ಕೂಡಿಗೆ, ಜು. 6: ಹುದುಗೂರು ಸಮೀಪದ ಯಡವನಾಡು ಗ್ರಾಮದಲ್ಲಿ ಕಳೆದ ರಾತ್ರಿ ಮರಿ ಆನೆ ಸೇರಿದಂತೆ ಹತ್ತಕ್ಕೂ ಹೆಚ್ಚು ಕಾಡಾನೆಗಳು ಈ ವ್ಯಾಪ್ತಿಯ ಅನೇಕ ರೈತರುಗಳ ಜಮೀನಿಗೆ ದಾಳಿ ಮಾಡಿ ಎರಡು ಎಕರೆ ಪ್ರದೇಶದ ಕೆಸ, ಕೇನೆ ಮತ್ತು ಜೋಳದ ಬೆಳೆಗಳನ್ನು ತಿಂದು, ತುಳಿದು ಭಾರೀ ದಾಂಧಲೆ ನಡೆಸಿವೆ.
ಹುದುಗೂರು - ಯಡವನಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಈಗಾಗಲೇ 20ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿವೆ. ಈ ಕಾಡಾನೆಗಳು ರೈತರ ಜಮೀನಿಗೆ ನುಗ್ಗಿ ಬೇಸಾಯ ಮಾಡಿದ ಬೆಳೆಗಳನ್ನು ಹಾಳುಮಾಡಿವೆ.
ಯಡವನಾಡು ಗ್ರಾಮ ಲಿಂಗಪ್ಪ ರಮೇಶ್ ಗಿರೀಶ್ ಸೇರಿದಂತೆ ಅನೇಕ ರೈತರ ಜಮೀನಿನಲ್ಲಿ ಬೆಳೆಸಲಾಗಿದ್ದ ಬೆಳೆಗಳನ್ನು ಹಾಳುಮಾಡಿವೆ. ಸ್ಥಳಕ್ಕೆ ಐಗೂರು ಗ್ರಾಮ ಪಂಚಾಯತಿ ಅಧ್ಯಕ್ಷ ಡಿ.ಎಂ. ರಮೇಶ್ ಮತ್ತು ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ನಷ್ಟದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಕಳೆದ ಆರು ತಿಂಗಳುಗಳಿಂದ ಭಾರೀ ತೊಂದರೆ ಆಗುತ್ತಿದೆ. ಬೇಸಿಗೆಯ ಸಮಯದಲ್ಲಿ ಬೋರ್‍ವೆಲ್ ಮೂಲಕ ನೀರು ಹೊಡೆದು ಬೆಳೆದ ಬೆಳೆ ಕಾಡಾನೆಗಳಿಂದ ನಾಶಗೊಂಡಿವೆ. ಇದರಿಂದಾಗಿ ನಷ್ಟವಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅರಣ್ಯ ಇಲಾಖೆಯವರು ಹುದುಗೂರು ಸಮೀಪದ ಯಡವನಾಡು ಭಾಗಕ್ಕೆ ಸೋಲಾರ್ ವಿದ್ಯುತ್ ಅಳವಡಿಸಲು ಮುಂದಾಗಬೇಕು, ಅಲ್ಲದೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾಡಾನೆ ಹಾವಾಳಿ ಆಗುತ್ತಿರುವ ಯಡವನಾಡು ಪ್ರದೇಶಕ್ಕೆ ರೈಲ್ವೇ ಕಂಬಿಗಳನ್ನು ಅಳವಡಿಸುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.