ಸಿಎಂ ನಿವಾಸದಲ್ಲಿ ಕೋವಿಡ್
ಬೆಂಗಳೂರು, ಜು. 10: ಗೃಹ ಕಚೇರಿ ಕೃಷ್ಣಾದಲ್ಲಿ ಕೆಲ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿರುವ ಕಾರಣ ಇಂದಿನಿಂದ ಕೆಲ ದಿನಗಳ ಕಾಲ ಮನೆಯಿಂದಲೇ ನನ್ನ ಕರ್ತವ್ಯಗಳನ್ನು ನಿರ್ವಹಿಸಲಿದ್ದೇನೆ ವೀಡಿಯೋ ಕಾನ್ಫರೆನ್ಸ್ ಮುಖಾಂತರ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಆರೋಗ್ಯವಾಗಿದ್ದೇನೆ. ಎಲ್ಲರೂ ಮುನ್ನೆಚ್ಚರಿಕೆಯ ಕ್ರಮಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ. ಸಾಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಿ ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಶಾಲಾ ಕಚೇರಿಗಳಿಗೆ ಶನಿವಾರ ರಜೆ
ಬೆಂಗಳೂರು, ಜು. 10: ಶಿಕ್ಷಣ ಇಲಾಖೆಯ ಎಲ್ಲಾ ಶಾಲಾ ಕಚೇರಿಗಳಿಗೆ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರಗಳನ್ನು ಸೇರಿಸಿಕೊಂಡಂತೆ 2020ರ ತಾ. 10 ರಿಂದ ಎಲ್ಲಾ ಶನಿವಾರಗಳವರೆಗೆ ರಜೆ ಅನ್ವಯಿಸುವಂತೆ ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶಿಸಿದ್ದಾರೆ. ಕೋವಿಡ್-19 ಸೋಂಕು ಹರಡುವಿಕೆಯನ್ನು ನಿಯಂತ್ರಣ ಹಿನ್ನೆಲೆ ಶಿಕ್ಷಣ ಇಲಾಖೆಯ ಎಲ್ಲಾ ಶಾಲೆಗಳಿಗೆ ಕಚೇರಿಗಳಿಗೆ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರಗಳನ್ನು ಸೇರಿಸಿಕೊಂಡಂತೆ 2020ರ ಜುಲೈ ಎಲ್ಲಾ ಶನಿವಾರ ಗಳಂದು ವಿಪತ್ತು ನಿರ್ವಹಣಾ ಕಾಯ್ದೆ 2005 ರಡಿಯಲ್ಲಿ ಹೊರಡಿಸಲಾಗಿರುವ ಆದೇಶ ಅನ್ವಯವಾಗುತ್ತದೆ. ಈ ರಜೆಯು ಕೋವಿಡ್-19 ಕಾರ್ಯಕ್ಕೆ ನಿಯುಕ್ತರಾಗಿರುವ ಶಿಕ್ಷಕರು, ಅಧಿಕಾರಿ ಸಿಬ್ಬಂದಿಯವರಿಗೆ ಹಾಗೂ ಎಸ್.ಎಸ್.ಎಲ್.ಸಿ. ಮೌಲ್ಯ ಮಾಪನ ಕಾರ್ಯಕ್ಕೆ ನಿಯೋಜಿತರಾಗಿರುವ ಶಿಕ್ಷಕರು ಅಧಿಕಾರಿ ಸಿಬ್ಬಂದಿಯವರಿಗೆ, ಅನ್ವಯವಾಗುವುದಿಲ್ಲವೆಂದು ಸ್ಪಷ್ಟಪಡಿಸಿದೆ.
ಐಸಿಎಸ್ಇ-ಐಎಸ್ಸಿ ಫಲಿತಾಂಶ ಪ್ರಕಟ
ಬೆಂಗಳೂರು, ಜು. 10: ಐಸಿಎಸ್ಇ ಮತ್ತು ಐಎಸ್ಸಿಯ 10, 12ನೇ ತರಗತಿಯ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ರಾಜ್ಯದ ಶೇ. 100 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪರೀಕ್ಷೆ ಬರೆದಿದ್ದ ರಾಜ್ಯದ 339 ಐಸಿಎಸ್ಇ ಶಾಲೆಗಳ 19,770 ವಿದ್ಯಾರ್ಥಿಗಳು ಮತ್ತು 41 ಐಎಸ್ಸಿ ಶಾಲೆಗಳ 1,804 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟು ತೇರ್ಗೆಡೆಯಾದ ಐಸಿಎಸ್ಇ ವಿದ್ಯಾರ್ಥಿಗಳ ಪೈಕಿ 50.76 ರಷ್ಟು ಬಾಲಕ ರಾಗಿದ್ದು, ಉಳಿದವರು ಬಾಲಕಿಯರು. ಐಸಿಇ ವಿದ್ಯಾರ್ಥಿಗಳಲ್ಲಿ, ಶೇ. 48.76 ಬಾಲಕರು ಮತ್ತು ಉಳಿದವರು ಬಾಲಕಿಯರಾಗಿದ್ದಾರೆ. ದೇಶಾದ್ಯಂತ ಈ ವರ್ಷ ಒಟ್ಟು 2,06,525 ಅಭ್ಯರ್ಥಿಗಳು 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಮತ್ತು 1,377 ಅಭ್ಯರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (ಐಎಸ್ಸಿ) ಪರೀಕ್ಷೆ ಎಂದು ಕರೆಯಲ್ಪಡುವ 12ನೇ ತರಗತಿ ಪರೀಕ್ಷೆಯಲ್ಲಿ 85,611 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರೆ, 2,798 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ.
ಸಾವಿನ ಪ್ರಮಾಣ ಶೇ. 2.72 ಇಳಿಕೆ
ನವದೆಹಲಿ, ಜು. 10: ಭಾರತದ ಕೋವಿಡ್-19 ಪ್ರಕರಣದ ಸಾವಿನ ಪ್ರಮಾಣವು ಶೇ. 2.72 ಕ್ಕೆ ಇಳಿದಿದೆ, ಇದು ಇತರ ದೇಶಗಳಿಗೆ ಹೋಲಿಸಿದರೆ ಬಹಳವೇ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಮರಣ ಪ್ರಮಾಣ ಕಡಿಮೆ ಇದೆ ಎಂದು ಸಚ್ವಾಲಯ ಪ್ರಕಟಣೆ ಹೇಳಿದೆ. ಅಲ್ಲದೆ, ಚೇತರಿಕೆ ದರದಲ್ಲಿ ಏರಿಕೆಯಾಗುವ ಪ್ರವೃತ್ತಿ ಮುಂದುವರಿದಿದ್ದು ಶುಕ್ರವಾರ ಶೇ. 62.42 ರಷ್ಟಿದೆ. 18 ರಾಜ್ಯಗಳು ಮತ್ತುಕೇಂದ್ರಾಡಳಿತ ಪ್ರದೇಶಗಳಲ್ಲಿ ಚೇತರಿಕೆ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ. ರಾಷ್ಟ್ರಮಟ್ಟದ ಸರಾಸರಿ ಸಾವಿನ ಪ್ರಮಾಣವು ಶೇ. 2.72 ಕ್ಕೆ ಇಳಿದಿದೆ. ಇದು ವಿಶ್ವದ ಇತರ ದೇಶಗಳಲ್ಲಿ ಕಂಡುಬರುವ ಸಾವಿನ ಪ್ರಮಾಣಕ್ಕಿಂತ ಕಡಿಮೆಯಾಗಿದೆ. ದೇಶದಲ್ಲಿ ಕೋವಿಡ್-19 ನಿರ್ವಹಣೆಯ ಮಾದರಿಯು ಹೆಚ್ಚಿನ ಸಾವು ನೋವುಗಳನ್ನು ತಗ್ಗಿಸಿದೆ.
ತಬ್ಲಿಘಿ ಜಮಾಅತ್ನ ಸದಸ್ಯರಿಗೆ ಜಾಮೀನು
ನವದೆಹಲಿ, ಜು. 10: 82 ಬಾಂಗ್ಲಾದೇಶಿ ತಬ್ಲಿಘಿ ಜಮಾಅತ್ನ ಸದಸ್ಯರಿಗೆ ದೆಹಲಿ ಕೋರ್ಟ್ ತಾ. 10 ರಂದು ಜಾಮೀನು ಮಂಜೂರು ಮಾಡಿದೆ. ಕೋವಿಡ್-19 ಸೋಂಕು ಪ್ರಸರಣ ತಡೆಗಾಗಿ ಕೇಂದ್ರ ಸರ್ಕಾರ ಲಾಕ್ಡೌನ್ ವಿಧಿಸಿದ್ದರೂ ಸಹ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಸಭೆಯಲ್ಲಿ ಭಾಗವಹಿಸುವ ಮೂಲಕ ಬಾಂಗ್ಲಾದೇಶದ ತಬಿಘಿ ಜಮಾಅತ್ನ ಸದಸ್ಯರು ವೀಸಾ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ದರು. ದೆಹಲಿಯ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗುರ್ಮೊಹೀನಾ ಕೌರ್ ತಲಾ ಬಾಂಗ್ಲಾ ನಾಗರಿಕರಿಗೆ ಜಾಮೀನು ಮಂಜೂರು ಮಾಡಿದ್ದು ತಲಾ ರೂ. 10,000 ವೈಯಕ್ತಿಕ ಬಾಂಡ್ ನೀಡುವಂತೆ ಸೂಚಿಸಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ್ದ ತಬ್ಲಿಘಿ ಜಮಾಅತ್ನ ಸದಸ್ಯರ ವಿರುದ್ಧ ಪೊಲೀಸರು ಜೂನ್ ತಿಂಗಳಲ್ಲಿ ಒಟ್ಟಾರೆ 956 ವಿದೇಶಿಗರ ವಿರುದ್ಧ 59 ಚಾರ್ಜ್ ಶೀಟ್ ದಾಖಲಿಸಿದ್ದರು.
ಒಂದೇ ದಿನ ಸೋಂಕಿಗೆ 57 ಬಲಿ
ಬೆಂಗಳೂರು, ಜು. 10: ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಶುಕ್ರವಾರ ಒಂದೇ ದಿನ ಬರೋಬ್ಬರಿ 57 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 544ಕ್ಕೇ ಏರಿಕೆಯಾಗಿದೆ. ಕೊರೊನಾ ವೈರಸ್ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 29 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 57 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ. ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 1447 ಪ್ರಕರಣಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 2313 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 33,418ಕ್ಕೇ ಏರಿಕೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.
ಆನೆ ಹತ್ಯೆ : ಪ್ರತಿಕ್ರಿಯೆ ಕೇಳಿದ ಕೋರ್ಟ್
ನವದೆಹಲಿ, ಜು. 10: ಕಾಡು ಪ್ರಾಣಿಗಳನ್ನು ಕಾನೂನು ಬಾಹಿರ ಮತ್ತು ಅಸಂವಿಧಾನಿಕ ಸಂವಿಧಾನದ 14 ಮತ್ತು 21ನೇ ವಿಧಿಯನ್ನು ಉಲ್ಲಂಘಿಸಿ ಬೆದರಿಸುವುದು, ಹತ್ಯೆ ಮಾಡುವುದು, ಅನಾಗರಿಕ ಪದ್ಧತಿಗಳನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಗೆ ಸುಪ್ರೀಂ ಕೋರ್ಟ್ ಕೇಂದ್ರ, ಕೇರಳ ಮತ್ತು ಇತರ 13 ರಾಜ್ಯಗಳಿಂದ ಪ್ರತಿಕ್ರಿಯೆ ಕೋರಿದೆ. ವಕೀಲರು ಸಲ್ಲಿಸಿದ ಮನವಿಯು ಅಂತಹ ಘಟನೆಗಳನ್ನು ನಿಭಾಯಿಸಲು ನಿಗದಿತ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಗಳನ್ನು ರಚಿಸಲು ಮತ್ತು ದೇಶಾದ್ಯಂತ ಅರಣ್ಯ ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮಾರ್ಗ ಸೂಚಿಗಳನ್ನು ರಚಿಸಲು ಸೂಚಿಸುವಂತೆ ಅರ್ಜಿಯಲ್ಲಿ ಕೋರಿದೆ. ಈ ಸಂಬಂಧ ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಆರ್. ಸುಭಾಷ್ ರೆಡ್ಡಿ ಮತ್ತು ಎ.ಎಸ್. ಬೋಪಣ್ಣ ಅವರ ನ್ಯಾಯಪೀಠ ಕೇಂದ್ರ ಮತ್ತು ಕೇರಳ ಸೇರಿದಂತೆ 13 ರಾಜ್ಯಗಳಿಗೆ ನೋಟೀಸ್ ನೀಡಿ ಅವರ ಪ್ರತಿಕ್ರಿಯೆ ಕೋರಿದೆ
ಗ್ಯಾನೆಂದ್ರೊ ಹಾಕಿ ಇಂಡಿಯಾ ಅಧ್ಯಕ್ಷ
ನವದೆಹಲಿ, ಜು. 10: ಹಾಕಿ ಇಂಡಿಯಾ ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್ ಮುಷ್ತಾಕ್ ಅಹಮದ್ ಅವರು ರಾಜೀನಾಮೆ ನೀಡಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಹಿರಿಯ ಉಪಾಧ್ಯಕ್ಷ, ಮಣಿಪುರದ ಗ್ಯಾನೆಂದ್ರೊ ನಿಂಗೊಂಬಮ್ ಅವರನ್ನು ನೇಮಕ ಮಾಡಲಾಗಿದೆ. ಅಹಮದ್ ಅವರು ತಾ. 7 ರಂದೇ ಹಾಕಿ ಇಂಡಿಯಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಹಾಕಿ ಇಂಡಿಯಾ ಆಡಳಿತ ಮಂಡಳಿ ಇಂದು ತುರ್ತು ಸಭೆ ಕರೆದು, ಸಭೆಯಲ್ಲಿ ಗ್ಯಾನೆಂದ್ರೊ ನಿಗೊಂಬಮ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಅಹಮದ್ ಅವರು ರಾಷ್ಟ್ರೀಯ ಕ್ರೀಡಾ ನೀತಿಯಲ್ಲಿರುವ ಅಧ್ಯಕ್ಷೀಯ ಅಧಿಕಾರವಧಿ ನಿಯಮವನ್ನು ಅವರು ಉಲ್ಲಂಘಿಸಿದ್ದರಿಂದ, ಸ್ಥಾನ ತೊರೆಯುವಂತೆ ಕೇಂದ್ರ ಕ್ರೀಡಾ ಸಚಿವಾಲಯ ಇತ್ತೀಚೆಗೆ ಸೂಚಿಸಿತ್ತು.