ಮಡಿಕೇರಿ, ಜು. 12 : ಗಡಿಭಾಗಗಳಲ್ಲಿ ತಪಾಸಣಾ ಕೇಂದ್ರಗಳು ಇಲ್ಲದೆ ಇರುವುದು ಮತ್ತು ಇರುವ ಕೇಂದ್ರಗಳು ಸಕ್ರಿಯವಾಗದೆ ಇರುವುದೇ ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿರುವುದಕ್ಕೆ ಪ್ರಮುಖ ಕಾರಣವೆಂದು ಟೀಕಿಸಿದ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸೋಂಕು ಹರಡುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದೆ.

ನಗರದ ಜಿ.ಪಂ ಸಭಾಂಗಣದಲ್ಲಿ ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರೊಂದಿಗೆ ಚರ್ಚಿಸಿದ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಬಿ.ದೇವಯ್ಯ, ಈ ಹಿಂದೆ ರಾಜ್ಯ ಸರ್ಕಾರ ಕೊರೊನಾ ವೈರಸ್ ಹರಡದಂತೆ ಉತ್ತಮ ನಿರ್ಧಾರಗಳನ್ನು ಕೈಗೊಂಡು ಯಶಸ್ವಿಯಾಗಿತ್ತು. ಆದರೆ ಸೋಂಕು ವ್ಯಾಪಕವಾಗಿ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ಸಂದರ್ಭ ಮಾತನಾಡಿದ ಚೇಂಬರ್‍ನ ಪ್ರಮುಖರು ಆಸ್ತಿ ತೆರಿಗೆ ಪಾವತಿಸಲು ಆ.30ರ ವರೆಗೆ ಅವಕಾಶವನ್ನು ಕಲ್ಪಿಸಿಕೊಟ್ಟಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ವಿ.ಸೋಮಣ್ಣ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಜಂಟಿಯಾಗಿ ಚರ್ಚಿಸಿ ಕಾನೂನಿನ ಚೌಕಟ್ಟಿನಡಿ ಕ್ರಮ ಕೈಗೊಳ್ಳಲಿದ್ದಾರೆ.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ, ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಧನಂಜಯ, ಪ್ರಧಾನ ಕಾರ್ಯದರ್ಶಿ ಸಂತೋಷ್ ಅನ್ವೇಕರ್, ಸಹ ಕಾರ್ಯದರ್ಶಿ ವಿನಾಯಕ್ ಕುಡ್ತೇಕರ್, ಖಜಾಂಚಿ ಅಹಮದ್ ಕಬೀರ್ ಹಾಜರಿದ್ದರು.