ಗೋಣಿಕೊಪ್ಪಲು, ಜು.13: ಕೊಡಗು ಭಾಷಿಕ 17 ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕುಲಶಾಸ್ತ್ರೀಯ ಅಧ್ಯಯನ ನಡೆಸುವಂತೆ ಒತ್ತಾಯಿಸಿ ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದ ವತಿಯಿಂದ ಉಪ ವಿಭಾಗಾಧಿಕಾರಿ ಜವರೇಗೌಡ ಅವರ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸÀಲಾಯಿತು.

ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದ ಅಧ್ಯಕ್ಷ ಕೊರಕುಟ್ಟೀರ ಸರ ಚಂಗಪ್ಪ ಮುಂದಾಳತ್ವದಲ್ಲಿ ವಿವಿಧ ಭಾಷಿಕ ಜನಾಂಗದ ಮುಖಂಡರುಗಳು ಉಪ ವಿಭಾಗಾಧಿಕಾರಿಗಳನ್ನು ಭೇಟಿ ಮಾಡಿ ಜೂ.24ರಂದು ‘ಕಮಿಷನ್ ಫಾರ್ ಎನ್‍ಹ್ಯಾನ್ಸ್‍ಮೆಂಟ್ ಆಫ್ ಎಸ್‍ಟಿ, ಎಸ್ಸಿ ರಿಸರ್ವೇಶನ್’ ಕಲ್ಯಾಣಕೇಂದ್ರದ ಆಯೋಗದ ಅಧ್ಯಕ್ಷರಾದ ಜಸ್ಟಿಸ್ ಹೆಚ್.ಎನ್.ನಾಗಮೋಹನ್‍ದಾಸ್ ಅವರಿಗೆ 17 ಸಮುದಾಯಗಳ ವಿವರಗಳನ್ನು ಸಲ್ಲಿಸಿದ್ದೇವೆ. ಈ ಕೊಡಗು ಭಾಷಿಕ ಸಮುದಾಯಗಳು ಸಾಮಾಜಿಕವಾಗಿ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿಯಲ್ಪಟ್ಟಿದ್ದು ಈ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಮನವಿ ಮಾಡಿದ್ದೇವೆ.

17 ಸಮುದಾಯಗಳ ಮನವಿ ಪತ್ರಗಳನ್ನು ಪರಿಶೀಲಿಸಿದ ನಾಗಮೋಹನ್‍ದಾಸ್ ಆಯೋಗವು ನಮ್ಮ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದೆ ಎಂದು ಸರ ಚಂಗಪ್ಪ ಉಪವಿಭಾಗಾಧಿಕಾರಿಗಳ ಗಮನ ಸೆಳೆದರು. ಈ ಸಮುದಾಯಗಳು ಸಣ್ಣ ಪುಟ್ಟ ಕೃಷಿಭೂಮಿಯನ್ನು ನಂಬಿ ಜೀವನ ಸಾಗಿಸುತ್ತಿವೆÉ. ಈ 17 ಸಮುದಾಯಗಳ ಅಭಿವೃದ್ಧಿಗಾಗಿ ಈ ಸಮುದಾಯಗಳು ಪರಿಶಿಷ್ಟ ಪಂಗಡಕ್ಕೆ ಸೇರುವುದು ಅನಿವಾರ್ಯವಾಗಿದೆ ಎಂದರು.

ಭೇಟಿ ಸಂದರ್ಭ ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಜ್ಞರಂಡ ಜಿ.ಅಯ್ಯಪ್ಪ, ಕೊಡಗು ಸವಿತಾ ಸಮಾಜದ ಅಧ್ಯಕ್ಷ ವಿ. ಕಿರಣ್, ಪಣಿಕ ಸಮಾಜದ ಕಾರ್ಯದರ್ಶಿ ಭರತ್, ಕೊಯವ ಸಮಾಜದ ಮುಖಂಡರಾದ ಟಿ.ಕಾರ್ಯಪ್ಪ, ಭೂಣೆಪಟ್ಟಮ ಜನಾಂಗದ ಪ್ರತಿನಿಧಿ ಜೀವನ್ ಇದ್ದರು.