ಮಡಿಕೇರಿ, ಜು. 14: ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ವೈದ್ಯಕೀಯ ಉಪಕರಣಗಳ ಖರೀದಿ ಹೆಸರಿನಲ್ಲಿ ಭಾರೀ ಅವ್ಯವಹಾರ ಮಾಡಿದೆ ಎಂದು ಆರೋಪಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕೊಡಗು ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ರಾಜ್ಯದ ಬಿಜೆಪಿ ಸರ್ಕಾರ ಕೊರೊನಾ ಸಂಬಂಧ ಜನರ ಹಿತಕಾಯುವ ಬದಲು ವೈದ್ಯಕೀಯ ಉಪಕರಣಗಳನ್ನು ಯಾವದೇ ಟೆಂಡರ್ ಇತ್ಯಾದಿ ಕ್ರಮಗಳನ್ನು ಅನುಸರಿಸದೆ ದುಪ್ಪಟ್ಟು ಹಣವನ್ನು ನೀಡಿ ಖರೀದಿಸುವ ಮೂಲಕ ಅವ್ಯವಹಾರ ನಡೆಸಿದೆ ಎಂದು ದೂರಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕರ್, ರಾಜ್ಯ ಸರ್ಕಾರವು ಕೊರೊನಾ ಪರೀಕ್ಷಾ ಕಿಟ್, ಮಾಸ್ಕ್, ಆಕ್ಸಿಜನ್ ಕಿಟ್, ವೆಂಟಿಲೇಟರ್ ಇತ್ಯಾದಿಗಳನ್ನು ಅವುಗಳ ದರಕ್ಕಿಂತ ಹೆಚ್ಚಿನ ಮೊತ್ತ ಪಾವತಿಸಿ ಖರೀದಿಸಿದೆ. ಯಾವದೇ ಟೆಂಡರ್ ಕರೆಯದೆ ನಿಯಮಗಳನ್ನು ಪಾಲಿಸದೆ ಬೇಕಾಬಿಟ್ಟಿಯಾಗಿ ಹಣ ಪಾವತಿಸಿ, ಹಣವನ್ನು ಪೋಲು ಮಾಡುವ ಮೂಲಕ ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಿದೆ ಎಂದು ಆಪಾದಿಸಿದರಲ್ಲದೆ, ರಾಜ್ಯ ಸರ್ಕಾರ ವೈದ್ಯಕೀಯ ಉಪಕರಣಗಳ ಖರೀದಿ ಸಂಬಂಧ ರಾಜ್ಯದ ಜನತೆಗೆ ಖರ್ಚು ವೆಚ್ಚದ ಸಮಗ್ರ ಮಾಹಿತಿಯನ್ನು ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಸ್‍ಡಿಪಿಐ ಪ್ರಮುಖರಾದ ಅಫ್ಸರ್ ಕೊಡ್ಲಿಪೇಟೆ, ಮನ್ಸೂರ್, ಪೀಟರ್, ಅಬ್ದುಲ್ ಅಡ್ಕರ್, ಪಿಎಫ್‍ಐ ಜಿಲ್ಲಾಧ್ಯಕ್ಷ ಅಮಿನ್ ಮೊಯ್ಸಿನ್ ಇತರರಿದ್ದರು.