ಭಾಗಮಂಡಲ, ಜು. 7: ಕರಿಕೆಯಲ್ಲಿ ಬೆಂಗಳೂರಿನಿಂದ ಕಳೆದ ವಾರವಷ್ಟೇ ಹಿಂತಿರುಗಿದ್ದ ಕರಿಕೆಯ ನಿವಾಸಿಯೊಬ್ಬರಿಗೆ ಇಂದು ಕೋವಿಡ್ ಪಾಸಿಟಿವ್ ಇರುವುದು ಖಚಿತಗೊಂಡಿತು. ಅವರು ಬೆಂಗಳೂರಿನಿಂದ ಬಂದ ಕೂಡಲೇ ಕೋವಿಡ್ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆಗೆ ಒಳಪಟ್ಟಿದ್ದರು. ಆದರೆ ಇಂದು ಅದರ ಫಲಿತಾಂಶ ಬಂದಿತು. ಕೂಡಲೇ ಆರೋಗ್ಯ ಕಾರ್ಯಕರ್ತರು ಅವರಿಗೆ ದೂರವಾಣಿ ಮೂಲಕ ಭಾಗಮಂಡಲಕ್ಕೆ ಬರುವಂತೆಯೂ ಅಲ್ಲಿಂದ ಆ್ಯಂಬ್ಯುಲೆನ್ಸ್‍ನಲ್ಲಿ ಮಡಿಕೇರಿಗೆ ಕರೆದೊಯ್ಯು ವುದಾಗಿಯೂ ತಿಳಿಸಿದರು.ಕರಿಕೆಯ ಈ ವ್ಯಕ್ತಿ ಪ್ರತ್ಯೇಕವಾಗಿ ಪ್ರಯಾಣಿಸುವ ಬದಲು ತಕ್ಷಣವೇ ಸಿಕ್ಕಿದ ಕರಿಕೆ-ಮಡಿಕೇರಿ ಕೆಎಸ್‍ಆರ್‍ಟಿಸಿ ಬಸ್ ಅನ್ನು ಏರಿದರು. ಈ ಬಸ್ಸಿನಲ್ಲಿ ಇತರ ನಾಲ್ಕು ಪ್ರಯಾಣಿಕರಿದ್ದು, ಜೊತೆಗೆ ಕಂಡಕ್ಟರ್ ಮತ್ತು ಡ್ರೈವರ್ ಇದ್ದು ಇವರ ಜೊತೆಯಲ್ಲಿಯೇ ಪ್ರಯಾಣ ಮಾಡಿದರು. ಭಾಗಮಂಡಲ ತಲುಪಿದೊಡನೆ (ಮೊದಲ ಪುಟದಿಂದ) ಅಲ್ಲಿ ಆರೋಗ್ಯ ಕಾರ್ಯಕರ್ತರು ಕರಿಕೆಯ ಈ ವ್ಯಕ್ತಿಯನ್ನು ಆಂಬ್ಯುಲೆನ್ಸ್‍ನಲ್ಲಿ ಕರೆದೊಯ್ದರು. ಮಾಹಿತಿಯ ಕೊರತೆಯ ಎಡವಟ್ಟಿನಿಂದಾಗಿ ಪೊಲೀಸರಿಗೂ ಸಮರ್ಪಕ ಅರಿವಿರಲಿಲ್ಲ. ಬಸ್ ಚಾಲಕ-ಕಂಡಕ್ಟರ್ ಮತ್ತು ನಾಲ್ವರು ಪ್ರಯಾಣಿಕರು ಅಲ್ಲಿನ ಹೊಟೇಲ್ ಹಾಗೂ ಅಂಗಡಿಗಳಿಗೆ ಆರಾಮವಾಗಿ ತೆರಳಿದರು. ಈ ನಡುವೆ ಭಾಗಮಂಡಲದ 12 ಮಂದಿ ಮಡಿಕೇರಿಗೆ ತೆರಳಲೆಂದು ಈ ಬಸ್ ಅನ್ನು ಏರಿದರು. ಇಷ್ಟೆಲ್ಲ ಆಗುವಾಗ ಜಾಗೃತಿಗೊಂಡ ಪೊಲೀಸರು ಇದೇ ಬಸ್‍ನಲ್ಲಿ ಪ್ರಯಾಣಿಸಿ ಬಂದಿದ್ದ ಪಾಸಿಟಿವ್ ವ್ಯಕ್ತಿಯಿಂದಾಗಿ ಬಸ್‍ನಲ್ಲಿ ಬಂದಿದ್ದ ಪ್ರಯಣಿಕರು, ಚಾಲಕ ಹಾಗೂ ಕಂಡಕ್ಟರ್‍ಗೆ ಸಂಪರ್ಕ ಉಂಟಾದುದನ್ನು ಗಮನಿಸಿದರು.
ಅಲ್ಲದೆ ಮಡಿಕೇರಿಗೆಂದು ಬಸ್ ಹತ್ತಿದ 12 ಮಂದಿಗೂ ಸಂಪರ್ಕ ಉಂಟಾದಂತಾಯಿತು. ಕೂಡಲೇ ಎಚ್ಚೆತ್ತ ಪೊಲೀಸರು ಅದೇ ಬಸ್‍ನಲ್ಲಿ ಕರಿಕೆಯ 4 ಮಂದಿ ಪ್ರಯಾಣಿಕರನ್ನು ವಾಪಸ್ ಕಳುಹಿಸಿ 14 ದಿನ ಗೃಹ ಸಂಪರ್ಕ ತಡೆಯಲ್ಲಿರಿಸುವಂತೆ ಸೂಚಿಸಿದರು. ಭಾಗಮಂಡಲಕ್ಕೆ ಚಾಲಕ ಮತ್ತು ಕಂಡಕ್ಟರ್ ಮರಳಿ ಬಂದು ಅವರು ಕೂಡ ಗೃಹ ಸಂಪರ್ಕ ತಡೆಗೆ ಒಳಪಡುವಂತೆ ನಿರ್ದೇಶಿಸಿದರು.
ಈ ನಡುವೆ ಮಡಿಕೇರಿಗೆ ಬರಲು ಬಸ್ ಏರಿದ್ದ 12 ಮಂದಿ ಪ್ರಯಾಣಿಕರನ್ನು ಅವರವರ ಮನೆಗೆ ಕಳುಹಿಸಿ ಗೃಹ ಸಂಪರ್ಕ ತಡೆಯಲ್ಲಿರಲು ಸೂಚಿಸಲಾಯಿತು. ಜೊತೆಗೆ ಪಾಸಿಟಿವ್ ವ್ಯಕ್ತಿಯ ಸಂಪರ್ಕದಲ್ಲಿದ್ದ ಚಾಲಕ ಮತ್ತು ಪ್ರಯಾಣಿಕರು ಭೇಟಿ ನೀಡಿದ್ದ ಒಂದು ಹೊಟೇಲ್ ಹಾಗೂ ಎರಡು ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಲಾಯಿತು.
ಇದಕ್ಕೆಲ್ಲ ಕಾರಣ ಪೂರ್ವಾಲೋಚನೆಯಿಲ್ಲದೆ ಅವಸರದಿಂದ ಕೈಗೊಂಡ ಕ್ರಮವಾಗಿದ್ದು, ಕೊರೊನಾ ಹಿಡಿಸಿದ ಮಂಕಿನಿಂದಾಗಿ ಈ ರೀತಿಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಸಂದರ್ಭ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.