ಭಾಗಮಂಡಲ, ಜು. 14: ಜುಲೈ ಮೊದಲ ವಾರದಲ್ಲಿ ಬಿರುಸುಗೊಂಡಿದ್ದ ಮಳೆ ಇಳಿಮುಖಗೊಂಡಿದ್ದು ರೈತರು ಕೃಷಿಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಿಂಗಳ ಹಿಂದೆ ಭತ್ತದ ಬಿತ್ತನೆ ಮಾಡಿದ್ದ ರೈತರು ನಾಟಿ ಕೆಲಸ ಆರಂಭಿಸಿದ್ದಾರೆ. ಮಳೆ ಬಿಡುವು ಕೊಟ್ಟಿರುವುದರಿಂದ ಬಿರುಸಿನ ನಾಟಿ ಮಾಡುತ್ತಿದ್ದಾರೆ. ತಣ್ಣಿಮಾನಿ ಗ್ರಾಮದ ರೈತ ದಂಡಿನ ಜಯಂತ್ ತಮ್ಮ ಭತ್ತದ ಗದ್ದೆಯಲ್ಲಿ ನಾಟಿ ಕೆಲಸ ಕೈಗೊಂಡರು. ಭಾಗಮಂಡಲ ಹೋಬಳಿ ವ್ಯಾಪ್ತಿಯ ಕೋರಂಗಾಲ, ಅಯ್ಯಂಗೇರಿ, ಸಣ್ಣಪುಲಿಕೋಟು ಗ್ರಾಮಗಳಲ್ಲಿ ಭತ್ತದ ನಾಟಿ ಕಾರ್ಯ 15-20 ದಿನಗಳ ಬಳಿಕ ನಡೆಯಲಿದೆ. ಈ ಭಾಗದಲ್ಲಿ ಇತ್ತೀಚೆಗಷ್ಟೇ ಬಿತ್ತನೆ ಕಾರ್ಯ ನಡೆದಿದ್ದು ಆಗಸ್ಟ್ 25ರ ಒಳಗಾಗಿ ನಾಟಿ ಕಾರ್ಯ ಪೂರ್ಣಗೊಳ್ಳಲಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅವಧಿಗೆ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದೆ. ಎರಡು ವರ್ಷಗಳಿಂದ ಆಗಸ್ಟ್ ತಿಂಗಳಲ್ಲಿ ಬಿರುಸಿನ ಮಳೆಯಾಗಿ ರೈತರು ಮಾಡಿದ್ದ ನಾಟಿ ಮುಳುಗಡೆಯಾಗಿತ್ತು. ರೈತರು ನಷ್ಟ ಅನುಭವಿಸಿದ್ದರು. ಮಳೆ ಬಿರುಸುಗೊಳ್ಳಬಹುದೆಂಬ ನಿರೀಕ್ಷೆಯಲ್ಲಿ ರೈತರು ಈ ವರ್ಷ ತಡವಾಗಿ ಬಿತ್ತನೆ ಮಾಡಿದ್ದಾರೆ. ಕಾವೇರಿ ನದಿ ತೀರದ ಗದ್ದೆಗಳಲ್ಲಿ ತುಸು ವಿಳಂಬವಾಗಿ ನಾಟಿ ಕಾರ್ಯ ಪೂರ್ಣಗೊಳ್ಳಲಿದೆ.