ಮಡಿಕೇರಿ, ಜು. 11: ಭಾರತೀಯ ಜನತಾ ಪಾರ್ಟಿಯನ್ನು ವಿಶಾಲ ದೃಷ್ಟಿಕೋನದೊಂದಿಗೆ, ತತ್ವ- ಸಿದ್ಧಾಂತದ ನೆಲೆಗಟ್ಟಿನಲ್ಲಿ ರಾಷ್ಟ್ರೀಯ ವಿಚಾರಧಾರೆಯ ಅಡಿಯಲ್ಲಿ ಕಟ್ಟಿ ಬೆಳೆಸಲಾಗಿದ್ದು, ಇಂದಿನ ಸನ್ನಿವೇಶದಲ್ಲಿ ಜನಸೇವೆಯ ಮೂಲಕ ಸಂಘಟನೆಯನ್ನು ಮುನ್ನಡೆಸಬೇಕೆಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಕರೆ ನೀಡಿದ್ದಾರೆ. ನಗರದ ಬಾಲಭವನದಲ್ಲಿ ಇಂದು ಪಕ್ಷದ ಕೊಡಗು ಜಿಲ್ಲಾ ಘಟಕದ ನೂತನ ಪದಾಧಿ ಕಾರಿಗಳು ಹಾಗೂ ಮಂಡಲ ಪ್ರಮುಖರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.ದೇಶದಲ್ಲಿ ಜಾಗತಿಕ ಕೊರೊನಾ ತಡೆಗಟ್ಟುವಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಸರಕಾರವು ಆತ್ಮ ನಿರ್ಭರ ಭಾರತ ಪರಿಕಲ್ಪನೆಯೊಂದಿಗೆ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಬಿಜೆಪಿ ಕಾರ್ಯಕರ್ತರು ಈ ಕಾರ್ಯಕ್ರಮಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವಲ್ಲಿ ಮನೆ ಮನೆ ಸಂಪರ್ಕ ಅಭಿಯಾನ ಮುಂದುವರೆಸಬೇಕೆಂದು ಸಂಸದರೂ ಆಗಿರುವ ನಳಿನ್ ಕುಮಾರ್ ನೆನಪಿಸಿದರು.
ಸಾಮೂಹಿಕ ನಿರ್ಧಾರ: ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮುನ್ನ ಬಿಜೆಪಿ ಕೋರ್ ಕಮಿಟಿಯಲ್ಲಿ ಚರ್ಚಿಸಿ, ಅನಂತರ ಪದಾಧಿಕಾರಿಗಳು ಒಗ್ಗೂಡಿ ಸಾಮೂಹಿಕವಾಗಿ ನಿರ್ಧಾರ ಕೈಗೊಳ್ಳುವುದರೊಂದಿಗೆ ಪಕ್ಷಕ್ಕಾಗಿ ಶ್ರಮಿಸಬೇಕೆಂದು ಒತ್ತಿ ಹೇಳಿದ ಅವರು, ಜವಾಬ್ದಾರಿಯುತರು ಪತ್ರಿಕಾ ಹೇಳಿಕೆ ಅಥವಾ ಅಂತರ್ಜಾಲಗಳಲ್ಲಿ ಅಭಿಪ್ರಾಯ ಹರಿಯಬಿಡದಂತೆ ತಾಕೀತು ಮಾಡಿದರು.ಕಾರ್ಯಕರ್ತರಿಗೆ ಹಿತನುಡಿ: ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಮಾತನಾಡಿ, ಜಾಗತಿಕ ಕೊರೊನಾ ತಡೆ ಗಟ್ಟಲು ಪ್ರತಿ ಯೊಬ್ಬರು ಮಾಸ್ಕ್ ಧರಿಸುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಿತನುಡಿಯಾಡಿದರು. ಮುಂಜಾಗ್ರತಾ ಕ್ರಮವಾಗಿ ಕಷಾಯ ಸೇವಿಸುವುದು; ಸ್ವಚ್ಛತೆಗೆ ಒತ್ತು ನೀಡುವುದು ಅನಿವಾರ್ಯವೆಂದು ಅವರು ಮಾರ್ನುಡಿದರು. ಕೇಂದ್ರ ಸರಕಾರದ ಯೋಜನೆಗಳೊಂದಿಗೆ, ಆಯುಷ್ ಇಲಾಖೆಯ ಔಷಧೋಪಚಾರ ಕುರಿತು ಪ್ರತಿ ಮನೆಗೆ ತೆರಳಿ ಜನತೆಯಲ್ಲಿ ಅರಿವು ಮೂಡಿಸುವುದು ಕಾರ್ಯಕರ್ತರ ಜವಾಬ್ದಾರಿಯೆಂದು ನೆನಪಿಸಿದರು.
ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕತ್ರಯರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್, ಎಂ.ಪಿ. ಸುನಿಲ್ ಸುಬ್ರಮಣಿ, ರಾಜ್ಯ ಪ್ರಮುಖರುಗಳಾದ ಉದಯಕುಮಾರ್ ಶೆಟ್ಟಿ, ಗೋಪಾಲಕೃಷ್ಣ ಹೇರಳೆ, ಪ್ರಸಾದ್, ಮಾಜೀ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಸೇರಿದಂತೆ ಎಲ್ಲ ನೂತನ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಥಮವಾಗಿ ರಾಜ್ಯಾಧ್ಯಕ್ಷರ ಆಗಮನ ಸಂದರ್ಭ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಜಿಲ್ಲಾ ಪ್ರಮುಖರು, ನಳಿನ್ ಕುಮಾರ್ ಕಟೀಲ್ ಅವರಿಗೆ ಕೊಡಗಿನ ಸಾಂಪ್ರದಾಯಿಕ ಪೀಚೆಕತ್ತಿಯೊಂದಿಗೆ ಶಾಲು ಹೊದಿಸಿ ಮಾಲಾರ್ಪಣೆ ಮೂಲಕ ಗೌರವಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಪ್ರಾಸ್ತಾವಿಕ ನುಡಿಯೊಂದಿಗೆ, ಭಾರತಿ ರಮೇಶ್ ವಂದೇ ಮಾತರಂ ಹಾಡಿದರು. ಪ್ರಧಾನ ಕಾರ್ಯದರ್ಶಿ ರವಿ ಕಾಳಪ್ಪ ನಿರೂಪಿಸಿದರು. ಇನ್ನೋರ್ವ ಪದಾಧಿಕಾರಿ ಅರುಣ್ ಭೀಮಯ್ಯ ವಂದನಾರ್ಪಣೆ ನೆರವೇರಿಸಿದರು.