಅಧಿಕಾರಿ ಜೆ.ಎಸ್.ವಿರುಪಾಕ್ಷಯ್ಯ ಅವರ ರಿಟ್ ಅರ್ಜಿಯ ಪರವಾಗಿ ವಿಭಾಗೀಯ ಪೀಠದ ಮುಂದೆ ವಾದ ಮಂಡಿಸಿದ ವಕೀಲ ಎನ್.ರವೀಂದ್ರನಾಥ್ ಕಾಮತ್ ಅವರು ಕೋಟೆ ಅರಮನೆ ಸ್ಮಾರಕದ ರಕ್ಷಣೆಗಾಗಿ ಸರಕಾರದ ಅನುದಾನ ರೂ. ಎಂಟುಕೋಟಿ ಇಪ್ಪತ್ತು ಲಕ್ಷದಲ್ಲಿ ಈಗಾಗಲೇ ರೂ. 53 ಲಕ್ಷ ವೆಚ್ಚ ಮಾಡಿದರೂ ಶಿಥಿಲಗೊಂಡಿರುವ ಕೋಟೆ ಅರಮನೆ ಕಟ್ಟಡಗಳು ಬೀಳುವ ಸ್ಥಿತಿಯಲ್ಲಿದ್ದು, ದುರಸ್ತಿ ಕಾಮಗಾರಿಯಲ್ಲಿಯೂ ಕಳಪೆ ಮಟ್ಟದ ಸಾಮಗ್ರಿಗಳನ್ನು ಬಳಸಲಾಗಿದೆ. ಜೊತೆಗೆ ಪ್ರಾಚ್ಯ ವಸ್ತು ಇಲಾಖೆಯು ಸರಕಾರದಿಂದ

(ಮೊದಲ ಪುಟದಿಂದ) ಬಂದಿರುವ ಅನುದಾನದ ಹಣಕ್ಕೆ ಶೇಕಡ 23ರಷ್ಟು ಸೇವಾ ಶುಲ್ಕ ವಿಧಿಸಿ ಒಟ್ಟು ಮೊತ್ತದ ಹಣದಲ್ಲಿ ರೂ ಎರಡುಕೋಟಿ ಮೂವತ್ತು ಲಕ್ಷ ವಸೂಲಿಗೆ ಮುಂದಾಗಿದೆ. ಇದರಿಂದ ಕೋಟೆ, ಅರಮನೆ ಕಟ್ಟಡದ ದುರಸ್ತಿಗೆ ಹಣ ಸಾಲದೆ ಅಡಚಣೆ ಉಂಟಾಗಲಿದೆ ಎಂದು ವಾದಿಸಿದರು.

ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ಅಭಯ್ ಶ್ರೀನಿವಾಸ್ ಓಕ ಹಾಗೂ ನ್ಯಾಯ ಮೂರ್ತಿ ನಾಗಮೂರ್ತಿ ಪ್ರಸನ್ನ ಇವರುಗಳು ರಿಟ್ ಅರ್ಜಿಯ ವಿಚಾರಣೆ ನಡೆಸಿದರು. ಸರಕಾರದ ಪರ ವಿಜಯ ಕುಮಾರ್ ಪಾಟೀಲ್, ಪ್ರಾಚ್ಯ ವಸ್ತು ಇಲಾಖೆಯ ಪರ ವಕೀಲೆ ನಾಗಶ್ರೀ ವಾದಿಸಿದರು.