ಭಾಗಮಂಡಲ, ಜು. 5: ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸಿದ ಆರೋಪಿಗಳನ್ನು ಭಾಗಮಂಡಲ ವಲಯ ಅರಣ್ಯಾಧಿಕಾರಿಗಳು ಪತೆಹಚ್ಚಿ ಬಂಧಿಸಿದ್ದಾರೆ. ಸಮೀಪದ ಬಿ.ಬಾಡಗ ಗ್ರಾಮದಲ್ಲಿನ ಕಾಫಿ ಬೆಳೆಗಾರ ರವಿಕುಮಾರ್ ಅವರ ಕಾಫಿ ತೋಟದ ಬೃಹದಾಕಾರದ ಹೆಬ್ಬಲಸು ಮರವನ್ನು ಕತ್ತರಿಸಿ ರಸ್ತೆ ಬದಿಯಲ್ಲಿ ಸಾಗಾಟಕ್ಕೆ ಇರಿಸಿರುವುದನ್ನು ಗಮನಿಸಿದ ಅರಣ್ಯ ಅಧಿಕಾರಿಗಳು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ನಾಪೋಕ್ಲು ಸಮೀಪದ ಕೊಟ್ಟಮುಡಿಯ ಅಬ್ದುಲ್ಲ (32) ಹಾಗೂ ಜೈನುದ್ದೀನ್ (38) ಬಂಧಿತ ಆರೋಪಿಗಳು.

ತೋಟದ ಮಾಲೀಕ ರವಿಕುಮಾರ್ ಮಂಗಳೂರಿನಲ್ಲಿ ವಾಸವಾಗಿದ್ದರು. ಗ್ರಾಮದಲ್ಲಿ ಭಾಗಮಂಡಲ ಉಪವಲಯದ ಉಪವಲಯ ಅರಣ್ಯಾಧಿಕಾರಿ ಮಂಜುನಾಥ್ ನಾಯಕ್, ಅರಣ್ಯ ರಕ್ಷಕ ಸಚಿನ್ ಪೋಲುರ್ ಹಾಗೂ ಅರಣ್ಯ ವೀಕ್ಷಕ ವಾಸುದೇವ ತಂಡ ಗಸ್ತು ತಿರುಗುತ್ತಿದ್ದಾಗ ಈ ಕೃತ್ಯ ಗೋಚರಿಸಿದ್ದು, ವಿಚಾರಣೆ ನಡೆಸಿದ್ದಾರೆ. ಡಿಸಿಎಫ್ ಎಸ್.ಪ್ರಭಾಕರನ್, ಎಸಿಎಫ್ ನೀಲೇಶ್ ಶಿಂದೆ ಹಾಗೂ ಆರ್ ಎಫ್‍ಒ ದೇವರಾಜ್ ಮಾರ್ಗದರ್ಶನದಲ್ಲಿ ಆರು ಹೆಬ್ಬಲಸು ನಾಟಾಗಳನ್ನು ಹಾಗೂ ಮಾರುತಿ ಸುಜುಕಿ ಬೊಲೆರೊ ವಾಹನವನ್ನು (ಕೆಎ12ಎಂಎ 6703) ವಶಕ್ಕೆ ಪಡೆದು ಆರೋಪಿಗಳನ್ನು ಬಂದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಶ್ರೀಧರ್ ಜೆ.ಕೆ. ಸುರೇಶ್ ಎಂ.ಬಿ. ಹಾಗೂ ಅರಣ್ಯ ರಕ್ಷಕ ವಾಗೀಶಯ್ಯ ಪಾಲ್ಗೊಂಡಿದ್ದರು.