ಬೆಂಗಳೂರು, ಜು. 14: 2020ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದೆ. ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶದ ಕುರಿತು ವಿವರಿಸಿದ ಶಿಕ್ಷಣ ಸಚಿವ ಸುರೇಶ್‍ಕುಮಾರ್, ಉಡುಪಿ (ಶೇ. 90.71) ಫಲಿತಾಂಶದೊಂದಿಗೆ ಪ್ರಥಮ, ದಕ್ಷಿಣ ಕನ್ನಡ (ಶೇ, 90.71) ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಗಳಿಸಿದ್ದು, ಮೂರನೇ ಸ್ಥಾನವನ್ನು ರಾಜ್ಯದ ಅತ್ಯಂತ ಪುಟ್ಟ ಜಿಲ್ಲೆ, ಅತ್ಯಂತ ಸವಾಲುಗಳನ್ನು ಎದುರಿಸುತ್ತಿರುವ ಜಿಲ್ಲೆಯಾದ ಕೊಡಗು ಜಿಲ್ಲೆ ಪಡೆದುಕೊಂಡಿದೆ ಎಂದು ಹೇಳಿದರು. ಕಳೆದ ಬಾರಿಯು ಕೊಡಗು ತೃತೀಯ ಸ್ಥಾನ ಪಡೆದಿತ್ತು. ವಿಜಯಪುರ ಜಿಲ್ಲೆ ಈ ಬಾರಿ (ಶೇ. 54.22) ಕೊನೆಯ ಸ್ಥಾನ ಪಡೆದಿದೆ ಎಂದು ಹೇಳಿದರು.ರಾಜ್ಯದಲ್ಲಿ ಪರೀಕ್ಷೆ ಬರೆದಿದ್ದ 3,35,444 ವಿದ್ಯಾರ್ಥಿಗಳ (ಬಾಲಕರು) ಪೈಕಿ 1,83,725 ಮಂದಿ ತೇರ್ಗಡೆಯಾಗಿದ್ದಾರೆ. ಇನ್ನು ಬಾಲಕಿಯರ ಪೈಕಿ 3,39,833 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 2,33,572 ಮಂದಿ ಉತ್ತೀರ್ಣರಾಗಿದ್ದಾರೆ ಎಂದು ಮಾಹಿತಿಯಿತ್ತರು.

ಕೊಡಗಿಗೆ ಸಂಬಂಧಿಸಿದಂತೆ ಒಟ್ಟು 4997 ಮಂದಿ ಈ ಬಾರಿ ಪಿಯು ಪರೀಕ್ಷೆಗೆ ಹಾಜರಾಗಿದ್ದು, 4074 ಮಂದಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 1194 ವಿದ್ಯಾರ್ಥಿಗಳಲ್ಲಿ 737 ಮಂದಿ ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 2691 ಮಂದಿಯಲ್ಲಿ 2302 ಮಂದಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 1112 ಮಂದಿ ಪರೀಕ್ಷೆ ಬರೆದಿದ್ದು, 1035 ಮಂದಿ ಉತ್ತೀರ್ಣರಾಗಿದ್ದಾರೆ.

ಆ ಮೂಲಕ ಕಲಾವಿಭಾಗದಲ್ಲಿ ಶೇ. 61.73,

(ಮೊದಲ ಪುಟದಿಂದ) ವಾಣಿಜ್ಯ ವಿಭಾಗದಲ್ಲಿ ಶೇ. 85.54 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ. 93.08 ಫಲಿತಾಂಶ ಬಂದಿದೆ.

ಪುನರಾವರ್ತಿತರಲ್ಲಿ 338 ಮಂದಿ ಪರೀಕ್ಷೆ ಬರೆದಿದ್ದು, 103 ಮಂದಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 116 ಮಂದಿಯಲ್ಲಿ ಕೇವಲ 17 ಮಂದಿ ಮಾತ್ರ ಉತ್ತೀರ್ಣರಾಗಿದ್ದು, ಶೇ. 14.66 ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 161 ಮಂದಿ ಪರೀಕ್ಷೆ ಬರೆದು 59 ಮಂದಿ ಮಾತ್ರ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 61 ಮಂದಿ ಪರೀಕ್ಷೆಗೆ ಹಾಜರಾಗಿ 27 ಮಂದಿ ತೇರ್ಗಡೆ ಹೊಂದಿದ್ದು, ಒಟ್ಟು ಶೇ. 30.47 ಫಲಿತಾಂಶ ಬಂದಿದೆ. ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಫಲಿತಾಂಶ ಬಂದಿದ್ದು, ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆಯಲು ಪ್ರಯತ್ನಿಸಲಾಗುವದು ಎಂದು ಡಿಡಿಪಿಯು ಶಿವಲಿಂಗಶೆಟ್ಟಿ ತಿಳಿಸಿದ್ದಾರೆ.