ಮಡಿಕೇರಿ, ಜು. 14: ಕೋವಿಡ್ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್ ತಂಡಗಳಲ್ಲಿ ಒಂದಾದ ಆಶಾ ಕಾರ್ಯಕರ್ತೆಯರು ಕೋವಿಡ್ ಸೋಂಕಿಗೆ ಒಳಗಾಗುತ್ತಿದ್ದು, ಸೋಂಕಿಗೆ ಒಳಗಾದ ಕಾರ್ಯಕರ್ತೆಯರಿಗೆ ಸೂಕ್ತ ಪರಿಹಾರ, ಸಂಪೂರ್ಣ ಉಚಿತ ಚಿಕಿತ್ಸೆ, ಅಗತ್ಯ ಇರುವ ಆರೋಗ್ಯ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಬೇಕು ಹಾಗೂ ಆಶಾ ಕಾರ್ಯಕರ್ತೆಯರ ಗೌರವಧನವನ್ನು 12 ಸಾವಿರಕ್ಕೆ ಹೆಚ್ಚಿಸಬೇಕೆಂದು ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ರಾಜ್ಯ ಸರಕಾರವನ್ನು ಪ್ರತಿಭಟನೆ ಮೂಲಕ ಒತ್ತಾಯಿಸುತ್ತಿದ್ದು,
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಸಂಯೋಜಿತ ಕೊಡಗು ಜಿಲ್ಲಾ ಘಟಕ ಜಿಲ್ಲೆಯಾದ್ಯಂತ ಇದಕ್ಕೆ ಬೆಂಬಲ ನೀಡಿತು. ಘಟಕದ ಜಿಲ್ಲಾ ಅಧ್ಯಕ್ಷೆ ಪೂರ್ಣಿಮಾ ಅವರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಸೀಲ್ಡೌನ್ ಪ್ರದೇಶಗಳನ್ನು ಹೊರತುಪಡಿಸಿ ಎಲ್ಲಾ ಗ್ರಾಮ ಪಂಚಾಯಿತಿಗಳ ಪಿಡಿಒಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಆಲೂರು-ಸಿದ್ದಾಪುರ: ಶನಿವಾರಸಂತೆ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಗ್ರಾ.ಪಂ. ಪಿ.ಡಿ.ಒ. ಮೇದಪ್ಪ ಅವರ ಮೂಲಕ ಮನವಿ ಸಲ್ಲಿಸಿದರು. ಈ ಸಂದರ್ಭ ಆಶಾ ಕಾರ್ಯಕರ್ತೆಯರಾದ ಉಷಾ ಜಯೇಶ್, ಎಸ್.ಪಿ. ಭಾಗ್ಯ, ಸೌಭಾಗ್ಯ ಇತರರು ಇದ್ದರು.ಸೋಮವಾರಪೇಟೆ: ಹರದೂರು ಗ್ರಾ.ಪಂ. ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಕಾರ್ಯಕರ್ತೆಯರಾದ ಪ್ರೇಮಾ, ರಾಣಿ, ಉಷಾ, ಚಿತ್ರ ಉಪಸ್ಥಿತರಿದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.