ವೀರಾಜಪೇಟೆ, ಜು. 11: ಕೊರೊನÀ ಸೋಂಕಿತ ವ್ಯಕ್ತಿಯ ಮನೆಯನ್ನು ಸೀಲ್‍ಡೌನ್ ಮಾಡಿ ಈ ನಿರ್ಬಂಧದ ಬಂಧನದಿಂದ ಮುಕ್ತಗೊಳಿಸಿ. 14 ದಿನಗಳ ನಂತರ ನಾವುಗಳು ಸೀಲ್‍ಡೌನ್ ಪ್ರದೇಶದಲ್ಲಿ ಇರುವುದಿಲ್ಲ. ಸರ್ಕಾರ ನಮ್ಮನ್ನು ರಕ್ಷಣೆ ಮಾಡಿಲ್ಲ, ನಮ್ಮನ್ನು ನಾವೇ ರಕ್ಷಿಸಿಕೊಂಡಿದ್ದೇವೆ ಎಂದು ಶಾಂತಿನಗರ ನಿವಾಸಿಗಳು ದಿಢೀರ್ ಇಂದು ಅಪರಾಹ್ನ ಬೀದಿಗೆ ಬಂದು ಪ್ರತಿಭಟನೆ ನಡೆಸಿದರು.
ದೊಡ್ಡಟ್ಟಿ ಚೌಕಿಯಿಂದ ಗೋಣಿಕೊಪ್ಪ ರಸ್ತೆಯ ಒಂದು ಬದಿಯಲ್ಲಿರುವ ಶಾಂತಿನಗರದ ಸೀಲ್‍ಡೌನ್ ಪ್ರದೇಶದಲ್ಲಿರುವ ನಿವಾಸಿ ಡಿ.ಎಚ್ ಸೂಫಿ ಮಾತನಾಡಿ ಕಳೆದ 10 ದಿನಗಳ ಹಿಂದೆ ಶಾಂತಿನಗರದಲ್ಲಿ ಕುಟುಂಬದ ಒಬ್ಬರಲ್ಲಿ ಕೊರೊನ ವರದಿಯಲ್ಲಿ ಪಾಸಿಟಿವ್ ಸೋಂಕು ಕಂಡು ಬಂದಿದೆ. ಅವರ ಕುಟುಂಬದ ಗಂಟಲು ದ್ರವಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅಂದಿನಿಂದ ಇಲ್ಲಿನ 58 ಮನೆಗಳ 450 ಜನಸಂಖ್ಯೆಯ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿತ್ತು. ಇಂದಿಗೆ 10 ದಿನ ಕಳೆದಿದೆ. ಸೋಂಕಿತ ವ್ಯಕ್ತಿಯ ಕುಟುಂಬದವರ ಗಂಟಲು, ಮೂಗಿನ ದ್ರವಗಳನ್ನು ಪರೀಕ್ಷಿಸಿದಾಗ ಉಳಿದ 5 ಜನರಲ್ಲಿ ಸೋಂಕು ಇರುವುದು ಇಂದು ದೃಢಪಟ್ಟ ಹಿನ್ನೆಲೆಯಲ್ಲಿ 14 ದಿನಗಳ ನಂತರವು ಮತ್ತೆ ಇದೇ ಪ್ರದೇಶವನ್ನು ಮತ್ತೊಂದು 14 ದಿನ ಸೀಲ್‍ಡೌನ್ ಮಾಡಲಾಗುವುದು ಎಂಬ ಸರ್ಕಾರದ ಅಧಿಕಾರಿಗಳ ನಿಯಮಕ್ಕೆ ನಾವು ವಿರೋಧ ವ್ಯಕ್ತ ಪಡಿಸುತ್ತಿದ್ದೇವೆ. ಸರ್ಕಾರದ ಆದೇಶದ ಮೊದಲ 14 ದಿನಗಳನ್ನು ನಾವುಗಳು ಕಡ್ಡಾಯವಾಗಿ ಪಾಲಿಸುತ್ತೇವೆ, ಗೌರವಿಸುತ್ತೇವೆ. ನಮ್ಮನ್ನು ಈ ಯಾತನೆಯಿಂದ ಬಿಡುಗಡೆ ಗೊಳಿಸದಿದ್ದರೆ 58 ಕುಟುಂಬಗಳ ಮನೆಯ ಸದಸ್ಯರು ರಸ್ತೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. ಸರ್ಕಾರ ಕೇವಲ 2 ಪ್ಲಾಸ್ಟಿಕ್ ಹೊದಿಕೆ 2 ಮಾತ್ರೆಗಳನ್ನು ಮಾತ್ರ ನೀಡಿ ಕೈ ತೊಳೆದುಕೊಂಡಿದೆ. ಸರ್ಕಾರದ ಸಹಾಯಹಸ್ತ ಈ ನರಕಯಾತನೆಯ ನಿರ್ಬಂಧ ನಮಗೆ ಬೇಕಾಗಿಲ್ಲ. ಇದರಿಂದ ನಮ್ಮನ್ನು ಬಿಡುಗಡೆಗೊಳಿಸಿದರೆ ಸಾಕು, ಇದೇ ಪ್ರದೇಶದಲ್ಲಿ 5ಮಂದಿಗೆ ಪಾಸಿಟಿವ್ ಬಂದ ಕುಟುಂಬವನ್ನು ಬೇರೆ ಕಡೆಗೆ ಸ್ಥಳಾಂತರಿಸಿ ನಿರ್ಬಂಧದಿಂದ ಈ ಪ್ರದೇಶವನ್ನು ಮುಕ್ತಗೊಳಿಸಿ ಎಂದು ಅಲ್ಲಿನ ನಿವಾಸಿಗಳು ತಾಲೂಕು ತಹಶೀಲ್ದಾರ್ ಎಲ್.ಎಂ.ನಂದೀಶ್, ಪೊಲೀಸ್ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಅಧಿಕಾರಿಗಳ ಮುಂದೆ ಖುದ್ದಾಗಿ ತಮ್ಮ ಅಳಲನ್ನು ತೋಡಿಕೊಂಡರು.
ತಹಶೀಲ್ದಾರ್ ನಂದೀಶ್ ಅವರು ಈ ಸಂಬಂಧದಲ್ಲಿ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರಲ್ಲದೆ ತಾಲೂಕು ಆಡಳಿತದ ಮುಂದಿನ ಆದೇಶದ ತನಕ ಎಲ್ಲರೂ ಕ್ವಾರಂಟೈನ್‍ನಲ್ಲಿ ಮುಂದುವರೆಯಬೇಕು ಎಂದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವರ್ತಕರಾದ ಎ.ಎನ್.ದಶರಥ ಅವರು ಮಾತನಾಡಿ ಈ ಪ್ರದೇಶದಲ್ಲಿ ನಿತ್ಯ ದುಡಿಯುವ ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಉದ್ಯಮಿಗಳಿದ್ದು ಸೀಲ್‍ಡೌನ್‍ನಿಂದ ಎಲ್ಲರೂ ತೊಂದರೆ ಅನುಭವಿಸು ವಂತಾಗಿದೆ. ಪ್ರದೇಶದ ಒಂದು ಕುಟುಂಬಕ್ಕೆ ಕೊರೊನ ಸೋಂಕು ತಗುಲಿದರೆ ಆ ಕುಟುಂಬವನ್ನು ಮಾತ್ರ ಬೇರೆಡೆಗೆ ಸ್ಥಳಾಂತರಿಸಿ ಉಳಿದವರಿಗೆ ಮುಕ್ತ ರಕ್ಷಣೆ ಕೊಡಬೇಕು ಎಂದು ತಹಶೀಲ್ದಾರ್ ಅವರಲ್ಲಿ ವಿನಂತಿಸಿದರು.
ಕ್ವಾರಂಟೈನ್ ಪ್ರದೇಶದ ನಿವಾಸಿಗಳ ಪ್ರತಿಭಟನೆ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಕ್ಯಾತೆಗೌಡ, ಎಸ್.ಐ. ಬೋಜಪ್ಪ, ಪಟ್ಟಣ ಪಂಚಾಯಿತಿ ಸದಸ್ಯರಾದ ಜಲೀಲ್, ವಿ.ಆರ್. ರಜನಿಕಾಂತ್, ಮಾಜಿ ಉಪಾಧ್ಯಕ್ಷೆ ತಸ್ಲೀಂ ಅಕ್ತರ್ ಮತ್ತಿತರರು ಹಾಜರಿದ್ದರು..