ವೀರಾಜಪೇಟೆ, ಜು. 5 : ವೀರಾಜಪೇಟೆಯ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಕೊರೊನಾ ವಾರಿಂiÀiರ್ಸ್‍ಗಳಿಗೆ ಸತ್ಕಾರ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಇಂದು ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿತ್ತು.

ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ವಿಶ್ವನಾಥ್ ಸಿಂಪಿ ಮಾತನಾಡಿ ಕೊರೊನಾ ವೈರಸ್ ಇಡೀ ಜಗತ್ತನ್ನೇ ಆವರಿಸಿದೆ. ಕೊರೊನಾ ಸೋಂಕಿಗೆ ಮದ್ದಿಲ್ಲದ ಕಾರಣ ಬಾಯಿ,ಮೂಗನ್ನು ಮುಚ್ಚಿ ಪರಸ್ಪರ ಅಂತರ ಕಾಯ್ದು ಕೊಳ್ಳುವುದರ ಜತೆಗೆ ನಿರಂತರವಾಗಿ ಕೈಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸಿಕೊಳ್ಳುವುದರಿಂದ ಸೋಂಕು ಹರಡದಂತೆ ತಡೆಯಬಹುದು. ಹತ್ತು ವರ್ಷದ ಒಳಗೆ ಅರವತ್ತು ವರ್ಷದ ಮೇಲ್ಪಟ್ಟವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಆದಷ್ಟು ಎಚ್ಚರ ವಹಿಸುವುದು ಉತ್ತಮ ಎಂದು ಹೇಳಿದರು.

ಹಿರಿಯ ನಾಗರಿಕರ ವೇದಿಕೆ ಮಾಜಿ ಅಧ್ಯಕ್ಷ ಬಿ.ಬಿ ನಾಣಯ್ಯ ಮಾತನಾಡಿ ಮಾರಕ ರೋಗ ಕೊರೊನಾದಿಂದ ರಕ್ಷಿಸಿಕೊಳ್ಳಬೇಕಾದರೆ ನಾವೆಲ್ಲರೂ ವೈದ್ಯರಾಗಬೇಕಾಗುತ್ತದೆ. ಪರಸ್ಪರ ಅಂತರ, ಮಾಸ್ಕ್ ಧರಿಸುವುದರ ಮೂಲಕ ಸೋಂಕನ್ನು ತಡೆಗಟ್ಟಲು ಸಾಧ್ಯವಾಗಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ, ಲಾಕ್‍ಡೌನ್ ಸಂದರ್ಭ ಕೊರೊನಾ ಜಾಗೃತಿ ಮುಖ್ಯಸ್ಥರಾಗಿ ಉತ್ತಮ ಕಾರ್ಯ ನಿರ್ವಹಿಸಿದ ಜಿಲ್ಲಾ ವಿಶೇಷಚೇತನ ಕಲ್ಯಾಣಾಧಿಕಾರಿ ಸಂಪತ್ ಕುಮಾರ್, ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ವಿಶ್ವನಾಥ್ ಸಿಂಪಿ, ಅಂಚೆ ಅಧಿಕಾರಿ ಪಟ್ಟಚೆರವಂಡ ಎಸ್ ಮುದ್ದಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ ಶ್ರೀಧರ್, ಮಾದ್ಯಮ ಕ್ಷೇತ್ರದಲ್ಲಿ ಪಳೆಯಂಡ ಪಾರ್ಥಚಿಣ್ಣಪ್ಪ, ಕೊರೊನಾ ಸೇನಾನಿಗಳಾದ ಶುಶ್ರೂಷಕಿ ಕೊಲ್ಲಿರ ರೂಪ, ಅಂಗನವಾಡಿ ಕಾರ್ಯಕರ್ತೆ ಕುಡಿಯರ ಗೋಪಮ್ಮ, ಆಶಾ ಕಾರ್ಯಕರ್ತೆ ವಸಂತಿ, ಸಫಾಯಿ ಕರ್ಮಚಾರಿ ಹೆಚ್.ಎ. ರಾಧ, ಹೋಂಗಾರ್ಡ್‍ಗಳಾದ ಶಫೀನಾ ಭಾನು, ಸಿಎಲ್ ಬೇಬಿ, ಪೊಲೀಸ್ ಇಲಾಖೆಯ ನಂಬುಡುಮಾಡ ಕಾಳಯ್ಯ, ಅಂಚೆ ಇಲಾಖೆಯ ಪುದಿನೆರವನ ನಾಣಯ್ಯ ಇವರುಗಳನ್ನು ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷ ಮುಲ್ಲೆಂಗಡ ಶಂಕರಿ ಪೊನ್ನಪ್ಪ ವಹಿಸಿದ್ದರು.

ಇದೇ ಸಮಾರಂಭದಲ್ಲಿ ಮುಲ್ಲೆಂಗಡ ಶಂಕರಿ ಪೊನ್ನಪ್ಪ ಹಿರಿಯ ನಾಗರಿಕ ವೇದಿಕೆಯ ಕುಂದು ಕೊರತೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಮನವಿಯನ್ನು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗೆ ಸಲ್ಲಿಸಿದರು

ವೇದಿಕೆಯಲ್ಲಿ ಹಿರಿಯ ವೈದ್ಯ ಡಾ ದುರ್ಗಾ ಪ್ರಸಾದ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸಂಪತ್ ಕುಮಾರ್, ಉದ್ಯಮಿ ಖಾದರ್ ಬಾಷ, ವೇದಿಕೆಯ ಮಾಜಿ ಅಧ್ಯಕ್ಷರಾದ ನಾಯಡ ವಾಸು ನಂಜಪ್ಪ, ಮಹಿಳಾ ಸಮಾಜದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಉಪಸ್ಥಿತರಿದ್ದರು.