ಮಡಿಕೇರಿ, ಜು.6 : ವೀರ ಸೇನಾನಿಗಳಾದ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರಿಂದ ಕೊಡಗಿನ ವೀರ ಪರಂಪರೆಗೆ ಶ್ರೇಷ್ಠತೆ ದೊರೆತ್ತಿದ್ದು, ಯುವ ಸಮೂಹ ಇದೇ ಮಾದರಿ ಯನ್ನು ಅನುಸರಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಕರೆ ನೀಡಿದ್ದಾರೆ.
ನಗರದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ನಿರ್ಮಿಸಲಾಗಿರುವ ನೂತನ ಪ್ರವೇಶ ದ್ವಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಪ್ಪ ಹಾಗೂ ತಿಮ್ಮಯ್ಯ ಅವರ ಸೇನೆಯಲ್ಲಿನ ಶ್ರೇಷ್ಠ ಸೇವೆಯಿಂದ ಪುಟ್ಟ ಜಿಲ್ಲೆ ಕೊಡಗನ್ನು ಇಡೀ ವಿಶ್ವವೇ ಗಮನಿಸುವಂತಾಗಿದೆ ಎಂದರು.
ಉತ್ತಮ ಪರಿಸರದೊಂದಿಗೆ ಆರೋಗ್ಯವಾಗಿದ್ದ ಕೊಡಗು ಜಿಲ್ಲೆ ಇಂದು ಕೊರೊನಾ ವೈರಸ್‍ನ ಭೀತಿಯನ್ನು ಎದುರಿಸುತ್ತಿದೆ. ದಿನದಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದರು.
ಹಳೆಯ ವಿದ್ಯಾರ್ಥಿಗಳ ‘ನೆನಪುಗಳ ಮೆಲುಕು’ ವಿಶೇಷ ಸುದ್ದಿ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ವೀಣಾಅಚ್ಚಯ್ಯ ಅವರು, ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದ್ದು, ಇದನ್ನು ತಡೆಗಟ್ಟಲು ಎಲ್ಲರೂ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಯುವ ಜನತೆ ವೈರಸ್ ಬಗ್ಗೆ ಎಚ್ಚೆತ್ತುಕೊಂಡು ಸರ್ಕಾರದ ನಿಯಮಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.
ಕಾಲೇಜು ಪ್ರಾಂಶುಪಾಲ ಡಾ. ಚೌರೀರ ಜಗತ್ ತಿಮ್ಮಯ್ಯ ಮಾತನಾಡಿ, ಹಳೇ ವಿದ್ಯಾರ್ಥಿ ಸಂಘ ಕಾಲೇಜಿಗೆ ಉತ್ತಮ ಕೊಡುಗೆ ನೀಡಿದ್ದು, ಜನಪ್ರತಿನಿಧಿಗಳು ಹಾಗೂ ಹಳೇ ವಿದ್ಯಾರ್ಥಿಗಳು ಕಾಲೇಜಿನ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿಸುವುದಾಗಿ ತಿಳಿಸಿದರು.
ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಪಾರ್ವತಿ ಅಪ್ಪಯ್ಯ, ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.ಇದೇ ಸಂದರ್ಭ ನೂತನ ಪ್ರವೇಶ ದ್ವಾರ ನಿರ್ಮಿಸಿದ ಗುತ್ತಿಗೆದಾರ ರಾಜು ಅವರನ್ನು ಕಿರುಕಾಣಿಕೆ ನೀಡಿ ಗೌರವಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಕಾರ್ಯಕ್ರಮ ನಿರೂಪಿಸಿದರು. ಸದಸ್ಯೆ ಮೊಣ್ಣಂಡ ಶೋಭಾ ಸುಬ್ಬಯ್ಯ ಪ್ರಾರ್ಥಿಸಿ ದರು. ಉಪಾಧ್ಯಕ್ಷ ನಾಟೋಳಂಡ ಚರ್ಮಣ ವಂದಿಸಿದರು.