ಕೊಡ್ಲಿಪೇಟೆ, ಜು. 9: ಡಾ. ಬಾಬಾ ಸಾಹೇಬ್ ಬಿ.ಆರ್. ಅಂಬೇಡ್ಕರ್ ರವರ ರಾಜಗೃಹವನ್ನು ಧ್ವಂಸ ಮಾಡಿರುವುದನ್ನು ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟ ಕೊಡ್ಲಿಪೇಟೆಯಲ್ಲಿ ಪ್ರತಿಭಟನೆ ನಡೆಸಿತು.
ಕೊಡ್ಲಿಪೇಟೆಯ ಅಂಬೇಡ್ಕರ್ ಭವನದ ಮುಂಬಾಗ ಪ್ರತಿಭಟನೆ ಸಭೆ ನಡೆಸಿದರು. ಬಿ.ವಿ.ಎಸ್ .ಜಿಲ್ಲಾ ಮುಖಂಡರಾದ ಮೋಹನ್ ಮೌರ್ಯ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ನಿರ್ವಾಣಪ್ಪ, ಮುಖಂಡರಾದ ಕೆಂಚೆಶ್ವರ್, ದಲಿತ ಯುವ ಮುಖಂಡರಾದ ವಸಂತ್ .ಡಿ.ಎನ್. ಅವರು ಮಾತಾನಾಡಿ, ಮಹಾರಾಷ್ಟ್ರದ ಮುಂಬ್ಯೆನ ದಾದರ್‍ನಲ್ಲಿರುವ ಅಂಬೇಡ್ಕರ್‍ರವರು ವಾಸ ಮಾಡಿರುವ ರಾಜಗೃಹವನ್ನು ಮಂಗಳವಾರದಂದು ಕಿಡಿಗೇಡಿಗಳು ನುಗ್ಗಿ ಮನೆಯ ವಸ್ತುಗಳನ್ನು ದ್ವಂಸ ಮಾಡಿ ಹಾನಿಗೊಳಿಸಿರುವುದನ್ನು ಖಂಡಿಸಿದರು.
ನಂತರ ಮೆರವಣಿಗೆಯಲ್ಲಿ ತೆರಳಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಅಂಬೇಡ್ಕರ್‍ರವರ ಮನೆ ಇನ್ನಿತರ ಆಸ್ತಿಗಳನ್ನು ಸಂರಕ್ಷಿಸಬೇಕು. ಮನೆ ಧ್ವಂಸ ಮಾಡಿದ ವಿಕೃತ ಮನಸ್ಸಿನ ಕಿಡಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ನಾಡ ಕಚೇರಿಗೆ ತೆರಳಿ ಕೊಡ್ಲಿಪೇಟೆ ಉಪ ತಹಶೀಲ್ದಾರ್ ಪುರುಷೋತ್ತಮರವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರುಗಳಾದ ಜೆ.ಎಲ್. ಜನಾರ್ಧನ್, ಸೋಮಣ್ಣ, ಜಗದೀಶ್, ವೀರಭದ್ರ, ವಸಂತ್, ಜ್ಯೆರಾಜ್, ಪ್ರಸನ್ನ, ಸತ್ಯಪ್ರಕಾಶ್, ಸರ್ರು, ದೇವರಾಜ್, ಪುನಿತ್, ನಿಖಿಲ್, ಕಾರ್ತಿಕ್ ಸೇರಿದಂತೆ ಕಾರ್ಯಕರ್ತರುಗಳು ಭಾಗವಹಿಸಿದ್ದರು.
ದಲಿತ ಒಕ್ಕೂಟ ಖಂಡನೆ
ಸೋಮವಾರಪೇಟೆ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ವಾಸವಿದ್ದ ಮಹಾರಾಷ್ಟ್ರದ ದಾದರ್‍ನಲ್ಲಿರುವ ನಿವಾಸಕ್ಕೆ ಕಿಡಿಗೇಡಿಗಳು ಹಾನಿ ಮಾಡಿರುವ ಕೃತ್ಯವನ್ನು ಖಂಡಿಸಿರುವ ತಾಲೂಕು ದಲಿತ ಒಕ್ಕೂಟದ ಅಧ್ಯಕ್ಷ ಜೆ.ಎಲ್. ಜನಾರ್ಧನ್ ಇಂತಹ ಕುಕೃತ್ಯ ನಡೆಸಿದ ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.