ವೀರಾಜಪೇಟೆ, ಜು. 6: ಕೊರೊನಾ ಮಹಾಮಾರಿಯು ಅಟ್ಟಹಾಸದಿಂದ ಮೆರೆಯುತ್ತಿರುವ ಕಾರಣ, ಸರಕಾರ ಕೈಗೊಂಡಿರುವ ಲಾಕ್‍ಡೌನ್ ನಿರ್ಬಂಧಕ್ಕೊಳಪಟ್ಟು ಈಗಾಗಲೇ ನಿಗದಿಯಾಗಿರುವ ವಿವಾಹ, ನಿಶ್ಚಿತಾರ್ಥ, ನಾಮಕರಣ, ಗೃಹ ಪ್ರವೇಶ ಮುಂತಾದ ಕಾರ್ಯಕ್ರಮಗಳನ್ನು ಮುಂದೂಡದೆ, ನಿಗದಿತ ದಿನಾಂಕದಂದು ಸರಳವಾಗಿ ನಡೆಸುವಂತೆ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವೀರಾಜಪೇಟೆ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೊಣ್ಣಪ್ಪ ಅವರು ಕೊಡವ ಪದ್ಧತಿಗಳಿಗೆ ಅನುಸಾರವಾಗಿ ಅಥವಾ ಅವರವರ ಪದ್ಧತಿಗಳಿಗೆ ಅನುಗುಣವಾಗಿ ಸಂಪ್ರದಾಯ, ಸಂಸ್ಕøತಿಯನ್ನು ಕಾಪಾಡಿಕೊಂಡು ಅದಕ್ಕೆ ಬದ್ಧವಾಗಿ ಸರಳ ಸಮಾರಂಭ ನಡೆಸಬಹುದು. ಇಂದಿನ ಕೋವಿಡ್ 19 ರ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರಿಗೆ ಅತ್ಯಂತ ಉಪಯುಕ್ತವಾಗಿದ್ದು ದುಂದು ವೆಚ್ಚ, ಆಡಂಬರವಿಲ್ಲದೆ , ಕಡಿಮೆ ಸಂಖ್ಯೆಯ ಆಹ್ವಾನಿತರೊಂದಿಗೆ ಸಮಾರಂಭ ಏರ್ಪಡಿಸಬಹುದಾಗಿದೆ. ಇದರಿಂದ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸಾಂಕ್ರಾಮಿಕ ತಡೆಗೂ ಸಹಕಾರಿಯಾಗಲಿದೆ, ಇದನ್ನು ಕೊಡವ ಜನಾಂಗದ ಎಲ್ಲರೂ ಬೆಂಬಲಿಸಬೇಕು ಎಂದರು.

ಅಖಿಲ ಕೊಡವ ಸಮಾಜದ ಕಾರ್ಯದರ್ಶಿ ಅಮ್ಮಣಿಚಂಡ ರಾಜಾ ನಂಜಪ್ಪ ಮಾತನಾಡಿ, ಅಖಿಲ ಕೊಡವ ಸಮಾಜದ ಸಭಾಂಗಣವನ್ನು ಷರತ್ತುಬದ್ದವಾಗಿ 50 ಜನರ ಮಿತಿಗೊಳಪಟ್ಟು ಕಾರ್ಯಕ್ರಮಗಳಿಗೆ ಆದಷ್ಟು ರಿಯಾಯಿತಿ ದರದಲ್ಲಿ ನೀಡಲು ಸಮಾಜದ ಆಡಳಿತ ಮಂಡಳಿ ನಿರ್ಧಾರ ಮಾಡಿದ್ದು ಆಗತ್ಯ ಉಳ್ಳವರು ಹೆಚ್ಚಿನ ಮಾಹಿತಿಗೆ ಮೊ. 9448476004, 8296130340 ಅನ್ನು ಸಂಪರ್ಕಿಸುಂತೆ ಕೋರಿದರು.

ಗೋಷ್ಠಿಯಲ್ಲಿ ಸಮಾಜದ ಕಾರ್ಯಾಧ್ಯಕ್ಷ ಇಟ್ಟಿರ ಬಿದ್ದಪ್ಪ, ಉಪಾಧ್ಯಕ್ಷ ಅಜ್ಜಿಕುಟ್ಟಿರ ಮಾದಯ್ಯ ಸುಬ್ರಮಣಿ, ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ, ಜಂಟಿ ಕಾರ್ಯದರ್ಶಿ ನಂದೇಟಿರ ರಾಜ ಮಾದಪ್ಪ ಹಾಗೂ ಅಪ್ಪುಮಣಿಯಂಡ ತುಳಸಿ ಕಾಳಪ್ಪ, ಕಾನೂನು ಸಲಹೆಗಾರ ಬಲ್ಯಮಾಡ ಮಾದಪ್ಪ ಉಪಸ್ಥಿತರಿದ್ದರು.