ಮಡಿಕೇರಿ, ಜು. 11: ಒಂದೆಡೆ ಜಾಗತಿಕ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವುದು ಸೇರಿದಂತೆ ನೆರೆಯ ಚೀನಾ ಸಹಿತ ಶತ್ರು ರಾಷ್ಟ್ರಗಳಿಂದ ಭಾರತದ ಭೂ ಭಾಗಗಳನ್ನು ಕಬಳಿಸುವ ಹುನ್ನಾರ ನಡೆಸುತ್ತಿರುವ ಕಷ್ಟಕರ ಪರಿಸ್ಥಿತಿ ನಿಭಾಯಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಗತ್ತಿಗೆ ಮಾದರಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಬಣ್ಣಿಸಿದರು.

ನಗರದಲ್ಲಿ ಬಿಜೆಪಿ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ತೀರಾ ಕಷ್ಟ ಕಾಲದಲ್ಲಿ ದೇಶವನ್ನು ಸುರಕ್ಷಿತವಾಗಿ ಮುನ್ನಡೆಸುವಲ್ಲಿ ಪ್ರಧಾನಿ ಬಗ್ಗೆ ಜಗತ್ತಿನ ನಾಯಕರು ಮೆಚ್ಚುಗೆ ಹೊಂದಿರುವುದಾಗಿ ಉಲ್ಲೇಖಿಸಿದರು.

ಕೇಂದ್ರದಲ್ಲಿ ಮೋದಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರಕಾರಗಳಿಂದ ಜನರ ಪ್ರಾಣ ರಕ್ಷಣೆಗಾಗಿ ಕೈಗೊಂಡಿ ರುವ ನಿರ್ಧಾರಗಳನ್ನು ಬಿಜೆಪಿ ಜನರೆಡೆಗೆ ಕೊಂಡೊಯ್ಯು ವಂತೆ ಅವರು ಕರೆ ನೀಡಿದರು.

ಸರ್ಕಾರದ ಕಾರ್ಯ ಶ್ಲಾಘನೀಯ: ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವ್ವದ ರಾಜ್ಯ ಸರ್ಕಾರ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶ್ಲಾಘಿಸಿದ್ದಾರೆ. ಕಾರ್ಯಕರ್ತರ ಸಭೆಗೆ ಮುನ್ನ ಸುದರ್ಶನ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲಾ ಜಿಲ್ಲೆಗಳಲ್ಲಿಯೂ ಕೋವಿಡ್ ಆಸ್ಪತ್ರೆ ಪ್ರಾರಂಭಿಸಲಾಗಿದೆ. ಖಾಸಗಿ ಆಸ್ಪತ್ರೆಗಳನ್ನು ಸಜ್ಜುಗೊಳಿ ಸಲಾಗಿದೆ.

ಆಶಾ ಕಾರ್ಯಕರ್ತೆಯರ ಉಪಯೋಗ ಪಡೆಯಲಾಗಿದೆ. ಗುಣಮುಖರಾದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂತಹ ವಿಚಾರಗಳನ್ನು ಜನರಿಗೆ ಮನದಟ್ಟು ಮಾಡಿ ಧೈರ್ಯ ತುಂಬುವ ಕೆಲಸವಾಗಬೇಕೆಂದು ಹೇಳಿದರು.

ಕೋವಿಡ್ ನಿಯಂತ್ರಣ ದೊಂದಿಗೆ ಕೊಡಗು ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ ಪ್ರಕೃತ್ತಿ ವಿಕೋಪ ಹಾನಿ ತಡೆಗಟ್ಟುವ ನಿಟ್ಟಿನಲ್ಲಿಯೂ ಸರ್ಕಾರ ಸಮರ್ಪಕ ತಯಾರಿ ಕೈಗೊಂಡಿದೆ ಎಂದು ತಿಳಿಸಿದರು.

ಬಿಜೆಪಿ ಬಲವರ್ಧನೆಗೆ ರಾಜ್ಯವ್ಯಾಪಿ ಕಾರ್ಯಕ್ರಮ ಕೈಗೊಳ್ಳ ಲಾಗುತ್ತಿದೆ. 311 ಮಂಡಲಗಳಲ್ಲಿಯೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಬಲವರ್ಧನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಮೆಡಿಕಲ್ ಕಿಟ್ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು ಮೊದಲು ಇಂದಿರಾಗಾಂಧಿ ಕ್ಯಾಂಟೀನ್‍ನ ಅವ್ಯವಹಾರದ ಮಾಹಿತಿ ನೀಡಲಿ ಎಂದು ತಿರುಗೇಟು ನೀಡಿದರು.

ಕೊರೊನಾ ನಿಯಂತ್ರಣಕ್ಕಾಗಿ ದೇಶದಲ್ಲಿ ಪ್ರಧಾನಿ ಕರೆಯಂತೆ ಲಾಕ್‍ಡೌನ್ ಆಗಿತ್ತು ಎಂದ ಅವರು, ಸೋಂಕು ಸ್ವಲ್ಪ ನಿಯಂತ್ರಣದಲ್ಲಿಯೂ ಇತ್ತು. ಬಳಿಕ ಆರ್ಥಿಕ ಸಂಕಷ್ಟವೂ ಎದುರಾಗಿ ಆತ್ಮನಿರ್ಭರ ಭಾರತ ಯೋಜನೆ ಅಡಿಯಲ್ಲಿ ರೂ. 20 ಲಕ್ಷ ಕೋಟಿ ಆರ್ಥಿಕ ಸಹಾಯ ಘೋಷಣೆ ಮಾಡಲಾಯಿತು ಎಂದರು.

ಸ್ವಾವಲಂಭಿ ಭಾರತ ಆಗಬೇಕೆಂಬುದು ಪ್ರಧಾನಿಯವರ ಆಶಯವಾಗಿದ್ದು, ಆ ನಿಟ್ಟಿನಲ್ಲಿ ದೇಶೀಯ ಉತ್ಪಾದನೆಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ ಎಂದು ನೆನಪಿಸಿದರು.

ಇದೇ ವೇಳೆ ಭಾರತೀಯ ಜನತಾ ಪಕ್ಷ ಕೂಡ ‘ಸೇವಾ ಹೆ ಸಂಘಟನ್’ ಎಂಬ ಘೋಷಣೆ ಮಾಡಿದ್ದು, ರಾಜ್ಯದಲ್ಲಿ ಒಂದೂವರೆ ಕೋಟಿ ವಲಸೆ ಕಾರ್ಮಿಕರಿಗೆ ಆಹಾರ ಒದಗಿಸಲಾಗಿದೆ.

ಈ ಕುರಿತು ಇನ್ನಷ್ಟು ಕಾರ್ಯ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.