ಸೋಮವಾರಪೇಟೆ, ಜು.7: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ(ಸಿ.ಐ.ಟಿ.ಯು ಸಂಯೋಜಿತ) ಜಿಲ್ಲಾ ಘಟಕದ ವತಿಯಿಂದ ತಾಲೂಕು ಪಂಚಾಯಿತಿ ಎದುರು ಪ್ರತಿಭಟನೆ ನಡೆಯಿತು.

ಕಂಪ್ಯೂಟರ್ ಆಪರೇಟರ್‍ಗಳಿಗೆ ಬಡ್ತಿ ನೀಡಲು ವೃಂದ ಮತ್ತು ನೇಮಕಾತಿಗಳಿಗೆ ತಿದ್ದುಪಡಿ ಮಾಡಬೇಕು. ಎಲ್ಲಾ ಸಿಬ್ಬಂದಿಗಳ ವೇತನಕ್ಕಾಗಿ ಕೊರತೆ ಇರುವ 382ಕೋಟಿ ರೂ.ಗಳನ್ನು ಬೇರೆ ಯೋಜನೆಗಳಿಂದ ಹಣ ಕ್ರೋಡೀಕರಿಸಿ ಕೂಡಲೆ ಮಂಜೂರು ಮಾಡಬೇಕು. ಎಲ್ಲಾ ಸಿಬ್ಬಂದಿಗಳಿಗೆ ಪೆನ್ಷನ್ ಮಂಜೂರು ಮಾಡಬೇಕು. 15 ತಿಂಗಳ ಗ್ರಾಟ್ಯೂಟಿ ನೀಡಬೇಕು ಎಂದು ಸಿ.ಐ.ಟಿ.ಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಒತ್ತಾಯಿಸಿದರು.

ಕೆಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸರ್ಕಾರದ ಆದೇಶವನ್ನು ಪಾಲಿಸುತ್ತಿಲ್ಲ. ತೆರಿಗೆ ಸಂಗ್ರಹದಲ್ಲಿ ಶೇ.40ರಷ್ಟನ್ನು ಸಿಬ್ಬಂದಿಗೆ ವೇತನ ನೀಡಬೇಕು. ನಿವೃತ್ತಿಯಾದವರಿಗೆ ಉಪಧನ ನೀಡಬೇಕು. ಇಂತಹ ಅನೇಕ ಸೌಲಭ್ಯಗಳನ್ನು ಹೊಂದಲು ಪ್ರಸ್ತಾವನೆಗಳನ್ನು ಸಲ್ಲಿಸುತ್ತಿಲ್ಲ. ಈ ಬಗ್ಗೆ ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಪಿಡಿಓ ಗಳ ಸಭೆ ಕರೆದು ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ಒತ್ತಾಯಿಸಿದರು.

ವಿವಿಧ ಬೇಡಿಕೆಗಳ ಪಟ್ಟಿಯನ್ನು ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಡಾ.ಆನಂದ್ ಮೂರ್ತಿ ಅವರ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಿಐಟಿಯು ತಾಲೂಕು ಅಧ್ಯಕ್ಷ ನವೀನ್, ಪದಾಧಿಕಾರಿಗಳಾದ ಜಯರಾಮ್, ಬಾಬು, ಸೋಮಯ್ಯ, ಕುಮಾರ್, ಮಹಾಲಿಂಗ ಮತ್ತಿತರರು ಭಾಗವಹಿಸಿದ್ದರು.