ಭಾಗಮಂಡಲ, ಜು. 8: ಹಿಂದಿನ 48 ಗಂಟೆಗಳಲ್ಲಿ ಕೊಡಗಿನ ಜೀವನದಿ ಕಾವೇರಿ ಉಗಮ ಸ್ಥಳ ತಲಕಾವೇರಿ ಹಾಗೂ ಭಾಗಮಂಡಲ ಸುತ್ತಮುತ್ತ ಭಾರೀ ಮಳೆಯಾಗಿರುವ ಪರಿಣಾಮ, ಚೇರಂಗಾಲದಲ್ಲಿ ಭೂಕುಸಿತದೊಂದಿಗೆ, ತ್ರಿವೇಣಿ ಸಂಗಮ ಪ್ರದೇಶದಲ್ಲಿ ಪ್ರವಾಹ ಸನ್ನಿವೇಶ ಎದುರಾಗಿದ್ದ ಕುರಿತು ಇಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಜಂಟಿ ಪರಿಶೀಲನೆ ನಡೆಸಿದರು.ಅಲ್ಲದೆ ಸ್ಥಳಕ್ಕೆ ಪೊಲೀಸ್ ಇಲಾಖೆಯೊಂದಿಗೆ ಎನ್ಡಿಆರ್ಎಫ್, ಅಗ್ನಿ ಶಾಮಕ ದಳ, ಗೃಹ ರಕ್ಷಕ ತಂಡಗಳನ್ನು ಕರೆಸಿಕೊಂಡು ಯಾವದೇ ಪರಿಸ್ಥಿತಿಯನ್ನು ಎದುರಿಸುವ ದಿಸೆಯಲ್ಲಿ ಜಂಟಿ ಸಮಾಲೋಚನೆ ನಡೆಸಿದರಲ್ಲದೆ, ಸಾರ್ವಜನಿಕರ ಪ್ರಾಣ ರಕ್ಷಣೆಗೆ ಎಲ್ಲಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶಿಸಿದರು.
ಜಂಟಿಯಾಗಿ ಕಾರ್ಯಾಚರಣೆ : ಅನಿವಾರ್ಯ ಪರಿಸ್ಥಿತಿಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯ ಜತೆಗೂಡಿ ಪೊಲೀಸ್, ಎನ್ಡಿಆರ್ಎಫ್, ಅಗ್ನಿ ಶಾಮಕ ದಳ, ಗೃಹ ರಕ್ಷಕ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸುವದರೊಂದಿಗೆ, ಪರಸ್ಪರ ಹೊಂದಾಣಿಕೆಯಲ್ಲಿ ಸೇವೆ ಸಲ್ಲಿಸುವಂತೆ ತಿಳಿ ಹೇಳಿದರು.
ದೋಣಿ ವ್ಯವಸ್ಥೆ : ತ್ರಿವೇಣಿ ಸಂಗಮದಲ್ಲಿ ಜಲ ಪ್ರವಾಹ ಎದುರಾದರೆ, ಜನತೆಯನ್ನು ಸುರಕ್ಷಿತ ರೀತಿ ಸಂಚರಿಸಲು ದೋಣಿ ಹಾಗೂ ರ್ಯಾಫ್ಟಿಂಗ್ ಅನುಕೂಲತೆ ಕಲ್ಪಿಸುವದಲ್ಲದೆ, ಸೇತುವೆ ಬಳಿ ಹಗ್ಗ ಕಟ್ಟಿ ಅಲ್ಪ ನೀರಿನ ಸಂದರ್ಭ ಕೂಡ ಸುರಕ್ಷಿತ ರೀತಿ ಸಂಚರಿಸಲು ಕ್ರಮ ವಹಿಸುವಂತೆ ಗಮನ ಹರಿಸಲು ಕೆಳ ಹಂತದ ಅಧಿಕಾರಿಗಳಿಗೆ ಸೂಚಿಸಲಾಯಿತು.
ನಿವಾಸಿಗಳಿಗೆ ಸೂಚನೆ : ನಿನ್ನೆ ಭೂಕುಸಿತ ಉಂಟಾಗಿರುವ ಪ್ರದೇಶದಲ್ಲಿರುವ ಅಕ್ಕಪಕ್ಕದ ನಾಲ್ಕು ಕುಟುಂಬಗಳ ಸಹಿತ ಭಾಗಮಂಡಲ ಹಾಗೂ ಚೇರಂಗಾಲ ವ್ಯಾಪ್ತಿಯ 60 ಕುಟುಂಬಗಳು ಜಾಗೃತೆಯಿಂದ ಇರುವಂತೆ ಗ್ರಾ.ಪಂ.ನಿಂದ ಕಂದಾಯ ಅಧಿಕಾರಿಗಳು ನೋಟೀಸ್ ಜಾರಿಗೊಳಿಸಲು ನಿರ್ದೇಶಿಸಲಾಯಿತು.
ಇಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರುಗಳು ಖುದ್ದು ಧಾವಿಸಿ ಭಾಗಮಂಡಲ, ಚೇರಂಗಾಲದ ಭೂಕುಸಿತ ಪ್ರದೇಶದ ವೀಕ್ಷಣೆ ನಡೆಸಿದರು. ಈ ಸಂದರ್ಭ ಸ್ಥಳೀಯ ಠಾಣಾಧಿಕಾರಿ ಹೆಚ್. ಮಹದೇವ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಶೋಕ್ ಸೇರಿದಂತೆ ಮುಂಜಾಗ್ರತಾ ಕ್ರಮಕ್ಕಾಗಿ ಧಾವಿಸಿರುವ ವಿವಿಧ ಸುರಕ್ಷಾ ಘಟಕಗಳ ಸಿಬ್ಬಂದಿ ಹಾಜರಿದ್ದು, ಅವಶ್ಯಕ ಕ್ರಮಗಳ ಕುರಿತು ಮಾಹಿತಿ ನೀಡಿದರು. ಭೂಕುಸಿತದಿಂದ ಸಂಚಾರಕ್ಕೆ ತೊಡಕಾಗಿರುವ ಮಾರ್ಗದಲ್ಲಿ ಲಘು ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲು ಸಲಹೆಯಿತ್ತರು.
( ಚಿತ್ರ, ವರದಿ : ಕೆ.ಡಿ. ಸುನಿಲ್)