ಸೋಮವಾರಪೇಟೆ,ಜು.13: ಬೀಟೆ ಮರದ ನಾಟಾಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಸಂದರ್ಭ ಕಾರ್ಯಾ ಚರಣೆ ನಡೆಸಿದ ಅರಣ್ಯ ಇಲಾಖಾಧಿಕಾರಿಗಳು, ರೂ. 2ಲಕ್ಷಕ್ಕೂ ಅಧಿಕ ಮೌಲ್ಯದ ಬೀಟೆ ನಾಟಾ ಸೇರಿದಂತೆ ವಾಹನವನ್ನು ವಶಕ್ಕೆ ಪಡೆದಿದ್ದಾರೆ.ಕಾರಿನಲ್ಲಿ ಅಕ್ರಮವಾಗಿ ಬೀಟೆಯನ್ನು ಸಾಗಾಟಗೊಳಿಸುತ್ತಿದ್ದ ಸೋಮವಾರಪೇಟೆ ಸಮೀಪದ ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಈರಪ್ಪ ಎಂಬವರ ಪುತ್ರ ನಿತ್ಯಾನಂದ ಹಾಗೂ ಆತನೊಂದಿಗಿದ್ದ ಮತ್ತೋರ್ವ ಆರೋಪಿ ಸ್ಥಳದಿಂದ ಪರಾರಿ ಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.ನಿನ್ನೆ ದಿನ ತಾಲೂಕಿನ ಹುದುಗೂರು ಗ್ರಾಮದ ಉಮಾಮಹೇಶ್ವರ ದೇವಾಲಯದ ಬಳಿ, ಸೋಮವಾರಪೇಟೆ-ಹಾರಂಗಿ ಮುಖ್ಯರಸ್ತೆಯಲ್ಲಿ ಬೀಟೆ ಮರದ 7 ನಾಟಾಗಳನ್ನು ಮಾರುತಿ ಎಸ್ಟೀಮ್ ಕಾರು (ಕೆ.ಎ. 04 ಎಂ.9292)ರಲ್ಲಿ ಸಾಗಿಸುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆದಿದೆ.ಅರಣ್ಯಾಧಿಕಾರಿಗಳು ಧಾಳಿ ನಡೆಸಿದ ಸಂದರ್ಭ ಕಾರಿನಲ್ಲಿದ್ದ ನಿತ್ಯಾನಂದ ಮತ್ತು ಮತ್ತೋರ್ವ ಆರೋಪಿ ಸ್ಥಳದಿಂದ ಪರಾರಿ ಯಾಗಿದ್ದು, ವಾಹನ ಸಹಿತ ಬೀಟೆ ನಾಟಾಗಳನ್ನು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್, ಎಸಿಎಫ್ ನೆಹರು ಅವರುಗಳ ಮಾರ್ಗದರ್ಶನ, ವಲಯ ಅರಣ್ಯಾಧಿಕಾರಿ ಕೊಟ್ರೇಶ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಎಂ.ಕೆ. ಮನು, ಅರಣ್ಯ ರಕ್ಷಕರುಗಳಾದ ರಾಜಣ್ಣ, ಹೆಚ್.ಪಿ. ಭೀಮಣ್ಣ, ಈರಣ್ಣ ಹಾಗೂ ಪ್ರಸಾದ್, ಸಿಬ್ಬಂದಿಗಳಾದ ರಾಜಪ್ಪ, ತಮ್ಮಯ್ಯ, ತಿಮ್ಮಯ್ಯ, ಪಾಪು ಅವರುಗಳು ಭಾಗವಹಿಸಿದ್ದರು.