ಸಿದ್ದಾಪುರ, ಜು. 13: ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ಮಳೆಯಿಂದಾಗಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ. ನದಿ ತೀರದ ನಿವಾಸಿಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಕಳೆದ ವರ್ಷ ಸುರಿದ ಮಳೆಯಿಂದಾಗಿ ಸಿದ್ದಾಪುರ ಸುತ್ತಮುತ್ತ ನದಿ ತೀರದ ನೂರಾರು ಮನೆಗಳು ಹಾನಿಗೊಳಗಾಗಿತ್ತು.

ಮನೆ ಕಳೆದುಕೊಂಡ ನಿವಾಸಿಗಳು ತಮಗೆ ಜಿಲ್ಲಾಡಳಿತ ಹಾಗೂ ಸರಕಾರ ಶಾಶ್ವತ ಸೂರು ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದ್ದರು. ಅಲ್ಲದೆ ಮನೆ ಕಳೆದುಕೊಂಡ ನೂರಾರು ಕುಟುಂಬಗಳು ತಮ್ಮ ಸಂಬಂಧಿಕರ ಮನೆಯಲ್ಲಿ ಹಾಗೂ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಕೆಲವು ತಿಂಗಳು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದು ನಂತರ ತಾವು ಹಿಂದೆ ವಾಸಮಾಡುತ್ತಿದ್ದ ನದಿ ತೀರದ ಬಳಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಂಡಿದ್ದಾರೆ. ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದ ಒತ್ತುವರಿದಾರರಿಂದ ಪಡೆದುಕೊಂಡಿದ್ದು, ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆಗೊಳಿಸಿದೆ. ಅಲ್ಲದೆ ಜಾಗದಲ್ಲಿ ನಕಾಶೆಯನ್ನು ರೂಪಿಸಲಾಗಿತ್ತು. ಪಂಚಾಯಿತಿ ಮೂಲಕ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಸಿದ್ಧತೆಗಳನ್ನು ಕೈಗೊಂಡಿದ್ದರು. ಆದರೆ ಕೊರೊನಾ ವೈರಸ್ ಬಂದ ಬಳಿಕ ಜಿಲ್ಲಾಡಳಿತಕ್ಕೆ ಪುನರ್ವಸತಿ ಕಲ್ಪಿಸುವ ಯೋಜನೆಗೆ ಅಡಚಣೆ ಉಂಟಾಯಿತು. ಇದೀಗ ಮತ್ತೊಮ್ಮೆ ಕಾವೇರಿ ನದಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ನದಿ ತೀರದ ನಿವಾಸಿಗಳಿಗೆ ಸ್ಥಳೀಯ ಸರಕಾರಿ ಶಾಲೆಗಳಲ್ಲಿ ಹಾಗೂ ಸಮುದಾಯ ಭವನಗಳಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲಾಗಿದ್ದು, ಅಲ್ಲಿ ಯಾವುದೇ ಜಾತಿ-ಧರ್ಮವಿಲ್ಲದೆ ಎಲ್ಲರೂ ಒಂದಾಗಿ ಆಶ್ರಯ ಪಡೆದಿದ್ದರು. ತಮ್ಮ ಸಂಸಾರದೊಂದಿಗೆ ಆಶ್ರಯ ಪಡೆಯುತ್ತಿದ್ದರು. ಆದರೆ ಈ ಬಾರಿ ಆಕಸ್ಮಿಕವಾಗಿ ಪ್ರವಾಹ ಬಂದಲ್ಲಿ ಕಳೆದ ಬಾರಿಯ ರೀತಿಯಲ್ಲಿ ಒಟ್ಟಿಗೆ ಆಶ್ರಯ ಪಡೆಯಲು ಸಾಧ್ಯವಾಗದಾಗಿದೆ. ಕೊರೊನಾ ಆತಂಕ ಸೃಷ್ಟಿಸುತ್ತಿದೆ. ಕೊರೊನಾದಿಂದಾಗಿ ನದಿ ತೀರದ ನಿವಾಸಿಗಳಿಗೆ ಗುರುತಿಸಿದ ಪುನರ್ವಸತಿ ಜಾಗದಲ್ಲಿ ಕೂಡ ಕಾಮಗಾರಿಗೆ ತೊಡಕಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಒಟ್ಟಿನಲ್ಲಿ ನದಿ ತೀರದ ನಿವಾಸಿಗಳು ಪುನರ್ವಸತಿ ಯಾವಾಗ ಸಿಗುತ್ತದೆ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಜಿಲ್ಲಾಡಳಿತ ನದಿ ತೀರದ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿಕೊಟ್ಟಲ್ಲಿ ಸಮಸ್ಯೆಗಳು ಪರಿಹಾರ ಆಗುವ ಸಾಧ್ಯತೆ ಇದೆ ಎಂದು ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- ಎ. ಎನ್. ವಾಸು