ಸುಂಟಿಕೊಪ್ಪ, ಜು. 10: ಕೊಡಗರಹಳ್ಳಿ ಮತ್ತು ಕಂಬಿಬಾಣೆಗಳಲ್ಲಿ ಕಾಡಾನೆಗಳ ಹಿಂಡು ಆಹಾರ ಅರಸಿ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿದ್ದು, ತೋಟಗಳಲ್ಲಿ ಬೆಳೆಸಲಾದ ಕಾಫಿ, ತೆಂಗು, ಬಾಳೆ, ಅಡಿಕೆ ಫಸಲು ಗದ್ದೆಗಳ ಪೈರನ್ನು ತಿಂದು ಧ್ವಂಸಗೊಳಿಸುತ್ತಿದೆ ಎಂದು ಕೃಷಿಕರು ನೋವನ್ನು ತೋಡಿಕೊಂಡಿದ್ದಾರೆ.

ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಕೊಡಗರಹಳ್ಳಿ ಮತ್ತು ಕಂಬಿಬಾಣೆ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ನಿತ್ಯ ತೋಟಗಳಿಗೆ ಲಗ್ಗೆಯಿಡುತ್ತಿದ್ದು, ತೋಟದಲ್ಲಿ ಬೆಳೆಸಲಾದ ಕಾಫಿ ಗಿಡಗಳು ಇನ್ನಿತರರ ಫಸಲನ್ನು ನಾಶಪಡಿಸುತ್ತಿದ್ದು, ಕೃಷಿಕರು ಪ್ರಾಣ ಭಯದಿಂದ ಜೀವನ ದೂಡುವಂತ್ತಾಗಿದೆ ಎಂದು ಈ ಭಾಗದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಡಗರಹಳ್ಳಿ ಪಂಚಾಯಿತಿಯ ಚೌಡಿಕಾಡು ತೋಟ, ಕಂಬಿಬಾಣೆ ಪೂಜಾ ತೋಟ, ಗೋವಿಂದ ತೋಟಕ್ಕೆ ನುಗ್ಗಿದ ಆನೆಗಳು ಫಸಲನ್ನು ಧ್ವಂಸಗೊಳಿಸಿದೆ ಎಂದು ತೋಟದ ಮಾಲೀಕರು ತಿಳಿಸಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದರೂ ಕಾಡಾನೆಗಳನ್ನು ಹಿಡಿಯುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಮಾಲೀಕರು ಅರಣ್ಯ ಇಲಾಖೆಗೆ ದೂರು ನೀಡಿ ಪರಿಹಾರಕ್ಕೆ ಮನವಿ ಸಲ್ಲಿಸಿದ್ದಾರೆ.