ಸೋಮವಾರಪೇಟೆ,ಜು.15: ಪಟ್ಟಣದ ಬ್ಯಾಂಕ್ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿ ಇಂದು ಮನೆಗೆ ವಾಪಸ್ ಬಂದಿದ್ದು, ಸದ್ಯಕ್ಕೆ ಆತಂಕ ದೂರವಾಗಿದೆ.
ಪಟ್ಟಣದಲ್ಲಿರುವ ಬ್ಯಾಂಕ್ ಒಂದರ ಈರ್ವರು ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಜನತೆಯಲ್ಲಿ ಆತಂಕ ಮನೆ ಮಾಡಿತ್ತು. ಬ್ಯಾಂಕ್ ಗೆ ತೆರಳಿದ್ದ ಗ್ರಾಹಕರು, ಸಿಬ್ಬಂದಿಗಳ ನೆರೆಕರೆಯವರಲ್ಲಿ ಕೋವಿಡ್ ಭಯ ಆವರಿಸಿದ್ದು, ಸಾರ್ವಜನಿಕ ವಲಯದಲ್ಲೂ ತಲ್ಲಣ ಸೃಷ್ಟಿಸಿತ್ತು.
ಕಳೆದ ಐದು ದಿನಗಳ ಹಿಂದೆ ಪಾಸಿಟಿವ್ ದೃಢಪಟ್ಟಿದ್ದರಿಂದ ಬ್ಯಾಂಕ್ ಸಿಬ್ಬಂದಿಗಳನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ವಿಷಯ ಬಹಿರಂಗವಾಗುತ್ತಲೇ ಸಾರ್ವಜನಿಕ ವಲಯದಲ್ಲಿ ತಲ್ಲಣ ಸೃಷ್ಟಿಸಿತ್ತು. ಬ್ಯಾಂಕ್ ಗೆ ತೆರಳಿದ್ದ ಗ್ರಾಹಕರು ತೀವ್ರ ಆತಂಕಕ್ಕೆ ಒಳಗಾಗಿದ್ದರೆ, ಪ.ಪಂ. ವತಿಯಿಂದ ಬ್ಯಾಂಕ್ ಕಟ್ಟಡವನ್ನು ಸ್ಯಾನಿಟೈಸ್ ಮಾಡಿ, ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿತ್ತು. ಈ ಬ್ಯಾಂಕ್ ನ ಸಿಬ್ಬಂದಿಗಳು ಹಾಗೂ ಪಿಗ್ಮಿ ಸಂಗ್ರಹಗಾರರು ಪಟ್ಟಣ ವ್ಯಾಪ್ತಿಯಲ್ಲಿ ಓಡಾಡಿದ್ದರಿಂದ ಕೊರೊನಾ ಎಲ್ಲೆಡೆ ಹರಡಿರುವ ಸಂಶಯ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇವರುಗಳ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಂದಿ ಪರೀಕ್ಷೆಗಾಗಿ ಗಂಟಲು ದ್ರವ ನೀಡಲು ಮುಂದಾಗಿದ್ದರು. ಕಂಟೈನ್ಮೆಂಟ್ ವಲಯದ ಮಂದಿಯೂ ಸಂಪರ್ಕ ತಡೆಗೆ ಒಳಗಾಗಿ ಪರೀಕ್ಷೆಗೆ ಸಿದ್ದರಾಗಿದ್ದರು. ಇಂತಹ ಪರಿಸ್ಥಿತಿಯ ನಡುವೆ ಇಂದು ಸಂಜೆ ವೇಳೆಗೆ ಸೋಂಕಿತರೆಂದು ಮಡಿಕೇರಿಗೆ ತೆರಳಿದ್ದ ಮಂದಿ ಆರೋಗ್ಯವಂತರಾಗಿ ಮನೆಗೆ ವಾಪಸ್ ಆಗಿದ್ದು ಎಲ್ಲರಲ್ಲೂ ಸಮಾಧಾನ ಮೂಡಿಸಿದೆ.
ಕಳೆದ 17 ದಿನಗಳ ಹಿಂದೆ ಈ ಬ್ಯಾಂಕ್ ಗೆ ಆಗಮಿಸಿದ್ದ ವ್ಯಕ್ತಿಯೋರ್ವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಇದರಿಂದಾಗಿ ಸ್ವಯಂ ಪ್ರೇರಣೆಯಿಂದ ಬ್ಯಾಂಕ್ನ ಈರ್ವರು ಸಿಬ್ಬಂದಿಗಳು ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ನೀಡಿದ್ದರು. ಗಂಟಲು ದ್ರವ ನೀಡಿದ 10 ದಿನಗಳ ನಂತರ ಈರ್ವರಿಗೆ ಪಾಸಿಟಿವ್ ವರದಿ ಬಂದಿತ್ತು. ಇದರಿಂದಾಗಿ ಈರ್ವರು ಸಿಬ್ಬಂದಿಗಳನ್ನು ಮಡಿಕೇರಿಯ ಅಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದೀಗ ಐದು ದಿನಗಳ ನಂತರ ಸಿಬ್ಬಂದಿಗಳು ವಾಪಸ್ ಬಂದಿದ್ದು, ಇವರುಗಳ ಪ್ರಾಥಮಿಕ ಸಂಪರ್ಕ ಹೊಂದಿದ್ದವರು, ಕಂಟೈನ್ ಮೆಂಟ್ ವಲಯದಲ್ಲಿ ಸಿಲುಕಿದ್ದವರು, ಬ್ಯಾಂಕ್ ಗೆ ತೆರಳಿದ್ದ ಗ್ರಾಹಕರು ನಿರಾಳತೆ ಹೊಂದುವಂತಾಗಿದೆ.
ಮನೆಗೆ ವಾಪಸ್ ಆದ ವ್ಯಕ್ತಿಗಳಿಗೆ ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್ ವಿಧಿಸಿದ್ದು, ಈ ದಿನಗಳಂದು ಓರ್ವರೇ ಪ್ರತ್ಯೇಕವಾಗಿರುವಂತೆ ಸೂಚನೆ ನೀಡಲಾಗಿದೆ. ಸದ್ಯ ಎಲ್ಲರ ವರದಿ 'ನೆಗೆಟಿವ್' ಬಂದಿರುವ ಹಿನ್ನೆಲೆ ಆರೋಗ್ಯ ಇಲಾಖೆ ಈ ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ.