*ಗೋಣಿಕೊಪ್ಪಲು, ಜು. 9: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 17ನೇ ಶಾಖೆಯಾದ ಪೊನ್ನಂಪೇಟೆ ಬ್ಯಾಂಕಿನ ಎರಡು ಅಂತಸ್ತಿನ ನೂತನ ಕಟ್ಟಡವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ಸಹಕಾರ ಬ್ಯಾಂಕ್ ಅತ್ಯುತ್ತಮ ಗುಣಮಟ್ಟದ ಸೇವೆಯನ್ನು ತನ್ನ ಗ್ರಾಹಕರಿಗೆ ನೀಡುವಲ್ಲಿ ಮುಂದಿದೆ. ರೈತರ ಬೇಡಿಕೆಗೆ ಸ್ಪಂದಿಸುವ ಕಾರ್ಯ ಬ್ಯಾಂಕಿನಿಂದ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಬ್ಯಾಂಕ್ ಅಭಿವೃದ್ಧಿ ಹೊಂದಿದರೆ ಅದರ ಜತೆಗೆ ನಾವು ಸಹ ಅಭಿವೃದ್ಧಿ ಹೊಂದುತ್ತೇವೆ ಎಂಬ ವಿಶ್ವಾಸ ಹೊಂದಿರಬೇಕು ಎಂದು ಹೇಳಿದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೋಡೆಂದೇರ ಬಾಂಡ್ ಗಣಪತಿ ಮಾತನಾಡಿ, 2015ರಲ್ಲಿ ಸಹಕಾರ ಬ್ಯಾಂಕಿನ 17ನೇ ಶಾಖೆಯಾಗಿ ಪೊನ್ನಂಪೇಟೆ ಪಟ್ಟಣದಲ್ಲಿ ಬ್ಯಾಂಕ್ ಬಾಡಿಗೆ ಕಟ್ಟಡದಲ್ಲಿ ಸ್ಥಾಪನೆಯಾಗಿ ತನ್ನ ಕಾರ್ಯವನ್ನು ಪ್ರಾರಂಭಿಸಿತು. ಇದೀಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಆಡಳಿತ ಮಂಡಳಿಯ ಚಿಂತನೆ ಮತ್ತು ಯೋಜನೆಯೊಂದಿಗೆ ಕೇಂದ್ರ ಬ್ಯಾಂಕಿನ ಶಾಖೆಗಳಿಗೆ ಸ್ವಂತ ಕಟ್ಟಡ ಹೊಂದುವ ಉದ್ದೇಶ ಸಕಾರಗೊಳ್ಳುತ್ತಿದೆ. ಪೊನ್ನಂಪೇಟೆ ಶಾಖೆಯು 4637 ಗ್ರಾಹಕರನ್ನು ಹೊಂದಿದ್ದು, 2019-20ನೇ ಸಾಲಿನಲ್ಲಿ ರೂ. 30.50 ಕೋಟಿ ಠೇವಣಿ ಹೊಂದಿದ್ದು, 43.24 ಕೋಟಿ ರೂಪಾಯಿ ಸಾಲ ನೀಡಲಾಗಿದೆ. 2020 ಮಾರ್ಚ್ ಅಂತ್ಯಕ್ಕೆ ಬ್ಯಾಂಕ್ ರೂ. 81.24 ಲಕ್ಷ ಲಾಭಗಳಿಸಿದೆ ಎಂದು ಬ್ಯಾಂಕಿನ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಬ್ಯಾಂಕ್‍ನ ಸ್ವಂತ ಕಟ್ಟಡ ಹೊಂದಿರುವ ಶಾಖೆಗಳಲ್ಲಿ ನೂತನ ಎ.ಟಿ.ಎಂ. ಯಂತ್ರಗಳನ್ನು ಅಳವಡಿಸುವ ಯೋಜನೆ ರೂಪಿತಗೊಂಡಿದೆ. ಜತೆಗೆ ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮೈಕ್ರೊ ಚಿಪ್ ಎ.ಟಿ.ಎಂ. ಯಂತ್ರ ಅಳವಡಿಸುವ ಚಿಂತನೆಯಿದೆ ಎಂದರು.

ಬಾಳೆಲೆ, ಟಿ. ಶೆಟ್ಟಿಗೇರಿ ಮತ್ತು ಹೆಬ್ಬಾಲೆಗಳಲ್ಲಿಯೂ ಹೊಸ ಶಾಖೆ ತೆರೆಯಲು ಪ್ರಕ್ರಿಯೆ ಆರಂಭಿಸಲಾಗಿದೆ. 2021 ಸಾಲಿಗೆ ಕೇಂದ್ರ ಬ್ಯಾಂಕ್ ಶತಮಾನೋತ್ಸವ ಆಚರಿಸಿಕೊಳ್ಳಲಿದೆ. ಇದರ ನೆನಪಿಗಾಗಿ ಶತಮಾನೋತ್ಸವ ಕಟ್ಟಡ ನಿರ್ಮಾಣ ಮಾಡುವ ಉದ್ದೇಶವನ್ನು ಆಡಳಿತ ಮಂಡಳಿ ಹೊಂದಿದೆ ಎಂದರು.

ಜಿಲ್ಲಾ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಮಾತನಾಡಿ, ಹಿರಿಯರು ಮತ್ತು ಸಿಬ್ಬಂದಿಗಳ ಶ್ರಮದಿಂದಾಗಿ ಬ್ಯಾಂಕ್ ಹೆಚ್ಚಿನ ಅಭಿವೃದ್ಧಿಯನ್ನು ಹೊಂದುತ್ತಾ ಸಾಗಿದೆ. ಅವರ ಶ್ರಮದಿಂದಾಗಿಯೇ ಹಲವು ಯೋಜನೆಗಳ ಮೂಲಕ ಬ್ಯಾಂಕ್ ಪ್ರಗತಿಯನ್ನು ಕಾಣುವಂತಾಗಿದೆ ಎಂದರು.

ಈ ಸಂದರ್ಭ ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕರುಗಳಾದ ಪಟ್ರಪಂಡ ರಘು ನಾಣಯ್ಯ, ಬಿ.ಡಿ. ಮಂಜುನಾಥ್, ಹೊಟ್ಟೆಂಗಡ ಎಂ. ರಮೇಶ್, ಹೊಸೂರು ಜೆ. ಸತೀಶ್ ಕುಮಾರ್, ಬಿ.ಕೆ. ಚಿಣ್ಣಪ್ಪ, ಎಸ್.ಬಿ. ಭರತ್‍ಕುಮಾರ್, ಕನ್ನಂಡ ಸಂಪತ್, ಕಿಮ್ಮುಡೀರ ಎ. ಜಗದೀಶ್, ಅಪ್ಪಚಟ್ಟೋಳಂಡ ಕೆ. ಮನು ಮುತ್ತಪ್ಪ, ಕೋಲತಂಡ ಎ. ಸುಬ್ರಮಣಿ, ಉಷಾ ತೇಜಸ್ವಿ, ಆಪೆಕ್ಸ್ ಬ್ಯಾಂಕ್ ನಾಮನಿರ್ದೇಶಕ ಕುಂಞಂಗಡ ಅರುಣ್ ಭೀಮಯ್ಯ, ವೃತ್ತಿಪರ ನಿರ್ದೇಶಕ ಎ. ಗೋಪಾಲಕೃಷ್ಣ, ಜಿಲ್ಲಾ ಸಹಕಾರ ಸಂಘದ ಉಪನಿಬಂಧಕ ಹಾಗೂ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ. ಸಲೀಂ, ಪ್ರಧಾನ ವ್ಯವಸ್ಥಾಪಕ ಕೋಡಿರ ಪೂವಯ್ಯ, ವೀರಾಜಪೇಟೆ ತಾಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಪೊನ್ನಂಪೇಟೆ ಶಾಖೆಯ ವ್ಯವಸ್ಥಾಪಕಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.