v ರಾಜ್ಯ ಸರಕಾರ ನ್ಯಾಯಾಲಯಕ್ಕೆ ಮನವರಿಕೆ v ಚುನಾವಣಾ ಆಯೋಗ ಮತದಾರರ ಪಟ್ಟಿಗೆ ಚಾಲನೆ

ಮಡಿಕೇರಿ, ಜು. 9: ಕರ್ನಾಟಕ ರಾಜ್ಯದೆಲ್ಲೆಡೆ ಕೋವಿಡ್-19 ಹಿನ್ನೆಲೆ ಮುಂದೂಡಲ್ಪಟ್ಟಿರುವ ಗ್ರಾ.ಪಂ.ಗಳ ಚುನಾವಣೆಯನ್ನು ಪರಿಸ್ಥಿತಿ ಅವಲೋಕನದೊಂದಿಗೆ ಮುಂದಿನ ಅಕ್ಟೋಬರ್ ಮಾಸದಲ್ಲಿ ನಡೆಸಲು ಯೋಚಿಸುತ್ತಿರುವುದಾಗಿ ಸರಕಾರ ಉಚ್ಚ ನ್ಯಾಯಾಲಯದ ಗಮನ ಸೆಳೆದಿದೆ.

ಈಗಾಗಲೇ ಗ್ರಾಮ ಪಂಚಾಯಿತಿಗಳ ಆಡಳಿತ ಮಂಡಳಿಯ ಅಧಿಕಾರ ಅವಧಿ ಜುಲೈ ಪ್ರಥಮ ವಾರಕ್ಕೆ ಮುಕ್ತಾಯಗೊಂಡಿದ್ದು, ಜಾಗತಿಕ ಕೊರೊನಾ ಸೋಂಕು ನಡುವೆ ಸರಕಾರದಿಂದ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಈ ಸಂಬಂಧ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ಈ ಅರ್ಜಿ ಆಧರಿಸಿ ಕರ್ನಾಟಕ ಸರಕಾರವು ಎಲ್ಲ ಜಿಲ್ಲಾಧಿಕಾರಿಗಳ ಅಭಿಪ್ರಾಯ ಕ್ರೋಢೀಕರಿಸಿ ಪ್ರಸಕ್ತ ಸ್ಥಿತಿಯನ್ನು ನ್ಯಾಯಾಲಯದ ಗಮನಕ್ಕೆ ತಂದಿದೆ.

ಇದರೊಂದಿಗೆ ಸರಕಾರವು ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ಮತದಾರರ ಪಟ್ಟಿಯನ್ನು ಸಿದ್ಧಗೊಳಿಸಲು ಸಂಬಂಧಿಸಿದ ಆಡಳಿತಕ್ಕೆ ನಿರ್ದೇಶಿಸಿದ್ದು, ದಿನಾಂಕಗಳನ್ನು ಪ್ರಕಟಿಸಿದೆ.

ತಾ. 13 ರಿಂದ ಪ್ರಕ್ರಿಯೆ: ಆ ದಿಸೆಯಲ್ಲಿ ತಾ. 13 ರಿಂದ 18 ರ ತನಕ ಆಯಾ ಗ್ರಾಮ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರನ್ನು ಗುರುತಿಸುವುದು, ಕ್ಷೇತ್ರ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮತದಾರರನ್ನು ಗುರುತಿಸಿ ಪಟ್ಟಿಗೆ ಸೇರ್ಪಡೆಗೊಳಿಸಲು ನಿರ್ದೇಶಿಸಲಾಗಿದೆ.

ಅಲ್ಲದೆ ತಾ. 30 ರಿಂದ ಆಗಸ್ಟ್ 5 ರ ತನಕ ಮುದ್ರಕರಿಂದ ಪ್ರಥಮವಾಗಿ ಕರಡು ಪಟ್ಟಿ ತಯಾರಿಸಿ ಮತ್ತೊಮ್ಮೆ ಕ್ಷೇತ್ರವಾರು ಪರಿಶೀಲನೆ ನಡೆಸುವುದು, ಆನಂತರದಲ್ಲಿ ತಿದ್ದುಪಡಿಗೊಳಿಸಿ ಬದಲಾವಣೆಗಳನ್ನು ಸರಿಪಡಿಸಿ ಮುದ್ರಕರಿಂದ ತಾ. 6 ರಂದು ಕರಡು ಪ್ರತಿ ಹೊಂದಿಕೊಳ್ಳಲು ಸೂಚಿಸಲಾಗಿದೆ. ಆಗಸ್ಟ್ 7 ರಂದು ಸಂಬಂಧಿಸಿದ ಕಚೇರಿಗಳಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸಲು ಆಯೋಗ ಆದೇಶಿಸಿದೆ.

ಮತದಾರರು ಈ ಸಂಬಂಧ ಪರಿಶೀಲಿಸಿ ಆಕ್ಷೇಪಣೆ ಸಲ್ಲಿಸಲು ಆ. 14 ದಿನ ನಿಗದಿಗೊಂಡಿದೆ. ಆ. 24 ಆಕ್ಷೇಪಣೆ ಇತ್ಯರ್ಥಗೊಳಿಸುವುದು ಸೇರಿದಂತೆ ಆ. 31 ರಂದು ಮತದಾರರ ಅಂತಿಮಪಟ್ಟಿ ಪ್ರಕಟಣೆಗೆ ಸೂಚಿಸಲಾಗಿದೆ.