ಮಡಿಕೇರಿ, ಜು. 14: ಕೆ. ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಕೆಲ ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಹೆಚ್ಚು ಕೂಲಿ ಕಾರ್ಮಿಕರು ಇರುವ ಈ ಪ್ರದೇಶ ನಿವಾಸಿಗಳಿಗೆ ದಾನಿಗಳು ಅಗತ್ಯ ಸಾಮಗ್ರಿ ವಿತರಿಸಿ ನೆರವು ನೀಡಿದರು.
ಕೆ. ನಿಡುಗಣೆ ಗ್ರಾ.ಪಂ. ಮಾಜಿ ಅಧ್ಯಕ್ಷ ಕೊಕ್ಕಲೇರ ಅಯ್ಯಪ್ಪ ನೇತೃತ್ವದಲ್ಲಿ ಗುತ್ತಿಗೆದಾರರಾದ ಜಗದೀಶ್ ರೈ, ನಿಸಾರ್, ಕೃಷ್ಣಪ್ಪ, ಧರ್ಮರಾಜು ತಮ್ಮ ಸ್ವಂತ ಖರ್ಚಿನಲ್ಲಿ ಒಂದು ವಾರಕ್ಕೆ ಬೇಕಾಗುವ ತಲಾ ರೂ. 1,500 ಬೆಲೆ ಬಾಳುವ ದಿನಸಿ ಕಿಟ್ಟನ್ನು ಸುಮಾರು 50 ಕುಟುಂಬಗಳಿಗೆ ನೀಡಿದರು.
ಹೆಬ್ಬಟ್ಟಗೇರಿ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟ ಬಳಿಕ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿತ್ತು. ಇದರಿಂದ ಸಹಜವಾಗಿ ಕೆಲಸವಿಲ್ಲದೆ ಜನರು ಜೀವನ ನಿರ್ವಹಣೆಗೆ ಪರದಾಡುತ್ತಿದ್ದರು. ಈ ಹಿನ್ನೆಲೆ ಕೊಕ್ಕಲೇರ ಅಯ್ಯಪ್ಪ ಮತ್ತು ತಂಡ ಹೆಬ್ಬಟ್ಟಗೇರಿ, ಷಣ್ಮುಗ ಕಾಲೋನಿ, ಜಹಂಗೀರ್ ಪೈಸಾರಿ, ಇಂದ್ರಪ್ರಸ್ಥ ನಗರ, ನಂದಿಮೊಟ್ಟೆ ಕಾಲೋನಿ, ನಿಸರ್ಗ ಬಡಾವಣೆಯ ನಿವಾಸಿಗಳಿಗೆ ಕಿಟ್ ವಿತರಿಸಿದರು.
ಕಿಟ್ ವಿತರಿಸಿ ಮಾತನಾಡಿದ ದಾನಿ ಕೊಕ್ಕಲೇರ ಅಯ್ಯಪ್ಪ, ಜಹಂಗೀರ್ ಪೈಸಾರಿ ವ್ಯಾಪ್ತಿಯ ನಿವಾಸಿಯೊಬ್ಬರಲ್ಲಿ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆ ಇಲ್ಲಿನ ಕೆಲ ಮನೆಗಳನ್ನು ಸೀಲ್‍ಡೌನ್ ಮಾಡಲಾಗಿತ್ತು. ಜೊತೆಗೆ ಸೋಂಕಿತ ವ್ಯಕ್ತಿ ಕೂಲಿ ಕೆಲಸ ಮಾಡುತ್ತಿದ್ದರಿಂದ ಜೊತೆಯಲ್ಲಿ ಕೆಲಸ ಮಾಡುತ್ತಿರುವವರನ್ನು 15 ದಿನ ಮನೆಯಲ್ಲೇ ಇರಬೇಕೆಂದು ಸೂಚಿಸಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚಿನವರು ದಿನಗೂಲಿಯಿಂದ ಜೀವನ ನಡೆಸುತ್ತಿದ್ದು, ಸೀಲ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ದಾನಿಗಳ ಸಹಾಯದೊಂದಿಗೆ ಇಲ್ಲಿನ ನಿವಾಸಿಗಳಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಗಿದೆ ಎಂದರು.
ಹೆಬ್ಬೆಟ್ಟಗೇರಿ ನಿವಾಸಿ ರಮೇಶ್ ಮಾತನಾಡಿ, ಸೀಲ್‍ಡೌನ್‍ನಿಂದ ಆರ್ಥಿಕ ಸಮಸ್ಯೆ ಉಂಟಾಗಿದ್ದು, ಸ್ಥಳೀಯ ಆಡಳಿತ ಕೂಡ ಸೂಕ್ತ ಸಹಾಯ ನೀಡಿಲ್ಲ. ಗ್ರಾ.ಪಂ. ಮಾಜಿ ಅಧ್ಯಕ್ಷರು ಮುತುವರ್ಜಿ ವಹಿಸಿ ಸಹಾಯ ಮಾಡಿದ್ದು, ಗ್ರಾಮಸ್ಥರ ಪರವಾಗಿ ಅವರಿಗೆ ಧನ್ಯವಾದ ಸಮರ್ಪಿಸುವುದಾಗಿ ಹೇಳಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮನೆಗಳ ಬಳಿಗೆ ತೆರಳಿ ಕಿಟ್ ವಿತರಿಸಲಾಯಿತು. ಜನ ಗುಂಪುಗೂಡದಂತೆ ನೋಡಿಕೊಳ್ಳಲಾಗಿತ್ತು.