ಸಿದ್ದಾಪುರ, ಜು. 11: ಕಾಡಿಗೆ ತೆರಳಿದ ಕಾಡಾನೆಗಳ ಹಿಂಡು ಇದೀಗ ಮತ್ತೆ ನಾಡಿಗೆ ಲಗ್ಗೆಯಿಟ್ಟು ದಾಂಧಲೆ ನಡೆಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕಳೆದ ಒಂದು ವಾರಗಳ ಹಿಂದೆ ನೆಲ್ಲಿಹುದಿಕೇರಿ ಹಾಗೂ ಅಭ್ಯತ್‍ಮಂಗಲ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡುಗಳನ್ನು ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟಿದ್ದರು. ಆದರೆ ಕಾಡಾನೆಗಳ ಹಿಂಡಿನ ಪೈಕಿ ಎರಡು ಗುಂಪುಗಳಾಗಿದ್ದು, ಒಂದು ಗುಂಪು ಕಾಡಿಗೆ ತೆರಳದೇ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದವು. ಇದೀಗ ಕಳೆದ ಕೆಲವು ದಿನಗಳಿಂದ ಮರಿ ಆನೆಗಳು ಸೇರಿದಂತೆ ಕಾಡಾನೆಗಳ ಹಿಂಡು ನೆಲ್ಲಿಹುದಿಕೇರಿ, ಬೆಟ್ಟದಕಾಡು, ಅತ್ತಿಮಂಗಲ ಭಾಗದಲ್ಲಿ ರಾತ್ರಿ ಸಮಯದಲ್ಲಿ ಸುತ್ತಾಡುತ್ತಿದೆ. ಅಲ್ಲದೇ ಬೆಟ್ಟದಕಾಡು ಭಾಗದ ಕೆಲವು ಮನೆಗಳ ಸುತ್ತ ಓಡಾಡುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಇದಲ್ಲದೇ ಕಾಫಿ ತೋಟಗಳಲ್ಲಿ ದಾಂಧಲೆ ನಡೆಸುತ್ತಿದ್ದು, ಕೃಷಿ ಫಸಲುಗಳು ಕೂಡ ನಾಶವಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದಲ್ಲದೇ ಚೆಟ್ಟಳ್ಳಿ ಭಾಗದ ಕೂಡ್ಲೂರು ಚೆಟ್ಟಳ್ಳಿ, ಪೆರುಂಬಕೊಲ್ಲಿ ಭಾಗದಲ್ಲಿ ಕೂಡ 8ಕ್ಕೂ ಅಧಿಕ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಆತಂಕ ಸೃಷ್ಟಿಸುತ್ತಿದೆ. ಕೂಡಲೇ ಕಾಡಾನೆ ಹಾವಳಿಯನ್ನು ತಡೆಗಟ್ಟಬೇಕೆಂದು ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.