24 ಗಂಟೆಗಳಲ್ಲಿ 2496 ಪ್ರಕರಣಗಳು

ಬೆಂಗಳೂರು, ಜು. 14: ಮಾರಕ ಕೊರೊನಾ ವೈರಸ್‍ಗೆ ಕರ್ನಾಟಕದಲ್ಲಿ ಇಂದು ಮತ್ತೆ 87 ಮಂದಿ ಸಾವನ್ನಪ್ಪಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 2496 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕರ್ನಾಟಕ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕರ್ನಾಟಕದಲ್ಲಿ ಇಂದು 2496 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ರಾಜ್ಯಾದ್ಯಂತ ಒಟ್ಟಾರೆ ಸೋಂಕಿತರ ಸಂಖ್ಯೆ 44,077ಕ್ಕೆ ಏರಿಕೆಯಾಗಿದೆ. ಇನ್ನು ಇಂದೂ ಕೂಡ ರಾಜ್ಯಾದ್ಯಂತ 87 ಮಂದಿ ಸೋಂಕಿತರು ಬಲಿಯಾಗಿದ್ದು, ಆ ಮೂಲಕ ರಾಜ್ಯದಲ್ಲಿ ಒಟ್ಟಾರೆ ಕೊರೊನಾ ವೈರಸ್‍ಗೆ ಬಲಿಯಾದವರ ಸಂಖ್ಯೆ 844ಕ್ಕೆ ಏರಿಕೆಯಾಗಿದೆ. ಆತಂಕಕಾರಿ ವಿಚಾರವೆಂದರೆ ರಾಜಧಾನಿ ಬೆಂಗಳೂರು ನಗರವೊಂದರಲ್ಲಿಯೇ 56 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಅಷ್ಟು ಮಾತ್ರವಲ್ಲದೆ ಬೆಂಗಳೂರಿನಲ್ಲಿ ಇಂದೂ ಕೂಡ ಮತ್ತೆ ಹೊಸ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದ್ದು, ಇಂದು 1267 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅಂತೆಯೇ ಇಂದು ರಾಜ್ಯಾದ್ಯಂತ 844 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ತಂಡ ನಿಯೋಜನೆಗೆ 24 ಗಂಟೆ ಗಡುವು

ಬೆಂಗಳೂರು, ಜು. 14: ಐಎಲ್‍ಐ, ಸಾರಿ, ಐಸೋಲೇಷನ್ ನಲ್ಲಿರುವವರು, ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರನ್ನು ಪರಿಶೀಲನೆ ನಡೆಸಲು ತಂಡ ನಿಯೋಜಿಸಲು ಬೂತ್ ಮಟ್ಟದ ಕಾರ್ಯ ಪಡೆಗಳ ಅಧಿಕಾರಿಗಳಿಗೆ ರಾಜ್ಯ ಸರ್ಕಾರ 24 ಗಂಟೆಗಳ ಗಡುವು ನೀಡಿದೆ. ಬೂತ್ ಮಟ್ಟದ ಕಾರ್ಯಪಡೆಗಳಿಗೆ ನೀಡಬೇಕಾಗಿರುವ ಮಾರ್ಗಸೂಚಿಗಳ ಕುರಿತು ವಿವರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು, ಐಎಲ್‍ಐ, ಸಾರಿ, ಐಸೋಲೇಷನ್‍ನಲ್ಲಿರುವವರು, ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರನ್ನು ಪರಿಶೀಲನೆ ನಡೆಸಲು ತಂಡ ನಿಯೋಜಿಸಲು ಬೂತ್ ಮಟ್ಟದ ಕಾರ್ಯಪಡೆಗಳ ಅಧಿಕಾರಿಗಳಿಗೆ 24 ಗಂಟೆಗಳ ಗಡುವು ನೀಡಲಾಗಿದೆ. ನಿಯೋಜನೆಗೊಂಡ ತಂಡಗಳು ತಮ್ಮ ತಮ್ಮ ಬೂತ್‍ಗಳಲ್ಲಿರುವ ಪ್ರತೀ ಮನೆಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಐಸೋಲೇಷನ್‍ನಲ್ಲಿರುವವರು ಮನೆಯಲ್ಲಿಯೇ ಇದ್ದಾರೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆಯೇ ಎಂಬ ಮಾಹಿತಿಯನ್ನು ಕಲೆ ಹಾಕಲಿದ್ದಾರೆ. ಸಾರಿ ಹಾಗೂ ಐಎಲ್‍ಐನಿಂದ ಬಳಲುತ್ತಿರುವ ಜನರನ್ನು ಪರೀಕ್ಷೆಗೊಳಪಡಿಸುವ ಕೆಲಸಗಳೂ ಇದೇ ವೇಳೆ ನಡೆಯುತ್ತವೆ. ಕೊರೊನಾ ಪಾಸಿಟಿವ್ ಬಂದ ಜನರನ್ನು ಕೂಡಲೇ ಅವರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿರುವವರನ್ನು 24 ಗಂಟೆಗಳೊಳಗೆ ಕಂಡು ಹಿಡಿಯುವ ಕಾರ್ಯ ಮಾಡುತ್ತಾರೆಂದು ಹೇಳಿದ್ದಾರೆ.

ರಾಜಸ್ಥಾನ ರಾಜಕೀಯ ಬಿಕ್ಕಟ್ಟು ತೀವ್ರ

ಜೈಪುರ, ಜು. 14: ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿರುವಂತೆ, ಸಚಿನ್ ಪೈಲಟ್ ಗುಂಪಿನ ಕೆಲ ಶಾಸಕರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಇರುವ ಶಾಸಕರ ಬೆಂಬಲ ತಿಳಿಯಲು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ತಮ್ಮಗೆ 109 ಶಾಸಕರ ಬೆಂಬಲ ಇರುವುದಾಗಿ ಅಶೋಕ್ ಗೆಹ್ಲೋಟ್ ಗುಂಪಿನ ಶಾಸಕರು ಹೇಳುತ್ತಿದ್ದಾರೆ. ಆದರೆ, ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ನಡೆಯಬೇಕು. ಇದರಲ್ಲಿ ಅಶೋಕ್ ಗೆಹ್ಲೋಟ್ ಅವರಿಗೆ 109 ಶಾಸಕರ ಬೆಂಬಲ ಇದೆಯೇ ಎಂಬುದು ಗೊತ್ತಾಗಲಿದೆ ಎಂದು ಜೈಪುರದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರು ಹಾಜರಾಗಿದ್ದ ಸಚಿನ್ ಪೈಲಟ್ ಗುಂಪಿನ ಶಾಸಕ ರಮೇಶ್ ಮೀನಾ ಹೇಳಿದ್ದಾರೆ. ಸೋಮವಾರ ಹಾಗೂ ಮಂಗಳವಾರ ಜೈಪುರದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದಿಂದ ದೂರ ಉಳಿದಿದ್ದ ಶಾಸಕರಲ್ಲಿ ರಮೇಶ್ ಮೀನಾ ಕೂಡಾ ಒಬ್ಬರಾಗಿದ್ದು, ಅವರನ್ನು ಸಚಿನ್ ಪೈಲಟ್ ಹಾಗೂ ವಿಶ್ವೇಂದ್ರ ಸಿಂಗ್ ಜೊತೆಗೆ ಇಂದು ಕಾಂಗ್ರೆಸ್ ಸಂಪುಟದಿಂದ ಕಿತ್ತು ಹಾಕಲಾಗಿದೆ. ಅಶೋಕ್ ಗೆಹ್ಲೋಟ್ ಅವರಿಗೆ 109 ಶಾಸಕರ ಬೆಂಬಲವಿದೆ ಎಂಬುದು ಸರಿಯಲ್ಲ ಎಂದು ಹಿರಿಯ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಶಾಸಕ ಭನ್ವರ್ ಲಾಲ್ ಶರ್ಮಾ ಕೂಡಾ ಹೇಳಿದ್ದಾರೆ.

2 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸ್ಥಗಿತಕ್ಕೆ ಆದೇಶ

ಬೆಂಗಳೂರು, ಜು. 14: ಕೋವಿಡ್ ಸೋಂಕಿತರಿಗೆ ಸರ್ಕಾರ ನಿಗದಿ ಮಾಡಿದ ಶೇ. 50 ರಷ್ಟು ಬೆಡ್ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಎರಡು ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಚಿಕಿತ್ಸೆಯನ್ನು ಸ್ಥಗಿತಗೊಳಿ ಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ವಸಂತ ನಗರದಲ್ಲಿರುವ ವಿಕ್ರಂ ಆಸ್ಪತ್ರೆ ಹಾಗೂ ಜಯನಗರದಲ್ಲಿರುವ ಅಪೊಲೋ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಅಧಿಕೃತ ಜ್ಞಾಪನಾ ಪತ್ರವನ್ನು ರವಾನಿಸಿದ್ದಾರೆ. ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಆದ ಮಾತುಕತೆ ಪ್ರಕಾರ ಸರ್ಕಾರಕ್ಕೆ ಶೇ. 50 ರಷ್ಟು ಬೆಡ್ ನೀಡಲು ಕಳೆದ ವಾರವಷ್ಟೇ ಖಾಸಗಿ ಆಸ್ಪತ್ರೆಗಳು ಒಪ್ಪಿಗೆ ನೀಡಿದ್ದವು. ಆದರೆ ಇದುವರೆಗೂ ತಮ್ಮಲ್ಲಿರುವ ಬೆಡ್‍ಗಳ ಮಾಹಿತಿ, ಕೋವಿಡ್ ಸೋಂಕಿತರನ್ನು ದಾಖಲಿಸಿಕೊಂಡಿರುವ ವಿಷಯ, ಇಂತಿಷ್ಟು ಬೆಡ್‍ಗಳನ್ನು ನೀಡುವ ಬಗ್ಗೆ ಮಾಹಿತಿ ನೀಡದ ಹಿನ್ನೆಲೆ ನಿನ್ನೆ ಜಿಲ್ಲಾಧಿಕಾರಿಗಳು ಈ ಎರಡು ಖಾಸಗಿ ಆಸ್ಪತ್ರೆಗಳಿಗೆ ನೋಟೀಸ್ ನೀಡಿದ್ದರು. 24 ಗಂಟೆಗಳ ಒಳಗಾಗಿ ಜಿಲ್ಲಾಡಳಿತಕ್ಕೆ ಸ್ಪಷ್ಟ ಕಾರಣ ಕೇಳಿ ನೋಟೀಸ್ ನೀಡಿತ್ತು. ಆದರೆ ನೋಟೀಸಿಗೆ ಉತ್ತರಿಸದಿರುವ ಹಿನ್ನೆಲೆ ತಡರಾತ್ರಿ ಬಿಬಿಎಂಪಿ ಅಧಿಕಾರಿಗಳು ಎರಡೂ ಆಸ್ಪತ್ರೆಗಳಿಗೆ ಭೇಟಿ ನೀಡಿ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿ ತಕ್ಷಣ ಬೆಡ್‍ಗಳನ್ನು ನೀಡುವಂತೆ ಸೂಚಿಸಿದ್ದರು.

ಇಂದು ಸಿಬಿಎಸ್‍ಇ ಎಸ್‍ಎಸ್‍ಎಲ್‍ಸಿ ಫಲಿತಾಂಶ

ನವದೆಹಲಿ, ಜು. 14: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‍ಇ) 10ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಬುಧವಾರ ಪ್ರಕಟಿಸಲಾಗುವುದು. ‘ನನ್ನ ಪ್ರೀತಿಯ ಮಕ್ಕಳು, ಪೋಷಕರು ಮತ್ತು ಶಿಕ್ಷಕರೇ, ಸಿಬಿಎಸ್‍ಇ ಮಂಡಳಿಯ 10ನೇ ತರಗತಿ ಪರೀಕ್ಷಾ ಫಲಿತಾಂಶಗಳನ್ನು ನಾಳೆ ಪ್ರಕಟಿಸಲಾಗುವುದು. ಎಲ್ಲಾ ವಿದ್ಯಾರ್ಥಿಗಳ ಯಶಸ್ಸನ್ನು ನಾನು ಬಯಸುತ್ತೇನೆ’ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಟ್ವೀಟ್ ಮಾಡಿದ್ದಾರೆ. ಇಂದೇ ಫಲಿತಾಂಶ ಪ್ರಕಟವಾಗಲಿದೆ ಎಂದು ಮಂಗಳವಾರ ಬೆಳಿಗ್ಗೆಯಿಂದಲೇ ಕೆಲ ಚಾನೆಲ್‍ಗಳಲ್ಲಿ ಸುದ್ದಿ ಹರಿದಾಡಲು ಆರಂಭಿಸುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಆತಂಕವನ್ನುಂಟು ಮಾಡಿತ್ತು. ಈ ಹಿನ್ನೆಲೆ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಮಂಡಳಿಯ 10ನೇ ತರಗತಿ ಫಲಿತಾಂಶಗಳನ್ನು ಇಂದು ಪ್ರಕಟಿಸುವುದಿಲ್ಲ ಎಂದು ಸಿಬಿಎಸ್‍ಇ ಪ್ರಧಾನ ಕಚೇರಿಯು ಮೊದಲ ಟ್ವೀಟ್‍ನಲ್ಲಿ ಹೇಳಿತ್ತು. ಇದರ ನಂತರ, ಡಾ. ಪೋಖ್ರಿಯಾಲ್ ಅವರು ಟ್ವೀಟ್ ಮಾಡಿ ನಾಳೆ ಫಲಿತಾಂಶಗಳು ಹೊರಬೀಳಲಿವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ. ಮಂಡಳಿಯು ನಿನ್ನೆ 12ನೇ ತರಗತಿ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಿತ್ತು. ನಂತರ ಮಂಡಳಿಯ 10ನೇ ತರಗತಿಫಲಿತಾಂಶಗಳ ಬಗ್ಗೆ ಹೆಚ್ಚಿನ ಕುತೂಹಲವಿತ್ತು.

ಪರಿಶಿಷ್ಟರ ಸೌಲಭ್ಯ ವಿಶೇಷಚೇತನರಿಗೂ ಲಭ್ಯ

ನವದೆಹಲಿ, ಜು. 14: ದೈಹಿಕ ನ್ಯೂನತೆಯಿಂದ ಬಳಲುತ್ತಿರುವ ಯಾವುದೇ ವಿಶೇಷಚೇತನರು ಸಾರ್ವಜನಿಕ ಉದ್ಯೋಗ ಮತ್ತು ಶಿಕ್ಷಣದಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಸಿಕ್ಕುವ ಎಲ್ಲಾ ಅರ್ಹ ರಿಯಾಯಿತಿಗಳನ್ನು ತಾವೂ ಪಡೆದುಕೊಳ್ಳಬಹುದು ಎಂದು ಭಾರತದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ನೇತೃತ್ವದ ಮೂವರು ನ್ಯಾಯಾಧೀಶರ ನ್ಯಾಯಪೀಠವು ಈ ತೀರ್ಪು ನೀಡಿದ್ದು ದೆಹಲಿ ಹೈಕೋರ್ಟ್‍ನ 2012 ರ ತೀರ್ಪನ್ನು ಎತ್ತಿಹಿಡಿದಿದೆ. ಅನ್ಮೋಲ್ ಭಂಡಾರಿ ಅವರಂತೆ ದೈಹಿಕ ನ್ಯೂನತೆ ಹೊಂದಿರುವ ವಿಶೇಷಚೇತನರೂ ಕೂಡ ಸಾಮಾಜಿಕವಾಗಿ ಹಿಂದುಳಿದಿದ್ದಾರೆ ಎಂದು ಹೈಕೋರ್ಟ್ ಸರಿಯಾಗಿ ಅಭಿಪ್ರಾಯಪಟ್ಟಿದೆ ಮತ್ತು, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ನೀಡಲಾಗುವ ಎಲ್ಲಾ ಅರ್ಹ ರಿಯಾಯಿತಿಗಳಿಗೆ ಅವರೂ ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ಮತ್ತು ವಕೀಲ ರಾಜನ್ ಮಣಿ ಅವರು ಪ್ರತಿನಿಧಿಸುವ ವಿಶೇಷಚೇತನ ವ್ಯಕ್ತಿ ಪಂಜಾಬ್ ಮೂಲದ ಆರ್ಯನ್ ರಾಜ್ ಚಂಡೀಘರ್ ಸರ್ಕಾರಿ ಕಾಲೇಜ್ ಆಫ್ ಆಟ್ರ್ಸ್ ವಿರುದ್ಧ ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಮೂರ್ತಿ ನಾರಿಮನ್ ಅವರನ್ನೊಳಗೊಂಡ ನ್ಯಾಯಪೀಠ ತೀರ್ಪು ನೀಡಿದೆ.