ಮಡಿಕೇರಿ, ಜು. 8: ಜಿಲ್ಲೆಯಲ್ಲಿ ಕೋವಿಡ್ -19 ಸೋಂಕಿತರು ಸಾವಿಗೀಡಾದರೆ, ಅಂತ್ಯಸಂಸ್ಕಾರ ನಡೆಸುವ ಸಂಬಂಧ ಸೇವೆಗೆ ಧಾವಿಸಲಿರುವ ಸ್ವಯಂ ಸೇವಕರಿಗೆ ಇಂದು ಇಲ್ಲಿನ ವೈದ್ಯಕೀಯ ವಿಜ್ಞಾನ ಸರಕಾರಿ ಕಾಲೇಜಿನ ಸಭಾಂಗಣದಲ್ಲಿ ತರಬೇತಿ ನೀಡಲಾಯಿತು. ಸುಮಾರು 75 ಸ್ವಯಂಸೇವಕರು ವಿವಿಧ ಸಮುದಾಯದಿಂದ ಪಾಲ್ಗೊಂಡಿದ್ದಾಗಿ ಡಿವೈಎಸ್ಪಿ ಬಿ.ಪಿ. ದಿನೇಶ್ಕುಮಾರ್ ತಿಳಿಸಿದ್ದಾರೆ.
‘ಶಕ್ತಿ’ಯೊಂದಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ -19 ಉಸ್ತುವಾರಿ ನೋಡಿಕೊಳ್ಳುತ್ತಿರುವ ಡಾ. ಲೋಕೇಶ್ ಹಾಗೂ ಡಾ. ನರಸಿಂಹ ಅವರುಗಳು, ಮೊದಲ ಹಂತದಲ್ಲಿ ಭಾಗವಹಿಸಿದ್ದ 75 ಮಂದಿಗೆ ಶವ ಸಂಸ್ಕಾರ ವಿಧಾನ ತಿಳಿಸಿದ್ದಾಗಿ ವಿವರಿಸಿದರು.ಜಿಲ್ಲೆಯ ವಿವಿಧೆಡೆಗಳಿಂದ ಸೇವಾಭಾರತಿ, ಭಜರಂಗದಳ, ಪಿಎಫ್ಐ ಸೇರಿದಂತೆ ವಿವಿಧ ಸಮುದಾಯದ ಸ್ವಯಂಸೇವಕರಿಗೆ ಅಗತ್ಯಕ್ಕೆ ಅನುಗುಣವಾಗಿ ಯಾರಾದರೂ ಕೊರೊನಾ ಸೋಂಕಿನಿಂದ ಮೃತರಾದರೆ ತಲಾ ನಾಲ್ವರಂತೆ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವ ಬಗ್ಗೆ ತಿಳಿಸಿರುವದಾಗಿ ಸ್ಪಷ್ಟಪಡಿಸಿದರು.
ಅಂತ್ಯ ಸಂಸ್ಕಾರದಲ್ಲಿ ಸರಕಾರದ ಮಾನದಂಡದೊಂದಿಗೆ ಗೌರವಯುತವಾಗಿ ಮೃತರಾದವರ ದೇಹವನ್ನು ಹೂಳುವುದು, ಸುಡುವದ್ದನ್ನು ಆಯಾ ಪದ್ಧತಿಗೆ ಅನುಸಾರ ನೆರವೇರಿಸುವ ಕುರಿತು ತರಬೇತಿ ನೀಡಲಾಯಿತು. ಸ್ವಯಂ ಸೇವಕರಿಗೆ ಕನ್ನಡಕ, ಮುಖಗವುಸು, ಕೈಗವುಸು, ಶರೀರ ಮುಚ್ಚಿಕೊಳ್ಳಲು ರಕ್ಷಾ ಕವಚದೊಂದಿಗೆ ಅಗತ್ಯ ನೆರವು ಕಲ್ಪಿಸುವ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಲಾಯಿತು. ಪೊಲೀಸ್, ಆರೋಗ್ಯ ತಂಡದಿಂದ ಅಗತ್ಯ ಮಾಹಿತಿ ನೀಡಿದ್ದು, ಮುಂದೆಯೂ ಈ ರೀತಿ ಸ್ವಯಂ ಸೇವಕರಿಗೆ ತರಬೇತಿ ನೀಡಲಾಗುವದು ಎಂದು ಡಿವೈಎಸ್ಪಿ ವಿವರಿಸಿದರು.