ವೀರಾಜಪೇಟೆ, ಜು.14: ಇತ್ತೀಚೆಗೆ ಕೋವಿಡ್-19 ಸೋಂಕು ಬಾಧಿಸಿದ ಹಿನ್ನೆಲೆಯಲ್ಲಿ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾದ ನಂತರ ಬಿಡುಗಡೆಯಾಗಿ ಬಂದ ತಮ್ಮ ಬಡಾವಣೆಯ ವ್ಯಕಿಯೊಬ್ಬರನ್ನು ವೀರಾಜಪೇಟೆಯ ಶಾಂತಿನಗರ ಬಡಾವಣೆಯ ಜನತೆ ಹೃದಯಸ್ಪರ್ಶಿಯಾಗಿ ಸ್ವಾಗತಿಸಿದರು. ಮಡಿಕೇರಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ವೀರಾಜಪೇಟೆಯ ತಮ್ಮ ನಿವಾಸಕ್ಕೆ ಮರಳಿದಾಗ ಇದಕ್ಕಾಗಿ ಮೊದಲೇ ಕಾದು ನಿಂತಿದ್ದ ಶಾಂತಿನಗರ ಬಡಾವಣೆಯ ಜನತೆ ರೋಗ ಮುಕ್ತರಾಗಿ ಬಂದ ಈ ವ್ಯಕ್ತಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿ ಮಾದರಿಯಾದರು.
ಈ ಮೂಲಕ ಕೊರೊನಾ ವಿರುದ್ಧದ ಹೋರಾಟ ರೋಗದ ವಿರುದ್ಧವೇ ಹೊರತು ರೋಗಿಯ ವಿರುದ್ಧ ಅಲ್ಲ ಎಂಬುದನ್ನು ಶಾಂತಿನಗರದ ನಿವಾಸಿಗಳು ಸಮಾಜಕ್ಕೆ ತೋರಿಸಿಕೊಟ್ಟಿದ್ದು ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕಾಗಿ ಶ್ರಮಿಸಿದ ಶಾಂತಿನಗರ ಬಡಾವಣೆಯ ನಿವಾಸಿಗಳಾದ ದುದ್ದಿಯಂಡ ಹೆಚ್. ಸೂಫಿ, ಹ್ಯಾರಿ(ಬಾಟಾ), ದಶರಥ, ಗಿರೀಶ್, ಮಂಜು, ಅಲ್ತಾಫ್, ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯರಾದ ರಜನಿ, ಮತೀನ್, ಜಲೀಲ್ ಸೇರಿದಂತೆ ಬಡಾವಣೆಯ ಪುರುಷರ, ಮಹಿಳೆಯರ ಮತ್ತು ಮಕ್ಕಳ ಸಾಮಾಜಿಕ ಕಳಕಳಿ ಅಭಿನಂದನಾರ್ಹವಾಗಿದೆ.