ಗೋಣಿಕೊಪ್ಪ ವರದಿ, ಜು. 9: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಲ್ಲಿನ ಸಾಮಥ್ರ್ಯ ಸೌಧದಲ್ಲಿರುವ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಚೇರಿ ಎದುರು ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.

ಕೆಲವು ಪಂಚಾಯಿತಿಗಳಲ್ಲಿ 12 ಗಂಟೆ ಕೆಲಸ ನೀಡುತ್ತಿರುವುದರಿಂದ ಒತ್ತಡವಾಗುತ್ತಿದೆ. 14ನೇ ಹಣಕಾಸು ಆಯೋಗದ ಹಣದಲ್ಲಿ ಸರ್ಕಾರಿ ಆದೇಶದಂತೆ ಸಿಬ್ಬಂದಿಗೆ ವೇತನ ನೀಡಲು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂತು.

ತೆರಿಗೆ ವಸೂಲಾತಿಯ ಶೇ. 40 ಹಣದಲ್ಲಿ ಬಾಕಿ ಉಳಿದ ವೇತನ ಪಾವತಿಸುವಂತಾಗಬೇಕು. ಇಎಫ್‍ಎಂಎಸ್ ತಂತ್ರಾಂಶದಲ್ಲಿ ನೌಕರರ ಮಾಹಿತಿ ದಾಖಲಾಗಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಒಂದಷ್ಟು ಪಂಚಾಯಿತಿಗಳಲ್ಲಿ ಸಮಸ್ಯೆಗೆ ಪಿಡಿಒ ನೇರ ಕಾರಣವಾಗುತ್ತಿರುವುದರಿಂದ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಭರತ್ ಮಾತನಾಡಿ, ವೇತನ ಪಾವತಿ ವಿಷಯದಲ್ಲಿ ತಾರತಮ್ಯ ನೀತಿ ಸರಿಪಡಿಸಬೇಕಿದೆ. ಸಮಯಕ್ಕೆ ಸರಿಯಾಗಿ ವೇತನ ಪಾವತಿಯಾಗದಿರಲು ಪಿಡಿಒಗಳ ನಿರ್ಲಕ್ಷ್ಯ ಕಾರಣವಾಗಿದೆ ಎಂದು ಆರೋಪಿಸಿದರು.

ತಾಲೂಕು ಪಂಚಾಯಿತಿ ಇಒ ಷಣ್ಮುಗಂ ಮನವಿ ಸ್ವೀಕರಿಸಿದರು. ಈ ಸಂದರ್ಭ ತಾಲೂಕು ಅಧ್ಯಕ್ಷ ಎಂ.ಬಿ. ಹರೀಶ್, ಸದಸ್ಯರಾದ ಗಣೇಶ್, ಮೇರಿ, ಪರಮೇಶ ಇದ್ದರು.