ಮಡಿಕೇರಿ, ಜು. 15: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವಿಭಿನ್ನ ಸನ್ನಿವೇಶದ ನಡುವೆ (ಕೊರೊನಾ ಆತಂಕ) ಜರುಗಿದ್ದು, ನಿನ್ನೆ ಈ ಬಾರಿಯ ಫಲಿತಾಂಶ ಪ್ರಕಟಗೊಂಡಿದೆ. ರಾಜ್ಯದಲ್ಲಿ ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿರುವದು ಒಂದೆಡೆಯಾದರೆ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಒಟ್ಟು 12 ವಿದ್ಯಾರ್ಥಿನಿಯರು ಜಿಲ್ಲೆಗೆ ಪ್ರಥಮ ಮೂರು ಸ್ಥಾನಗಳನ್ನು ಪಡೆದುಕೊಂಡಿರುವದು ವಿಶೇಷವಾಗಿದೆ. ಇದಲ್ಲದೆ ಮೂರೂ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ತಲಾ ಒಬ್ಬೊಬ್ಬರು ಪಡೆದಿದ್ದರೆ, ತೃತೀಯ ಸ್ಥಾನವನ್ನು ತಲಾ ಇಬ್ಬರು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.ವಿಜ್ಞಾನ ವಿಭಾಗ : ವಿಜ್ಞಾನ ವಿಭಾಗದಲ್ಲಿ ಗೋಣಿಕೊಪ್ಪಲುವಿನ ವಿದ್ಯಾನಿಕೇತನ ಪದವಿಪೂರ್ವ ಕಾಲೇಜು ಗಮನಾರ್ಹ ಸಾಧನೆ ಮಾಡಿದೆ. ಈ ಕಾಲೇಜಿನ ಮೂವರು ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಇವರೊಂದಿಗೆ ಮಡಿಕೇರಿಯ ಸಂತಮೈಕಲರ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತೃತೀಯ ಸ್ಥಾನವನ್ನು ಹಂಚಿಕೊಂಡಿದ್ದಾಳೆ.
ವಿದ್ಯಾನಿಕೇತನ ಕಾಲೇಜಿನ ರಂಜನಾ ಎ.ಯು. 589 ಅಂಕದೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದು, ಮೃಣಾಲಿನಿ ತಮನ್ಕರ್ 587 ಅಂಕದೊಂದಿಗೆ ದ್ವಿತೀಯ ಹಾಗೂ ಯುಕ್ತಾ ಕಾವೇರಪ್ಪ ಕೆ. 582 ಅಂಕದೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾಳೆ. ಯುಕ್ತಾಳೊಂದಿಗೆ ಮಡಿಕೇರಿ ಸಂತ ಮೈಕಲರ ಶಾಲಾ ವಿದ್ಯಾರ್ಥಿನಿ ಪಿ.ಆರ್. ಫಾತಿಮಾ ತಸ್ಲೀನಾಳಿಗೂ
(ಮೊದಲ ಪುಟದಿಂದ) 582 ಅಂಕ ಲಭಿಸಿದ್ದು, ಜಿಲ್ಲೆಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ.
ವಾಣಿಜ್ಯ ವಿಭಾಗ
ವಾಣಿಜ್ಯ ವಿಭಾಗದಲ್ಲಿ ಮಡಿಕೇರಿಯ ಸಂತ ಮೈಕಲರ ಕಾಲೇಜು ವಿದ್ಯಾರ್ಥಿನಿ ಅಪೂರ್ವ 590 ಅಂಕದೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ವೀರಾಜಪೇಟೆಯ ಸಂತ ಅನ್ನಮ್ಮ ಕಾಲೇಜಿನ ವಿದ್ಯಾರ್ಥಿನಿಯರಾದ ಚಿತ್ರಾ ಟಿ.ಎನ್. 585 ಅಂಕದೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇದೇ ಕಾಲೇಜಿನ ಮತ್ತೋರ್ವ ವಿದ್ಯಾರ್ಥಿನಿ ದೇವಿಕಾ ಎ.ಎಂ. 584 ಅಂಕದೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಈಕೆಯೊಂದಿಗೆ ಗೋಣಿಕೊಪ್ಪ ಕಾವೇರಿ ಕಾಲೇಜಿನ ವಿದ್ಯಾರ್ಥಿನಿ ಲಿಪಿಕಾ ಬಿ.ಎಂ. ಕೂಡ 584 ಅಂಕದೊಂದಿಗೆ ಜಿಲ್ಲೆಗೆ ತೃತೀಯ ಸ್ಥಾನದ ಸಾಧನೆ ಮಾಡಿದ್ದಾಳೆ.
ಕಲಾ ವಿಭಾಗ
ಕಲಾ ವಿಭಾಗದಲ್ಲಿ ಮಡಿಕೇರಿಯ ಸಂತ ಜೋಸೆಫರ ಕಾಲೇಜು ವಿದ್ಯಾರ್ಥಿನಿ ಲಕ್ಷ್ಮಿ ಕೆ.ಎಸ್. 564 ಅಂಕದೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಮದೆನಾಡುವಿನ ಮದೆ ಮಹೇಶ್ವರ ಕಾಲೇಜು ವಿದ್ಯಾರ್ಥಿನಿ ಧನ್ಯಶ್ರೀ ಹೆಚ್.ಜಿ. 562 ಅಂಕದೊಂದಿಗೆ ದ್ವಿತೀಯ ಸ್ಥಾನಗಳಿಸಿದ್ದಾಳೆ.
ತೃತೀಯ ಸ್ಥಾನ ಸಂತ ಜೋಸೆಫರ ಕಾಲೇಜು ಹಾಗೂ ಸಂಪಾಜೆ ಪ.ಪೂ. ಕಾಲೇಜಿಗೆ ಹಂಚಿಕೆಯಾಗಿದೆ. ವಿದ್ಯಾರ್ಥಿನಿಯರಾದ ಸಂತಜೋಸೆಫರ ಕಾಲೇಜು ವಿದ್ಯಾರ್ಥಿನಿ ಅಂಕಿತಾ ಹೆಚ್.ಪಿ. 558 ಅಂಕ ಹಾಗೂ ಸಂಪಾಜೆಯ ಗೀತಾ ಹೆಚ್.ಸಿ. ಕೂಡ 558 ಅಂಕ ಪಡೆದುಕೊಂಡು ಜಿಲ್ಲೆಗೆ ತೃತೀಯ ಸ್ಥಾನವನ್ನು ಪಡೆದಿರುವದು ಈ ಬಾರಿಯ ಫಲಿತಾಂಶದ ವಿಶೇಷತೆಯಾಗಿದೆ. ಈ ಕುರಿತಾದ ಅಧಿಕೃತ ಮಾಹಿತಿಯನ್ನು ಇಂದು ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಲಿಂಗಶೆಟ್ಟಿ ಅವರು ‘ಶಕ್ತಿ’ಗೆ ನೀಡಿದರು.