ಮಡಿಕೇರಿ, ಜು. 8: ದೇಶಾದ್ಯಂತ ವ್ಯಾಪಿಸುತ್ತಿರುವ ಕೊರೊನಾದಿಂದ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಹಸಿರು ವಲಯವಾಗಿದ್ದ ಕೊಡಗು ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ತಾ. 4 ರಂದು ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೊದಲ ವ್ಯಕ್ತಿ ಬಲಿಯಾದರು. ಸರಕಾರದ ನಿಯಮದಂತೆ ಶವಸಂಸ್ಕಾರಕ್ಕೆ ಅನುಸರಿಸಬೇಕಾದ ಕ್ರಮಗಳನ್ನು ಅನುಸರಿಸಿ ಬಳಿಕ ಮಡಿಕೇರಿ ಜಾಮಿಯಾ ಮಸೀದಿ ಆಡಳಿತ ಮಂಡಳಿಗೆ ಸೇರಿದ ಈದ್ಗಾ ಮೈದಾನದ ಜಾಗದಲ್ಲಿ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲಾಯಿತು. ಆರೋಗ್ಯ ಕಾರ್ಯಕರ್ತರು ಸೇರಿದಂತೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ದ 5 ಸ್ವಯಂ ಸೇವಕರು ಪಿ.ಪಿ.ಐ. ಕಿಟ್ ಸೇರಿದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿದರು. ಜೆಸಿ.ಬಿ. ಮೂಲಕ ಗುಂಡಿ ತೋಡಿ ಸಂಪೂರ್ಣವಾಗಿ ಮುಚ್ಚಲ್ಪಟ್ಟ ಮೃತದೇಹವನ್ನು ಹೂಳಲಾಯಿತು.

ಸ್ವಯಂ ಸೇವಕರಿಂದ ಜಿಲ್ಲಾಡಳಿತಕ್ಕೆ ಸಾಥ್

ಇತ್ತೀಚೆಗಷ್ಟೆ ಬಳ್ಳಾರಿಯಲ್ಲಿ ಸೋಂಕಿತರ ಮೃತದೇಹವನ್ನು ಅಮಾನವೀಯ ರೀತಿಯಲ್ಲಿ ಶವಸಂಸ್ಕಾರ ಮಾಡಿದ ಬಗ್ಗೆ ಆರೋಪಗಳು ಕೇಳಿಬಂದಿದ್ದವು. ಬೆಂಗಳೂರಿನಲ್ಲಿ ಅನಾಥವಾಗಿ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಮೃತದೇಹದ ವೀಡಿಯೋ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಆದರೆ ಕೊಡಗು ಜಿಲ್ಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸುಮಾರು 100ಕ್ಕೂ ಅಧಿಕ ಸ್ವಯಂ ಸೇವಕರು ಜಿಲ್ಲಾಡಳಿತಕ್ಕೆ ಸಹಾಯ ನೀಡಲು ಮುಂದಾಗಿದ್ದು ಗೌರವಾನ್ವಿತ ರೀತಿಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಕ್ರಿಯೆಗೆ ಮುಂದಾಗಿದ್ದಾರೆ.

ಪಿ.ಎಫ್.ಐ.ನಿಂದ ಸುಮಾರು 30 ಮಂದಿ ಸ್ವಯಂ ಸೇವಕರು ಅಂತ್ಯಕ್ರಿಯೆಯ ಕಾರ್ಯಕ್ಕೆ ಸಿದ್ಧರಿದ್ದಾರೆ. ಮೃತರ ಜಾತಿ-ಮತ ಯಾವುದನ್ನೂ ಪರಿಗಣಿಸದೆ ಅಂತ್ಯಸಂಸ್ಕಾರಕ್ಕೆ ಪಿ.ಎಫ್.ಐ. ಸ್ವಯಂ ಸೇವಕರು ಸಹಕರಿಸುವುದಾಗಿ ಘೋಷಿಸಿದ್ದಾರೆ. ಜಿಲ್ಲಾಡಳಿತದಿಂದ ಅಂತ್ಯಕ್ರಿಯೆ ಮಾಡುವವರಿಗೆ ಪಿ.ಪಿ.ಐ. ಕಿಟ್ ನೀಡಲಾಗುತ್ತಿದೆ. ಅಂತ್ಯಕ್ರಿಯೆ ನೆರವೇರಿಸಿದ ಸ್ವಯಂ ಸೇವಕರು, ಮುಂಜಾಗ್ರತಾ ಕ್ರಮವಾಗಿ ತಮ್ಮ ತಮ್ಮ ಮನೆಗಳಲ್ಲಿಯೇ ಪ್ರತ್ಯೇಕವಾಗಿ ತಂಗಲಿದ್ದಾರೆ ಎಂದು ಜಿಲ್ಲಾ ಪಿ.ಎಫ್.ಐ. ಅಧ್ಯಕ್ಷ ಅಮೀನ್ ಮೊಹಿಸೀನ್ ಮಾಹಿತಿ ನೀಡಿದ್ದಾರೆ.

ಸೇವಾಭಾರತಿ ಸಂಘದಿಂದ ಸುಮಾರು 60 ಸ್ವಯಂ ಸೇವಕರು ಮೃತರ ಅಂತ್ಯಕ್ರಿಯೆಗೆ ಸಿದ್ಧರಿರುವುದಾಗಿ ಜಿಲ್ಲಾಡಳಿತಕ್ಕೆ ಹೆಸರುಗಳನ್ನು ನೀಡಿದೆ. ಇನ್ನು 2 ದಿನಗಳಲ್ಲಿ ಜಿಲ್ಲಾಡಳಿತದಿಂದ ಅಂತ್ಯಕ್ರಿಯೆ ಸಂಬಂಧ ತರಬೇತಿ ನೀಡಲಾಗುತ್ತದೆ ಎಂದು ಸೇವಾಭಾರತಿಯ ಚಂದ್ರ ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಪ್ರತಿ ತಾಲೂಕಿನಲ್ಲಿ 8 ಡಿ-ಗ್ರೂಪ್ ನೌಕರರಿಗೆ ಶವಸಂಸ್ಕಾರ ಸಂಬಂಧ ತರಬೇತಿ ನೀಡಲಾಗಿದ್ದು, ಸ್ವಯಂಸೇವಕರು, ವಿವಿಧ ಸಂಘ-ಸಂಸ್ಥೆಗಳು ಅಧಿಕ ಸಂಖ್ಯೆಯಲ್ಲಿ ಸಹಾಯ ಮಾಡಲು ಕೈಜೋಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.